ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್‌ ಸೇವೆ ಭಾಗಶಃ ಮಾತ್ರ

Last Updated 23 ಮಾರ್ಚ್ 2020, 3:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಪ್ರಯಾಣಿಕರ ಅಗತ್ಯ ಸೇವೆಗಾಗಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಬಿಎಂಟಿಸಿ ನಿರ್ಧರಿಸಿದೆ.ಆಟೋರಿಕ್ಷಾಗಳು, ಆ್ಯಪ್ ಆಧಾರಿತ ಟ್ಯಾಕ್ಸಿ ಸಂಚಾರ ಕೂಡ ವಿರಳವಾಗಿ ಇರಲಿದೆ.

ಎಲ್ಲಾ ಹವಾನಿಯಂತ್ರಿತ ಬಸ್‌ಗಳ ಕಾರ್ಯಾಚರಣೆಯನ್ನು ಮಾ.31ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ.
ಸಂಚಾರ ದಟ್ಟಣೆ ಮತ್ತು ಪ್ರಯಾಣಿಕರ ಅವಶ್ಯಕತೆಗೆ ಅನುಗುಣವಾಗಿ ಶೇ 50ರಷ್ಟು ಸಾಮಾನ್ಯ ಸಾರಿಗೆ ಸೌಲಭ್ಯವನ್ನು ಮಾತ್ರ ಕಲ್ಪಿಸಲಾಗುವುದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

‘ಆ್ಯಪ್ ಆಧಾರಿತ ಟ್ಯಾಕ್ಸಿ ಸಂಚಾರ ವಿರಳ ಸಂಖ್ಯೆಯಲ್ಲಿ ಇರಲಿದೆ. ಕಾರ್ಯಾಚರಣೆ ನಡೆಸಬೇಕು ಅಥವಾ ಬೇಡ ಎಂಬ ಯಾವುದೇ ಸೂಚನೆಯನ್ನೂ ಚಾಲಕರಿಗೆ ನೀಡಿಲ್ಲ. ಅತೀ ಅಗತ್ಯ ಎನಿಸಿದವರು ಮಾತ್ರ ರಸ್ತೆಗೆ ಇಳಿಯಬಹುದು. ಅಗತ್ಯ ತುರ್ತು ಸೇವೆಗಳಿಗಾಗಿ ಮಾತ್ರ ಕಾರ್ಯಾಚರಣೆ ನಡೆಸುವಂತೆ ಚಾಲಕರಿಗೆ ತಿಳಿಸಲಾಗಿದೆ’ ಎಂದು ಓಲಾ ಮತ್ತು ಉಬರ್ ಚಾಲಕರು ಮತ್ತು
ಮಾಲೀಕರ ಸಂಘದ ಅಧ್ಯಕ್ಷ ಪಾಷಾ ಹೇಳಿದರು.

ಆಟೋರಿಕ್ಷಾ ಸಂಚಾರ ಕೂಡ ಬಹುತೇಕ ಇರುವುದಿಲ್ಲ. ಅಗತ್ಯ ಸೇವೆಗಳಿಗಾಗಿ ಕಡಿಮೆ ಸಂಖ್ಯೆಯ ರಿಕ್ಷಾಗಳು ರಸ್ತೆಗೆ ಇಳಿಯಬಹುದು ಎಂದು ಆಟೋರಿಕ್ಷ ಚಾಲಕರ ಸಂಘ ತಿಳಿಸಿದೆ.

ಒಂದೇ ದಿನ ₹9 ಕೋಟಿ ಖೋತಾ

ಕೆಎಸ್‌ಆರ್‌ಟಿಸಿಯ ಒಂದೇ ಬಸ್ ಕೂಡ ಭಾನುವಾರ ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ನಿಗಮದ ವರಮಾನದಲ್ಲಿ ಒಂದೇ ದಿನ ₹ 9 ಕೋಟಿ ಖೋತಾ ಆಗಿದೆ. ಮಾ.1ರಿಂದ ಈವರೆಗೆವರಮಾನದಲ್ಲಿ ₹28 ಕೋಟಿ ಖೋತಾ ಆಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಮಾರ್ಚ್‌ 31ರವರೆಗೆ ಮೆಟ್ರೊ ರೈಲು ಸಂಚಾರ ಸಂಪೂರ್ಣ ಸ್ಥಗಿತ

ನಗರದಲ್ಲಿ ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಮಾರ್ಚ್‌ 31ರವರೆಗೆ ಮೆಟ್ರೊ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.

ಮೆಟ್ರೊ ನಿಲ್ದಾಣದಲ್ಲಿನ ವಾಹನ ನಿಲುಗಡೆ ಪ್ರದೇಶ ಹಾಗೂ ವಾಣಿಜ್ಯ ಮಳಿಗೆಗಳನ್ನೂ ಮುಚ್ಚಲಾಗುವುದು ಎಂದು ನಿಗಮ ಹೇಳಿದೆ.

ಸಮಸ್ಯೆ ಅನಿವಾರ್ಯ:ಮೆಟ್ರೊ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿರುವುದರಿಂದ ತುರ್ತು ಅಗತ್ಯಗಳಿಗೆ ಹೊರಗಡೆ ಹೋಗಲೇಬೇಕಾದ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೆ, ತುರ್ತು ಸೇವೆ ಒದಗಿಸುವವರೂ ತೊಂದರೆ ಅನುಭವಿಸಬೇಕಾಗುತ್ತದೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ ಸಂಚರಿಸಲು ಪರ್ಯಾಯ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

4.5 ಲಕ್ಷ ಜನ ಅವಲಂಬನೆ: ನಗರದಲ್ಲಿ ನಿತ್ಯ 4.5 ಲಕ್ಷ ಜನ ಮೆಟ್ರೊ ರೈಲನ್ನು ಅವಲಂಬಿಸಿದ್ದರು. ಈಗ ಹಲವು ಕಂಪನಿಗಳು ಮನೆಯಲ್ಲಿಯೇ ಕೆಲಸ ಮಾಡುವ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ ಹಾಗೂ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿತ್ತು.

ಮೆಟ್ರೊ ವಾಣಿಜ್ಯ ಕಾರ್ಯಾಚರಣೆಯಿಂದ ನಿತ್ಯ ಸರಿ ಸುಮಾರು ₹1 ಕೋಟಿ ವರಮಾನ ಗಳಿಸುತ್ತಿದ್ದ ನಿಗಮವು ಕಳೆದೆರಡು ವಾರಗಳಿಂದ ನಷ್ಟ ಅನುಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT