ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿಗಿರಿ’: ಹೋರಾಟ ತೆರೆದಿಡುವ ಪುಸ್ತಕ

ಗುಲಾಬಿ ಹೂಗಳನ್ನು ಕೊಟ್ಟು ನಿವೇಶನಗಳ ದಾಖಲೆ ಪಡೆದುಕೊಂಡ ಅನುಭವ ಕಥನ
Published 26 ಫೆಬ್ರುವರಿ 2024, 0:30 IST
Last Updated 26 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಚ್ಚಿದಾನಂದ ನಗರದ ನಿವಾಸಿಗಳ ‘ಗಾಂಧಿಗಿರಿ’ ಹೋರಾಟದ ಚಿತ್ರಣವನ್ನು ತೆರೆದಿಡುವ ‘ಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹ’ ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.

ತಮ್ಮ ನಿವೇಶನಗಳ ಕಂದಾಯ ದಾಖಲೆಗಳನ್ನು ಪಡೆಯಲು ಸಚ್ಚಿದಾನಂದ ನಗರದವರು ಅನುಭವಿಸಿದ್ದ ಯಾತನೆ ಹಾಗೂ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ 14 ವರ್ಷಗಳ ಹೋರಾಟವು ಈ ಪುಸ್ತಕದಲ್ಲಿ ಅಡಕವಾಗಿದೆ. 

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಿ.ವಿ. ಗುರುಪ್ರಸಾದ್ ಅವರು ಪುಸ್ತಕ ಬಿಡುಗಡೆ ಮಾಡಿದರು.

‘ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ’ ಹೆಸರಿನಲ್ಲಿ ಆರಂಭವಾದ ಹೋರಾಟದ ಬಗ್ಗೆ ಮಾತನಾಡಿದ ಡಾ. ಶಂಕರ್ ಕೆ. ಪ್ರಸಾದ್, ‘ನಮ್ಮ ಹಕ್ಕು ಕೇಳಲು 2009ರಲ್ಲಿ ಮನೆಯೊಂದರಲ್ಲಿ ಆಂದೋಲನದ ಮೊದಲ ಸಭೆ ನಡೆಯಿತು. ಅಂದು 900 ಮಂದಿ ಹೋರಾಟದಲ್ಲಿದ್ದರು. 14 ವರ್ಷಗಳ ಹೋರಾಟದಿಂದ ಹಲವರಿಗೆ ಭೂ ದಾಖಲೆಗಳು ಸಿಕ್ಕಿವೆ. ಆದರೆ, ಕೆಲವರು ಇಂದಿಗೂ ದಾಖಲೆ ಪಡೆಯಲು ಹೋರಾಡುತ್ತಲೇ ಇದ್ದಾರೆ’ ಎಂದು ತಿಳಿಸಿದರು.

‘ಗಂಭೀರ ಸ್ವರೂಪದ ಹೋರಾಟ ನಮ್ಮದಾಗಿರಲಿಲ್ಲ. ಗಾಂಧಿಗಿರಿಯ ಹೋರಾಟ ನಮ್ಮದಾಗಿತ್ತು. ಗುಲಾಬಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದೆವು. ಗುಮಾಸ್ತನಿಂದ ಹಿಡಿದು ಹಿರಿಯ ಅಧಿಕಾರಿಗೂ ಗುಲಾಬಿ ಕೊಟ್ಟು, ನಮ್ಮ ಸಮಸ್ಯೆ ಬಗೆಹರಿಸುವಂತೆ ಕೋರುತ್ತಿದ್ದೆವು. ಅಧಿಕಾರಿಗಳು, ಜನಪ್ರತಿನಿಧಿಗಳು, ವಕೀಲರು, ನ್ಯಾಯಾಲಯ, ಪತ್ರಿಕಾ ಸಂಸ್ಥೆಗಳು ಎಲ್ಲ ಕಡೆಯೂ ಅಲೆದಾಡಿದ್ದೆವು. ಯಾರಿಗೂ ಒಂದು ಪೈಸೆ ಲಂಚ ನೀಡಲು ನಾವು ತಯಾರಿರಲಿಲ್ಲ’ ಎಂದು ಹೇಳಿದರು.

‘ಪರಿಸ್ಥಿತಿ ಕೈ ಮೀರಿ ಹೋದಾಗ, ಬಿಬಿಎಂಪಿ ಮುಖ್ಯ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದೆವು. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗಿದ್ದ ಸಿಬ್ಬಂದಿ, ರಾತ್ರಿ ಕಚೇರಿಗೆ ಓಡೋಡಿ ಬಂದರು. ತಡರಾತ್ರಿಯವರೆಗೂ ಕೆಲಸ ಮಾಡಿ ನಮಗೆ ಖಾತೆ ದಾಖಲೆ ಮಾಡಿಕೊಟ್ಟರು. ಇದು ನಮಗೆ ಸಿಕ್ಕ ದೊಡ್ಡ ಗೆಲುವಾಗಿತ್ತು. ಹೋರಾಟದ ಪ್ರತಿಯೊಂದು ಹಂತವನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಇಂದಿನ ಸಮಾಜದ ಪ್ರತಿಯೊಬ್ಬ ನಾಗರಿಕರು, ತಮ್ಮ ಹಕ್ಕಿನ ಬಗ್ಗೆ ತಿಳಿಯಲು ಈ ಪುಸ್ತಕ ಓದಬೇಕು. ಸಮಾಜದಲ್ಲಿ ಹೊಸ ಬದಲಾವಣೆ ತರಬೇಕು’ ಎಂದು ಅವರು ಕೋರಿದರು.

ಡಿ.ವಿ.ಗುರುಪ್ರಸಾದ್ ಮಾತನಾಡಿ, ‘ಎಲ್ಲರೂ ಸ್ವಾರ್ಥಿಗಳಾಗಿದ್ದಾರೆ. ಮಾನವೀಯ ಮೌಲ್ಯ ಕಳೆದುಕೊಂಡಿದ್ದಾರೆ. ಇನ್ನಾದರೂ ಎಲ್ಲರೂ ಬದಲಾಗಬೇಕು. ನಮ್ಮ ಕೆಲಸ ಆಗಲಿ ಬಿಡಲಿ, ಯಾರಿಗೂ ಲಂಚ ಕೊಡುವುದಿಲ್ಲವೆಂದು ಶಪಥ ಮಾಡಿ, ಅದರಂತೆ ನಡೆದುಕೊಳ್ಳಬೇಕು’ ಎಂದರು.

ನೀತಿ ಶಿಕ್ಷಣದ ಪಾಠ ಅಗತ್ಯ:

ವರ್ಚುವಲ್ ವೇದಿಕೆಯಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ‘ಭ್ರಷ್ಟಾಚಾರ ಹೆಚ್ಚಳಕ್ಕೆ ಸಮಾಜವೇ ಕಾರಣವಾಗುತ್ತಿದೆ. ಶ್ರೀಮಂತಿಕೆಗೆ ಬೆಲೆ ಸಿಗುತ್ತಿದೆ. ಪ್ರಾಮಾಣಿಕರಿಗೆ ಸಮಾಜ ಗೌರವ ನೀಡುತ್ತಿಲ್ಲ. ದುರಾಸೆಯ ರೋಗ ಹೆಚ್ಚಾಗಿದ್ದು, ಇದರಿಂದಲೇ ಸಮಸ್ಯೆಗಳು ಉದ್ಭವಿಸುತ್ತಿವೆ’ ಎಂದರು.

‘ಮಾನವೀಯ ಮೌಲ್ಯವನ್ನು ನಾವೆಲ್ಲರೂ ಮರೆತಿದ್ದೇವೆ. ನಮ್ಮ ಮಕ್ಕಳಿಗೆ ನೀತಿ ಶಿಕ್ಷಣವನ್ನು ಬೋಧಿಸಬೇಕಿದೆ. ಶಾಲಾ ಪಠ್ಯದಲ್ಲೂ ನೀತಿ ಶಿಕ್ಷಣದ ಪಾಠಗಳನ್ನು ಸೇರಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಪುಸ್ತಕ ಹೆಸರು: ಬೆಂಗಳೂರಿನ ಭೂ ಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹ

ಲೇಖಕರು: ಡಾ. ಶಂಕರ್ ಕೆ. ಪ್ರಸಾದ್ ಹಾಗೂ ಪತ್ರಕರ್ತ ನೆತ್ರಕೆರೆ ಉದಯಶಂಕರ

ಪ್ರಕಾಶಕರು: ಸಂಪೂರ್ಣ ಸ್ವರಾಜ್ ಫೌಂಡೇಶನ್

ಪುಟಗಳು: 637

ಬೆಲೆ: ₹ 695

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT