ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್‌ ಬೆಂಗಳೂರು: ಬಡವರ ವಸತಿ ಕನಸಿಗೆ ಕವಿದಿದೆ ಕಾರ್ಮೋಡ

ಹಳೇ ಅರ್ಜಿಗಳನ್ನು ರದ್ದುಪಡಿಸಿ ಹೊಸ ಅರ್ಜಿ ಕರೆದ ರಾಜೀವ್ ಗಾಂಧಿ ವಸತಿ ನಿಗಮ
Last Updated 27 ಜೂನ್ 2021, 19:34 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಲಕ್ಷ ಬಹುಮಹಡಿ ವಸತಿ ನಿರ್ಮಾಣ ಯೋಜನೆಯಡಿಅರ್ಜಿ ಹಾಕಿದ್ದ ಬಡವರ ಹೊಸ ಮನೆ ವಾಸದ ಆಸೆಗೆ ರಾಜೀವ್ ಗಾಂಧಿ ವಸತಿ ನಿಗಮ ತಣ್ಣೀರು ಎರಚಿದೆ. ಈಗಾಗಲೇ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ನಿಗಮವು ರದ್ದು ಮಾಡಿರುವುದು ನಿರ್ವಸತಿಗರ ಸ್ವಂತ ಸೂರಿನ ಕನಸಿಗೆ ಕಾರ್ಮೋಡ ಕವಿದಂತಾಗಿದೆ.

ನಗರದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಿ ಬಡವರಿಗೆ ಮನೆ ಹಂಚಿಕೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿ ನಾಲ್ಕೂವರೆ ವರ್ಷಗಳೇ ಕಳೆದಿವೆ. ಈ ಯೋಜನೆ ಆರಂಭದ ಹಿಂದೆ ದೊಡ್ಡ ಹೋರಾಟವೇ ನಡೆದಿತ್ತು. ಭೂಕಬಳಿಕೆ ಸಂಬಂಧ ಎ.ಟಿ. ರಾಮಸ್ವಾಮಿ ವರದಿ ಆಧರಿಸಿ ವಶಕ್ಕೆ ಪಡೆದ ಆಸ್ತಿಗಳನ್ನು ಸರ್ಕಾರ ಹರಾಜು ಮಾಡಲು ಮುಂದಾಗಿತ್ತು. ಅದರ ವಿರುದ್ಧ ಸಾಮಾಜಿಕ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ್ದವು. ಸ್ವಾಧೀನಪಡಿಸಿಕೊಂಡ ಜಮೀನನ್ನು ನಿವೇಶನಗಳಾಗಿ ಅಭಿವೃದ್ಧಿಪಡಿಸಿ ವಸತಿರಹಿತರಿಗೆ ಕಡಿಮೆ ದರದಲ್ಲಿ ಹಂಚಬೇಕು ಎಂಬ ಒತ್ತಾಯ ಮಾಡಿದವು. ನಿವೇಶನಗಳನ್ನು ಹಂಚಿಕೆ ಮಾಡುವ ಬದಲು ಒಂದು ಲಕ್ಷ ಮನೆಗಳನ್ನೇ ನಿರ್ಮಾಣ ಮಾಡಿಕೊಡಲಾಗುವುದು ಎಂದು ಅಂದಿನ ಸರ್ಕಾರ ಭರವಸೆ ನೀಡಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಯೋಜನೆಗೊಂದು ರೂಪ ದೊರೆತಿತ್ತು.

ಮನೆ ನಿರ್ಮಾಣ ಮಾಡಲು ಜಾಗಗಳನ್ನು ಜಿಲ್ಲಾಧಿಕಾರಿ ಮೂಲಕ ಗುರುತಿಸುವ ಕಾರ್ಯವೂ ನಡೆಯಿತು. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅರ್ಜಿಗಳನ್ನೂ ಆಹ್ವಾನಿಸಲಾಯಿತು. ವಾರ್ಷಿಕ ಆದಾಯದ ಮಿತಿ ₹83 ಸಾವಿರಕ್ಕಿಂತ ಕಡಿಮೆ ಇದ್ದವರು ಅರ್ಜಿ ಸಲ್ಲಿಸಲು ಅರ್ಹರು ಎಂಬ ಮಾನದಂಡ ನಿಗದಿ ಮಾಡಲಾಗಿತ್ತು. ಸೈಬರ್ ಸೆಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ವಸತಿ ರಹಿತರು (ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಖಾನೆಗಳ ನೌಕರರು, ಆಟೋರಿಕ್ಷಾ ಚಾಲಕರು, ಇನ್ನಿತರ ಅಸಂಘಟಿತ ವಲಯದವರು) ಅರ್ಜಿ ಸಲ್ಲಿಸಿದ್ದರು.

ಅರ್ಜಿ ಹಾಕಿದ್ದವರಲ್ಲಿ 65 ಸಾವಿರ ಜನರಿಗೆ ಸರ್ಕಾರ ತಿಳಿವಳಿಕೆ ಪತ್ರವನ್ನೂ ಕಳುಹಿಸಿ ಮನೆ ಒದಗಿಸುವ ಖಾತ್ರಿ ನೀಡಿದೆ. ಇಷ್ಟೆಲ್ಲಾ ಪ್ರಕ್ರಿಯೆಗಳು ನಡೆದ ಬಳಿಕ ಎಲ್ಲ ಅರ್ಜಿಗಳನ್ನು ರದ್ದುಪಡಿಸಲು ಏಕಾಏಕಿ ನಿರ್ಧಾರ ಕೈಗೊಂಡಿರುವ ಈಗಿನ ಸರ್ಕಾರ ಮನೆ ಬೇಕಿದ್ದವರು ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ವಾರ್ಷಿಕ ಆದಾಯದ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಅರ್ಜಿ ಹಾಕಿ ಕಾಯುತ್ತಿರುವ ಕಡಿಮೆ ಆದಾಯದ ಬಡವರು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ.

‘ಎಲ್ಲಿ ಮನೆಗಳು ನಿರ್ಮಾಣ ಆಗಬೇಕು ಎಂಬ ಜಾಗವನ್ನೇ ಗುರುತಿಸದೆಯೇ, ಅರ್ಜಿ ಹಾಕಿದವರಿಗೆಲ್ಲಾ ಚುನಾವಣೆ ಕಾರಣಕ್ಕೆ ಪತ್ರ ಬರೆದು ಹಿಂದಿನ ಸರ್ಕಾರ ದಿಕ್ಕುತಪ್ಪಿಸಿದೆ’ ಎಂದು ವಸತಿ ವಿ. ಸೋಮಣ್ಣ ದೂರುತ್ತಿದ್ದಾರೆ. ರಾಜಕಾರಣಿಗಳು ಒಬ್ಬರ ಮೇಲೊಬ್ಬರು ದೂರು ಹೇಳಿಕೊಂಡು ಅರ್ಜಿ ಹಾಕಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ವಸತಿರಹಿತರ ಅಳಲು.

‘ಹೊಸದಾಗಿ ಅರ್ಜಿ ಆಹ್ವಾನಿಸುವ ನಿರ್ಧಾರದ ಹಿಂದೆ ಶಾಸಕರ ಹಿತಾಸಕ್ತಿ ಅಡಗಿದೆ ಎಂಬ ಆರೋಪಗಳಿವೆ. ವಾರ್ಷಿಕ ಆದಾಯದ ಮಿತಿ ₹83 ಸಾವಿರ ಇದ್ದರೆ ತಮಗೆ ಬೇಕಾದವರಿಗೆಲ್ಲ ಮನೆ ಕೊಡಿಸಲು ಆಗುವುದಿಲ್ಲ. ಹೀಗಾಗಿಯೇ ಶಾಸಕರು ಪಟ್ಟು ಹಿಡಿದು ಈ ಕೆಲಸ ಮಾಡಿಸಿದ್ದಾರೆ’ ಎಂದು ಬಡವರ ವಸತಿ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವವರು ದೂರುತ್ತಾರೆ.

‘ಆಶ್ರಯ ಸಮಿತಿಗಳಿಗೆ ಅಧ್ಯಕ್ಷರಾಗಿರುವ ಶಾಸಕರಿಗೇ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವ ಅಧಿಕಾರವನ್ನು ನೀಡಬೇಕು. ಆಗ ಮಾತ್ರ ಈ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವುದಾಗಿ ಪಟ್ಟು ಹಿಡಿದ್ದಾರೆ. ಮೊದಲ ಹಂತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ 46 ಸಾವಿರ ಮನೆಗಳಲ್ಲಿ ಶೇ 50ರಷ್ಟು ಅಂದರೆ 23 ಸಾವಿರ ಮನೆಗಳಿಗೆ ಫಲಾನುಭವಿಗಳ ಪಟ್ಟಿಯನ್ನು ಶಾಸಕರೇ ಅಂತಿಮಗೊಳಿಸಲು ಅವಕಾಶವನ್ನು ಕೊನೆಗೂ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯು ನಿಜವಾದ ನಿರ್ವಸತಿಗರಿಗೆ ಸಿಗುವುದೋ, ರಾಜಕಾರಣಿಗಳ ಹಿಂಬಾಲಕರ ಪಾಲಾಗುವುದೋ ಎಂಬ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಹೋರಾಟಗಾರರು.

ವಸತಿ ವೆಚ್ಚ: ಯಾರ ಪಾಲು ಎಷ್ಟು?
ಒಂದು ಲಕ್ಷ ಮನೆ ಯೋಜನೆಯಡಿ ಬಡವರಿಗೆ ಉಚಿತವಾಗಿ ಮನೆ ಸಿಗುವುದಿಲ್ಲ. ಬದಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ದೊರೆಯಲಿದೆ. ಹಾಗಾಗಿ ರಿಯಾಯಿತಿ ದರದಲ್ಲಿ ವಸತಿ ಲಭಿಸಲಿದೆ.

ಒಂದು ಮನೆಗೆ ₹6 ಲಕ್ಷದಿಂದ ₹10 ಲಕ್ಷದ ತನಕ ವೆಚ್ಚವಾಗಲಿದೆ. ಕೇಂದ್ರ ಸರ್ಕಾರದಿಂದ ₹1.50 ಲಕ್ಷ ದೊರೆಯಲಿದೆ. ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ವರ್ಗದರಿಗೆ ₹2.20 ಲಕ್ಷ, ಸಾಮಾನ್ಯ ವರ್ಗದವರಿಗೆ ₹1.62 ಲಕ್ಷ ಸಬ್ಸಿಡಿ ಸಿಗಲಿದೆ. ಘಟಕ ವೆಚ್ಚದಲ್ಲಿ ಶೇ 10ರಷ್ಟನ್ನು ಫಲಾನುಭವಿಗಳು ಪಾವತಿಸಬೇಕು. ಉಳಿದ ಹಣಕ್ಕೆ ಬ್ಯಾಂಕ್‌ಗಳು ಸಾಲ ನೀಡಲಿದ್ದು, ಅದನ್ನು ಫಲಾನುಭವಿಗಳು ವಿವಿಧ ಕಂತುಗಳಲ್ಲಿ ಮರುಪಾವತಿ ಮಾಡಬೇಕು.

ಅರ್ಜಿ ವಜಾಗೊಳಿಸುವುದು ಅಕ್ಷಮ್ಯ: ಎಚ್.ಡಿ.ಕೆ
‘ಲಕ್ಷ ಮನೆಗಳ ಯೋಜನೆಯಡಿ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ರದ್ದುಪಡಿಸಿರುವುದು ಅಕ್ಷಮ್ಯ ಅಪರಾಧ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ

‘ಬಿಜೆಪಿ ಸರ್ಕಾರ ಈವರೆಗೆ ಒಂದೇ ಒಂದು ಮನೆಯನ್ನೂ ಬಡವರಿಗೆ ಹಂಚಿಕೆ ಮಾಡಿಲ್ಲ. ಆಗಸ್ಟ್‌ನಲ್ಲಿ 5 ಸಾವಿರ ಮನೆಗಳನ್ನು ಹಂಚಿಕೆ ಮಾಡುವುದಾಗಿ ಸಚಿವ ಸೋಮಣ್ಣ ಹೇಳುತ್ತಿದ್ದಾರೆ. ಇದು ಜನರ ಕಣ್ಣೊರೆಸುವ ತಂತ್ರವಲ್ಲದೆ ಬೇರೇನೂ ಅಲ್ಲ. ಕೇವಲ ಒಂದೆರಡು ತಿಂಗಳಲ್ಲಿ 5 ಸಾವಿರ ಮನೆಗಳನ್ನು ಕೊಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಈ ರೀತಿ ಹಸಿ ಸುಳ್ಳು ಹೇಳುವುದನ್ನು ಅವರು ಬಿಡಬೇಕು. ಮನೆಗಳಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ರದ್ದುಪಡಿಸದೇ ಅದೇ ಅರ್ಜಿಗಳನ್ನು ಮಾನ್ಯ ಮಾಡಿ, ಅವರಿಗೆ ಮನೆ ಒದಗಿಸಲು ಅಗತ್ಯ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಗೊಂದಲದ ಗೂಡಾಗಿತ್ತು–ಸರಿಪಡಿಸುತ್ತಿದ್ದೇನೆ:ವಸತಿ ಸಚಿವ ವಿ. ಸೋಮಣ್ಣ
‘ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಎಂ. ಕೃಷ್ಣಪ್ಪ ಅವರು ಈ ಯೋಜನೆಯನ್ನು ಗೊಂದಲ ಗೂಡಾಗಿಸಿದ್ದರು. ನಾನು ವಸತಿ ಸಚಿವನಾದ ಬಳಿಕ ಎಲ್ಲವನ್ನೂ ಸರಿಪಡಿಸಿದ್ದೇನೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಮನೆಗೆ ಜಾಗವನ್ನೂ ಗುರುತಿಸದೆಯೇ, ಒಂದೇ ಒಂದು ಮನೆಯನ್ನೂ ನಿರ್ಮಿಸದೆಯೇ, ಅರ್ಜಿ ಹಾಕಿದವರಿಗೆ ಮನೆ ನೀಡಲಾಗುವುದು ಎಂದು ಪತ್ರ ಬರೆಯಲಾಗಿತ್ತು ಎಂದು ಅವರು ದೂರಿದರು.

ಸಚಿವ ವಿ. ಸೋಮಣ್ಣ
ಸಚಿವ ವಿ. ಸೋಮಣ್ಣ

‘ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡದ ಕಾರಣಕ್ಕೆ ಈ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಲು ಶಾಸಕರು ಮುಂದೆ ಬರಲಿಲ್ಲ. ಹೀಗಾಗಿ ಮನೆ ನಿರ್ಮಾಣ ಆಗಲಿರುವ ಕ್ಷೇತ್ರದ ಶಾಸಕರನ್ನೂ ವಿಶ್ವಾಸಕ್ಕೆ ಪಡೆದು ಯೋಜನೆ ಅನುಷ್ಠಾನಗೊಳಿಸಲಿದ್ದೇವೆ. ಸ್ಥಳೀಯ ಶೇ 50ರಷ್ಟು ಫಲಾನುಭವಿಗಳ ಪಟ್ಟಿಯನ್ನು ಆಯಾ ಕ್ಷೇತ್ರದ ಶಾಸಕರು ಒದಗಿಸಲು ಅವಕಾಶ ನೀಡಿದ್ದೇವೆ. ಒಟ್ಟು 23 ಸಾವಿರ ಫಲಾನುಭವಿಗಳ ಪಟ್ಟಿಯನ್ನು ಶಾಸಕರು ನೀಡಲಿದ್ದಾರೆ. ಉಳಿದ ಶೇ 50ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲು ಏಜೆನ್ಸಿ ನೇಮಿಸಲಾಗುತ್ತಿದೆ. ಅತ್ಯಂತ ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು’ ಎಂದು ವಿವರಿಸಿದರು.

‘ಆರಂಭಿಕ ಹಂತದಲ್ಲಿ ಆಗಸ್ಟ್‌ನಲ್ಲಿ 5 ಸಾವಿರ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು. 2022ರ ನವೆಂಬರ್ ವೇಳೆಗೆ ಈ ಯೋಜನೆಯ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ’ ಎಂದರು.

‘ಫಲಾನುಭವಿಯ ವಾರ್ಷಿಕ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ₹83 ಸಾವಿರ ವಾರ್ಷಿಕ ಆದಾಯ ಇದ್ದವರು ₹7 ಲಕ್ಷದ ತನಕ ಹಣ ಹೊಂದಿಸಲು ಆಗುವುದಿಲ್ಲ. ಯೋಜನೆಯ ಉದ್ದೇಶ ಸಾರ್ಥಕ ಆಗಬೇಕು ಎಂಬ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ. ಹೀಗಾಗಿಯೇ, ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು.

ಹಲವು ಸಲ ಕರೆ ಮಾಡಿದರೂ ಈ ಬಗ್ಗೆ ಪ್ರತಿಕ್ರಿಯೆಗೆ ಎಂ.ಕೃಷ್ಣಪ್ಪ ಲಭ್ಯರಾಗಲಿಲ್ಲ.

ಕಾನೂನು ಹೋರಾಟಕ್ಕೆ ಸಿದ್ಧತೆ
‘ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಜಿ ಸ್ವೀಕರಿಸಿದವರಿಗೆ ತಿಳಿವಳಿಕೆ ಪತ್ರವನ್ನೂ ಸರ್ಕಾರ ಕಳುಹಿಸಿದೆ. ಅವರಿಗೆ ಅನ್ಯಾಯ ಮಾಡಿ ಬೇರೆಯವರಿಗೆ ಲಾಭ ಮಾಡುವುದು ನ್ಯಾಯವೇ’ ಎಂದು ಸ್ಲಂ ಜನರ ಸಂಘಟನೆ ರಾಜ್ಯ ಸಂಚಾಲಕ ಐಸಾಕ್ ಅಮೃತರಾಜ್ ಪ್ರಶ್ನಿಸಿದರು.

ಐಸಾಕ್ ಅಮೃತರಾಜ್
ಐಸಾಕ್ ಅಮೃತರಾಜ್

‘ಶಾಸಕರು ತಮ್ಮ ಹಿಂಬಾಲಕರು, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲು ಹೊಸದಾಗಿ ಅರ್ಜಿ ಆಹ್ವಾನಿಸಲು ಮುಂದಾಗಿದ್ದಾರೆ. ಈಗಾಗಲೇ ಅರ್ಜಿ ಹಾಕಿ ಕಾಯುತ್ತಿರುವ ಜನರು ಇದರಿಂದ ವಂಚನೆಗೆ ಒಳಗಾಗಲಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರದ ಈ ನಡೆಯ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಅರ್ಜಿ ಹಾಕಿರುವವರಿಗೆ ತೊಂದರೆ
ಹೊಸದಾಗಿ ಅರ್ಜಿ ಆಹ್ವಾನಿಸಿದರೆ ಈಗಾಗಲೇ ಅರ್ಜಿ ಹಾಕಿ ಕಾಯುತ್ತಿರುವವರಿಗೆ ತೊಂದರೆ ಆಗಲಿದೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ
ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಬಡವರು, ಕೂಲಿ ಕಾರ್ಮಿಕರು ಮನೆಗಳಿಗಾಗಿ ಅರ್ಜಿ ಹಾಕಿದ್ದಾರೆ. ಸರ್ಕಾರ ಪದೇ ಪದೇ ಬದಲಾವಣೆ ಮಾಡದೆ ಈಗಾಗಲೇ ಅರ್ಜಿ ಹಾಕಿದವರಿಗೆ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಅಂಕಿ–ಅಂಶ
515 ಎಕರೆ:
ಒಂದು ಲಕ್ಷ ವಸತಿ ಯೋಜನೆಗೆ ಸ್ವಾಧೀನ ಆಗಿರುವ ಭೂಮಿ
46,998 ಮನೆಗಳು:ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಕಾರ್ಯಾದೇಶ ನೀಡಿರುವುದು
42,361 ಮನೆಗಳು:ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT