ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BMTC ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ: ಆರೋಪಿ ಬಂಧನ

* ಕುಮಾರಸ್ವಾಮಿ ಲೇಔಟ್‌ನಲ್ಲಿ ಘಟನೆ * ಬಿಎಂಟಿಸಿ ನಿಲ್ದಾಣದಲ್ಲಿ ತಂಗಿದ್ದ ಸಿಬ್ಬಂದಿ
Published 7 ಏಪ್ರಿಲ್ 2024, 16:06 IST
Last Updated 7 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ ನಿಲ್ದಾಣದಲ್ಲಿ ರಾತ್ರಿ ತಂಗಿದ್ದ BMTC ಬಸ್‌ನ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪಿ ನಂದ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಏಪ್ರಿಲ್ 4ರಂದು ತಡರಾತ್ರಿ ನಡೆದಿದ್ದ ಹಲ್ಲೆ ಬಗ್ಗೆ ಚಾಲಕ ನಾಗೇಂದ್ರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಆರೋಪಿ ನಂದನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಜಾನ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಮಾರ್ಗ ಸಂಖ್ಯೆ 15ಇ/2ರ ಎಲೆಕ್ಟ್ರಿಕ್ ಬಸ್‌ನಲ್ಲಿ ಏಪ್ರಿಲ್ 4ರಂದು ಚಾಲಕ ನಾಗೇಂದ್ರ ಕರ್ತವ್ಯದಲ್ಲಿದ್ದರು. ತಡರಾತ್ರಿ ಕರ್ತವ್ಯದ ಅವಧಿ ಮುಗಿದಿದ್ದರಿಂದ, ಕುಮಾರಸ್ವಾಮಿ ಲೇಔಟ್‌ ನಿಲ್ದಾಣದಲ್ಲಿ ಬಸ್‌ ಸಮೇತ ತಂಗಿದ್ದರು. ಬಸ್‌ನಲ್ಲಿಯೇ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು’ ಎಂದು ತಿಳಿಸಿದರು.

‘ಪಾನಮತ್ತರಾಗಿದ್ದ ನಂದ ಹಾಗೂ ಸ್ನೇಹಿತರು ನಿಲ್ದಾಣಕ್ಕೆ ತಡರಾತ್ರಿ ಬಂದಿದ್ದರು. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುತ್ತಿದ್ದರು. ಅದನ್ನು ಕೇಳಿಸಿಕೊಂಡಿದ್ದ ಚಾಲಕ ನಾಗೇಂದ್ರ, ಎಚ್ಚರಗೊಂಡು ಬಸ್‌ನಿಂದ ಇಳಿದು ಆರೋಪಿಗಳ ಬಳಿ ಹೋಗಿದ್ದರು. ‘ನಿಲ್ದಾಣದಲ್ಲಿ ಗಲಾಟೆ ಮಾಡಬೇಡಿ. ಹೊರಟು ಹೋಗಿ’ ಎಂದು ಕೋರಿದ್ದರು.’

‘ನಾಗೇಂದ್ರ ವಿರುದ್ಧವೇ ತಿರುಗಿಬಿದ್ದಿದ್ದ ಆರೋಪಿಗಳು, ‘ಇದು ನಮ್ಮ ಪ್ರದೇಶದ ನಿಲ್ದಾಣ. ಅದನ್ನು ಕೇಳಲು ನೀನು ಯಾರು?’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮಾತಿಗೆ ಮಾತು ಬೆಳೆದು, ಜಗಳ ಶುರುವಾಗಿತ್ತು. ಆರೋಪಿ ನಂದ, ಚಾಲಕ ನಾಗೇಂದ್ರ ಅವರ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದ. ನಂತರ, ಸಮೀಪದಲ್ಲಿದ್ದ ಎಳನೀರು ಅಂಗಡಿಯಿಂದ ಮಚ್ಚು ತಂದು ನಾಗೇಂದ್ರ ಮೇಲೆ ಬೀಸಲು ಮುಂದಾಗಿದ್ದ. ನಾಗೇಂದ್ರ ತಮ್ಮ ಕೈ ಅಡ್ಡ ಹಿಡಿದಿದ್ದರು. ಇದರಿಂದಾಗಿ ಕೈ ಹೆಬ್ಬೆರಳಿಗೆ ಮಚ್ಚಿನೇಟು ಬಿದ್ದಿತ್ತು’ ಎಂದು ಪೊಲೀಸರು ಹೇಳಿದರು.

‘ಚಾಲಕನ ರಕ್ಷಣೆಗೆ ಹೋಗಿದ್ದ ನಿರ್ವಾಹಕನಿಗೂ ಮಚ್ಚು ತೋರಿಸಿ ಆರೋಪಿಗಳು ಬೆದರಿಸಿದ್ದರು. ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ತಪ್ಪಿಸಿಕೊಂಡಿದ್ದರು. ನಾಗೇಂದ್ರ ಅವರನ್ನು ನಿರ್ವಾಹಕನೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಾಗೇಂದ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ತಿಳಿಸಿದರು.

ಅಪರಾಧ ಹಿನ್ನೆಲೆಯುಳ್ಳವ

‘ನಂದನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಆದರೆ, ತಲೆಮರೆಸಿಕೊಂಡಿರುವ ಜಾನ್ ಅಪರಾಧ ಹಿನ್ನೆಲೆಯುಳ್ಳವ. ಈತನ ಮೇಲೆ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT