ಗುರುವಾರ , ಮೇ 19, 2022
20 °C
ಬ್ರಿಟಿಷರಿಂದ ನಿರ್ಮಾಣ l 1868ರಲ್ಲಿ ಕಾರ್ಯಾರಂಭ l ಶಿಥಿಲಾವಸ್ಥೆಯಲ್ಲಿ ಕಟ್ಟಡ

ಬೌರಿಂಗ್ ಆಸ್ಪತ್ರೆ: ಸೇವೆಗೆ ಮೆಚ್ಚುಗೆ, ವರ್ತನೆಗೆ ಬೇಸರ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೋಗಿಗಳು ವಾರ್ಡ್‌ ತಲುಪಲು ಎಷ್ಟು ಬಾರಿ ಬಟನ್ ಒತ್ತಿದರೂ ಬಾಗಿಲು ತೆರೆದುಕೊಳ್ಳದ ಕೆಲ ಲಿಫ್ಟ್‌ಗಳು. ಲಿಫ್ಟ್‌ಗಾಗಿ ಕಾದು ಸುಸ್ತಾಗುವ ರೋಗಿಗಳು ಮತ್ತು ಅವರ ಬಂಧುಗಳು.. 

ಶಿವಾಜಿನಗರದ ಬಸ್‌ ನಿಲ್ದಾಣದ ಸಮೀಪವಿರುವ 150 ವರ್ಷಗಳಿಗೂ ಹಳೆಯದಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪ‍ತ್ರೆಯಲ್ಲಿ ಶನಿವಾರ ಕಂಡುಬಂದ ದುಸ್ಥಿತಿ ಇದು. ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಬರುವ ಈ ಆಸ್ಪತ್ರೆ ನಗರದ ಹಳೆಯ ಆಸ್ಪತ್ರೆಗಳಲ್ಲೊಂದು. ಆಸ್ಪತ್ರೆಯ ಒಳಭಾಗದಲ್ಲಿರುವ ಕಬ್ಬಿಣದ ಸರಳುಗಳೆಲ್ಲ ತುಕ್ಕು ಹಿಡಿದಿವೆ. ಶತಮಾನ ಕಂಡಿರುವ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ.

ಆದರೆ, ಆಸ್ಪತ್ರೆಯಲ್ಲಿ ಸಿಗುತ್ತಿರುವ ಆರೋಗ್ಯ ಸೇವೆಗಳ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ರೋಗಿಗಳು ಮತ್ತು ಅವರ ಸಂಬಂಧಿಗಳು ಇಲ್ಲಿ ಸಿಗುವ ಆರೈಕೆ ಬಗ್ಗೆ ಒಟ್ಟಾರೆಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಕೆಲ ಶುಶ್ರೂಷಕರ ಹಾಗೂ ಸಿಬ್ಬಂದಿ ವರ್ತನೆ ಬಗ್ಗೆ ಅನೇಕರು ಬೇಸರವನ್ನೂ ತೋಡಿಕೊಂಡರು.

‘ಮಧುಮೇಹ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿನ್ನೆಯಷ್ಟೇ ಕಾಲಿನ ಶಸ್ತ್ರಚಿಕಿತ್ಸೆಯೂ ಆಯಿತು. ನನಗೆ ವಯಸ್ಸಾಗಿರುವುದರಿಂದ ದೇಹದ ನೋವು ಸಹಿಸಿಕೊಳ್ಳಲು ಆಗುವುದಿಲ್ಲ. ಆದರೆ, ಈ ವಿಚಾರಕ್ಕೆ ಶುಶ್ರೂಷಕಿಯೊಬ್ಬರು ಏರುದನಿಯಲ್ಲಿ ಗದರುತ್ತಾರೆ. ‘ನೋವು ತಡೆಯಲಾಗದಿದ್ದರೆ, ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಹೊರಡು’ ಎಂದು ಏಕವಚನದಲ್ಲಿ ಬೈಯುತ್ತಾರೆ. ಇವರನ್ನು ನಂಬಿ ಆಸ್ಪತ್ರೆಗೆ ಬಂದಿದ್ದೇವೆ. ಈಗ ಇವರಿಂದ ಬೈಗುಳವೂ ಕೇಳಬೇಕು’ ಎಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿ ಶ್ರೀನಿವಾಸ್‌ ತಮ್ಮ ಸಂಕಟ ಹೊರಹಾಕಿದರು.

‘ಹಿರಿಯ ವೈದ್ಯರು ಚೆನ್ನಾಗಿ ಆರೋಗ್ಯ ವಿಚಾರಿಸುತ್ತಾರೆ. ಅವರಿದ್ದಾಗ ಶುಶ್ರೂಷಕರೂ ಸುಮ್ಮನಿರುತ್ತಾರೆ. ಆಸ್ಪತ್ರೆ ಸಿಬ್ಬಂದಿ ರೋಗಿಗಳೊಂದಿಗೆ ಸೌಮ್ಯವಾಗಿ ವರ್ತಿಸಿದರೆ, ರೋಗಿಗಳಿಗೆ ಕನಿಷ್ಠ ಪಕ್ಷ ನೋವು ತಡೆಯುವ ಧೈರ್ಯವಾದರೂ ಮೂಡುತ್ತದೆ’ ಎಂದರು.

‘ಕ್ಷಯರೋಗ ಸಮಸ್ಯೆಯಿಂದಾಗಿ ಕುಟುಂಬದ ಸದಸ್ಯರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನಾಲ್ಕು ದಿನಗಳಾದರೂ ಚಿಕಿತ್ಸೆ ಆರಂಭಿಸಿಲ್ಲ. ಕೇಳಿದರೆ ಕಫ ಪರೀಕ್ಷೆಯ ವರದಿ ಬರಲು ಒಂದು ವಾರ ಆಗಬಹುದು. ಆನಂತರವೇ ಚಿಕಿತ್ಸೆ ಆರಂಭಿಸುತ್ತೇವೆ ಎಂದು ವೈದ್ಯರು ಹೇಳುತ್ತಾರೆ’ ಎಂದು ಹೆಗಡೆ ನಗರದಿಂದ ಕ್ಷಯರೋಗ ಚಿಕಿತ್ಸೆಗಾಗಿ ಬಂದಿದ್ದ ರೋಗಿಯ ಸಹೋದರಿ ಮುಸ್ಕಾನ್ ತಿಳಿಸಿದರು.

‘ವರದಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಐದು ದಿನಗಳಿಂದ ಬೆಳಿಗ್ಗೆ ಬಂದು ಆಸ್ಪತ್ರೆಯಲ್ಲಿ ಕೂರುವುದು, ಸಂಜೆ ಬಳಿಕ ಮನೆಯತ್ತ ಹೊರಡುವುದೇ ಆಯಿತು. ವೈದ್ಯರು ಚಿಕಿತ್ಸೆ ನೀಡಲು ಬಹಳ ವಿಳಂಬ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಬರುವ ಬಡರೋಗಿಗಳ ನೋವು ಕೇಳುವವರು ಯಾರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಆಹಾರ ವಿತರಣೆಗೆ ಮೆಚ್ಚುಗೆ: ‘ಸಾಮಾನ್ಯ ವಾರ್ಡ್‌ಗಳಲ್ಲಿನ ಬಹುತೇಕ ರೋಗಿಗಳು ಆಸ್ಪತ್ರೆಯಲ್ಲಿ ವಿತರಿಸುವ ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈದ್ಯರಿಂದ ಯಾವುದೇ ಸಮಸ್ಯೆಯಿಲ್ಲ. ಆರೋಗ್ಯ ವಿಚಾರಿಸಿ ಮನೆಯವರಂತೆ ನೋಡಿಕೊಳ್ಳುತ್ತಾರೆ’ ಎಂದೂ ಹೇಳಿದರು.

‘ನಮ್ಮಂಥ ಬಡವರು ಮೂರು ಹೊತ್ತಿನ ಊಟಕ್ಕೂ ಪರದಾಡಬೇಕು. ಆದರೆ, ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ವಿತರಿಸುತ್ತಾರೆ. ಆಹಾರ ರುಚಿಯಿಂದಲೂ ಕೂಡಿರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಊಟ ನೀಡುತ್ತಾರೆ ಎಂದು ಊಹಿಸಿರಲಿಲ್ಲ’ ಎಂದು ಸಾಮಾನ್ಯ ವಾರ್ಡ್‌ನಲ್ಲಿದ್ದ ರೋಗಿಯ ಸಂಬಂಧಿ, ಹೊಸಕೋಟೆಯ ರಂಗಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಇರಲಿಲ್ಲ. ಮಹಿಳಾ ವಾರ್ಡ್‌ನಲ್ಲಿ ಕಸದ ಸಹಿತ ನಿಂತಿದ್ದ ನೀರನ್ನು ಮಧ್ಯಾಹ್ನವಾದರೂ ಸ್ವಚ್ಛಗೊಳಿಸಿರಲಿಲ್ಲ. ಹಾಸಿಗೆಗಳು ಸೇರಿದಂತೆ ಆಸ್ಪತ್ರೆಯಲ್ಲಿದ್ದ ಕೆಲ ಪರಿಕರಗಳು ಹಾಳಾಗಿದ್ದವು.

ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆರೋಗ ಚಿಕಿತ್ಸೆ, ರಕ್ತನಿಧಿ, ಅರಿವಳಿಕೆ, ಎಕ್ಸ್‌ರೇ, ಚರ್ಮ ಚಿಕಿತ್ಸೆ, ಪ್ರಸೂತಿ, ಮಕ್ಕಳ ಶುಶ್ರೂಷೆ, ನೇತ್ರ ಚಿಕಿತ್ಸೆ, ನರವಿಜ್ಞಾನ, ಮೂತ್ರಸಂಬಂಧಿ ರೋಗಗಳ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ರೇಡಿಯೊಥೆರಪಿ, ವಾತ ಚಿಕಿತ್ಸೆ ಸೇರಿದಂತೆ 20ಕ್ಕೂ ಹೆಚ್ಚು ಆರೋಗ್ಯ ಸೇವೆಗಳು ಆಸ್ಪತ್ರೆಯಲ್ಲಿ ಲಭ್ಯ.

ನಿರ್ಮಾಣವಾಗಲಿದೆ ಹೊಸ ಆಸ್ಪತ್ರೆ

‘ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ 500 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಿಸಲು 2022–23ನೇ ರಾಜ್ಯ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿದೆ. ಸುಮಾರು ₹297 ಕೋಟಿ ವೆಚ್ಚದ ಈ ಯೋಜನೆಯ ಕೆಲಸಗಳು ಎರಡು ತಿಂಗಳಲ್ಲಿ ಆರಂಭವಾಗಲಿವೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳು ಲಭ್ಯ’ ಎಂದು ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಡಾ.ಮನೋಜ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದೂವರೆ ಶತಮಾನ ಕಂಡ ಬೌರಿಂಗ್‌ ಆಸ್ಪತ್ರೆ

ಬ್ರಿಟಿಷರು ಹೆಚ್ಚಾಗಿ ವಾಸಿಸುತ್ತಿದ್ದ ಶಿವಾಜಿನಗರ ಪ್ರದೇಶದಲ್ಲಿ 1866ರಲ್ಲಿ ಬೌರಿಂಗ್‌ ಆಸ್ಪತ್ರೆಯ ನಿರ್ಮಾಣ ಕಾರ್ಯ ಶುರುವಾಯಿತು. ಪ್ಯಾರಿಸ್‌ನಲ್ಲಿದ್ದ ಲಾ ರಿಬೋಸಿ ಕಟ್ಟಡದ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ಈ ಆಸ್ಪತ್ರೆಯನ್ನು ಕಟ್ಟಲಾಯಿತು. ಇದು ಅಂದು ನಗರದ ದೊಡ್ಡ ಪ್ರಪ್ರಥಮ ಆಸ್ಪತ್ರೆಯಾಗಿತ್ತು. 1868ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ಆಸ್ಪತ್ರೆ ಶುರುವಾಯಿತು. ಅಂದಿನ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ‘ಬೌರಿಂಗ್’ ಅವರ ಹೆಸರನ್ನೇ ಈ ಆಸ್ಪತ್ರೆಗೆ ಇಡಲಾಯಿತು.

1900ರವರೆಗೆ ಆಸ್ಪತ್ರೆಯ ಖರ್ಚು–ವೆಚ್ಚ ಹಾಗೂ ಆಡಳಿತ ಮುನಿಸಿಪಲ್‌ ಕಮಿಷನ್‌ ನಿಯಂತ್ರಣದಲ್ಲಿತ್ತು. 1900ರ ಏಪ್ರಿಲ್‌ ನಂತರ ಆಸ್ಪತ್ರೆಯ ಜವಾಬ್ದಾರಿಯನ್ನು ಅಂದಿನ ಬ್ರಿಟಿಷ್‌ ಸರ್ಕಾರ ಹೊತ್ತಿತ್ತು. ಅದೇ ವರ್ಷ ಹಳೇ ಕಟ್ಟಡಕ್ಕೆ ಹೊಸ ಕೊಠಡಿಗಳನ್ನು ಸೇರಿಸಿ ನವೀಕರಿಸಲಾಯಿತು. ಇದನ್ನು ಲೇಡಿ ಕರ್ಜನ್‌ ಅವರು ಡಿಸೆಂಬರ್‌ 10ರಂದು ಉದ್ಘಾಟಿಸಿದರು. ಅದಕ್ಕಾಗಿ ಈ ಭಾಗವನ್ನು ಲೇಡಿ ಕರ್ಜನ್‌ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆ ಎಂದೂ ಕರೆಯಲಾಯಿತು.

‘ಪಾವತಿ ಪಾರ್ಕಿಂಗ್‌’ಗೆ ವಿರೋಧ

ಬೌರಿಂಗ್ ಆಸ್ಪತ್ರೆ ಪ್ರವೇಶದ್ವಾರದ ಮುಂಭಾಗದಲ್ಲೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಲ್ಲಿ ದಿನವಿಡೀ ನಿಲ್ಲಿಸಿದರೂ, ಒಂದು ಗಂಟೆಗೆ ಸೀಮಿತವಾಗಿ ನಿಲ್ಲಿಸಿದರೂ ವಾಹನ ಮಾಲೀಕರು ₹20 ಪಾವತಿಸಬೇಕು. ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುವ ದೃಶ್ಯ ಕಂಡುಬಂತು.

‘ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿಲ್ಲ. ಇಲ್ಲಿನ ಒಂದು ಮಾರ್ಗವನ್ನೇ ಪಾರ್ಕಿಂಗ್‌ ಸ್ಥಳವಾಗಿ ಬದಲಾಯಿಸಿದ್ದಾರೆ. ಬಹುತೇಕರು ರೋಗಿಗಳ ಭೇಟಿಗಾಗಿ ಬರುತ್ತಾರೆ. ಸರ್ಕಾರಿ ಆಸ್ಪತ್ರೆ ಬಳಿ ವಾಹನ ನಿಲ್ಲಿಸುವುದಕ್ಕೂ ಹಣ ಕೊಡಬೇಕೆ’ ಎಂದು ಬೆಂಗಳೂರಿನ ನಿವಾಸಿ ಹರೀಶ್‌ ಪ್ರಶ್ನಿಸಿದರು.

ಅಂಕಿ ಅಂಶ

20 - ಆಸ್ಪತ್ರೆಯಲ್ಲಿರುವ ವಿಭಾಗಗಳು

1 ಸಾವಿರ - ಆಸ್ಪತ್ರೆಯಲ್ಲಿರುವ ಆರೋಗ್ಯ ಸಿಬ್ಬಂದಿ

4 ಸಾವಿರ - ಬೌರಿಂಗ್ ಆಸ್ಪತ್ರೆಗೆ ‍ಪ್ರತಿದಿನ ಬರುವ ರೋಗಿಗಳ ಸರಾಸರಿ ಸಂಖ್ಯೆ

636 - ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು