ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Brand Bengaluru: ಸಿಲಿಕಾನ್ ಸಿಟಿ ಆರೋಗ್ಯ ವೃದ್ಧಿಗೆ ‘ಸರ್ಜರಿ’

ಶಸ್ತ್ರಚಿಕಿತ್ಸೆ ಸಂಬಂಧ ನಗರದ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳ
Published 30 ಜುಲೈ 2023, 0:15 IST
Last Updated 30 ಜುಲೈ 2023, 0:15 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಸಂಬಂಧ ನಗರದ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ವಿದೇಶಿಗರು ಕೂಡ ಹೃದಯ ಸಂಬಂಧಿ ಸಮಸ್ಯೆ, ಮೂಳೆ ಮುರಿತ, ಮೂತ್ರಪಿಂಡ ಸಮಸ್ಯೆಯಂತಹ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದ್ದಾರೆ. ಇದರಿಂದಾಗಿ ವೈದ್ಯರ ಪ್ರಕಾರ ಆಸ್ಪತ್ರೆಗಳ ಆದಾಯದಲ್ಲಿಯೂ ಶೇ 30 ರಷ್ಟು ಹೆಚ್ಚಳವಾಗಿದೆ.

ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಇಲ್ಲಿನ ಆಸ್ಪತ್ರೆಗಳು ಕೂಡ ಕಾರಣ. ಇಲ್ಲಿನ ವೈದ್ಯಕೀಯ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಇದರಿಂದಾಗಿ ಹೊರ ರಾಜ್ಯದ ಜತೆಗೆ ಹೊರ ದೇಶದಿಂದಲೂ ರೋಗಿಗಳು ಶಸ್ತ್ರಚಿಕಿತ್ಸೆಗಳಿಗೆ ಬರುತ್ತಿದ್ದಾರೆ. ಹೀಗಾಗಿ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿನ ಬಹುತೇಕ ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ರೋಬೋಟಿಕ್ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ನೀಡುತ್ತಿವೆ. ಇದರಿಂದಾಗಿ ರೋಗಿಗಳ ಚಿಕಿತ್ಸಾ ಅವಧಿ ಕಡಿತವಾಗುತ್ತಿದ್ದು, ಬೇಗ ಚೇತರಿಸಿಕೊಳ್ಳುತ್ತಿದ್ದಾರೆ.

2020ರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಅಂತರರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ ಪರಿಣಾಮ ವಿದೇಶಿ ರೋಗಿಗಳಿಗೆ ಚಿಕಿತ್ಸೆ ಪಡೆಯಲು ನಗರಕ್ಕೆ ಬರಲು ತೊಡಕುಗಳು ಎದುರಾಗಿದ್ದವು. ಎರಡು ವರ್ಷಗಳ ನಂತರ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ವಿದೇಶಿ ರೋಗಿಗಳ ಸಂಖ್ಯೆಯೂ ಏರಿಕೆ ಕಂಡಿದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಪ್ರಕಾರ ಕಳೆದೊಂದು ವರ್ಷದಲ್ಲಿ 50 ಸಾವಿರಕ್ಕೂ ಅಧಿಕ ವಿದೇಶಿಗರು ಇಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ವರ್ಷ 1,608 ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2020ರಲ್ಲಿ 798 ಹಾಗೂ 2021ರಲ್ಲಿ 1,352 ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅದೇ ರೀತಿ, ಕಳೆದ ವರ್ಷ 894 ಹೃದಯದ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈ ಸಂಖ್ಯೆ 2020ರಲ್ಲಿ 403 ಹಾಗೂ 2021ರಲ್ಲಿ 846 ಇದೆ. 2020ರಲ್ಲಿ 1927 ಇದ್ದ ಹೃದಯ ಶಸ್ತ್ರಚಿಕಿತ್ಸೆ, 2022ರಲ್ಲಿ 4,586ಕ್ಕೆ ತಲುಪಿದೆ. ಯುರೋಪಿನ ಹಾರ್ಟ್ ಜರ್ನಲ್ ಈ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ‘ವಿಶ್ವದ ಶ್ರೇಷ್ಠ ಹೃದಯ ಕೇಂದ್ರ’ ಎಂದು ಬಣ್ಣಿಸಿ, ಅಮೆರಿಕದ ಪ್ರಜೆಯೊಬ್ಬರು 10 ವರ್ಷಗಳ ಹಿಂದೆ ಕೇವಲ ₹ 92 ಚಿಕಿತ್ಸಾ ವೆಚ್ಚ ಪಾವತಿಸಿದ್ದನ್ನು ಉಲ್ಲೇಖಿಸಿತ್ತು.

ಕ್ಯಾನ್ಸರ್‌ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಆಫ್ರಿಕಾ ದೇಶಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಿದ್ದಾರೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸರ್ಜಿಕಲ್ ಆಂಕೊಲಾಜಿ ವಿಭಾಗವು 2021ರಲ್ಲಿ 2,164 ಶಸ್ತ್ರಚಿಕಿತ್ಸೆಗಳನ್ನು ನಡೆಸಿತ್ತು. ಕಳೆದ ವರ್ಷ ಈ ಸಂಖ್ಯೆ ಮೂರು ಸಾವಿರದ ಗಡಿ ದಾಟಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ 2021ರಲ್ಲಿ 273 ರೋಬೋಟಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. 2022ರಲ್ಲಿ ಇದು 300ರ ಗಡಿ ದಾಟಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 45ರಿಂದ 50 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಅಪೋಲೋ ಆಸ್ಪತ್ರೆಯಲ್ಲಿಯೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶಸ್ತ್ರಚಿಕಿತ್ಸೆಗಳು ಈ ವರ್ಷ ಶೇ 30ರಷ್ಟು ಹೆಚ್ಚಳವಾಗಿದೆ.

400ಕ್ಕೂ ಅಧಿಕ ಆಸ್ಪತ್ರೆ: ಫನಾ ಅಡಿ ನಗರದಲ್ಲಿ 400ಕ್ಕೂ ಅಧಿಕ ಆಸ್ಪತ್ರೆಗಳು ಸೇವೆ ನೀಡುತ್ತಿವೆ. ಮಣಿಪಾಲ್, ಆಸ್ಟರ್, ಅಪೋಲೊ, ಫೋರ್ಟಿಸ್, ಕೊಲಂಬಿಯಾ ಏಷ್ಯಾ, ನಾರಾಯಣ ಹೆಲ್ತ್ ಸಿಟಿ, ಎಚ್‌.ಸಿ.ಜಿ, ಎಂ.ಎಸ್. ರಾಮಯ್ಯ, ಸಕ್ರಾ ವರ್ಲ್ಡ್‌, ನಾರಾಯಣ ಹೃದಯಾಲಯ, ನಾರಾಯಣ ನೇತ್ರಾಲಯ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿವೆ. ಇದರಿಂದಾಗಿ ಇಲ್ಲಿನ ವೈದ್ಯಕೀಯ ಸಮೂಹವು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರಿಗೆ ಚಿಕಿತ್ಸೆ ಒದಗಿಸುತ್ತಿವೆ.

ವಿದೇಶದಿಂದ ಚಿಕಿತ್ಸೆಗಾಗಿ ಬರುವವರಲ್ಲಿ ಹೆಚ್ಚಿನವರು ಆಫ್ರಿಕಾ, ಮಧ್ಯಪೂರ್ವ ದೇಶಗಳು, ಬಾಂಗ್ಲಾದೇಶ, ಅಫ್ಗಾನಿಸ್ತಾನ, ಶ್ರೀಲಂಕಾದವರಾಗಿದ್ದಾರೆ. ವಿದೇಶಗಳಿಗೆ ಹೋಲಿಸಿದಲ್ಲಿ ಇಲ್ಲಿ ರೋಗಿಗಳು ಚಿಕಿತ್ಸೆಗೆ ಕಾಯುವ ಅವಧಿ ಕಡಿಮೆಯಿದ್ದು, ವೈದ್ಯಕೀಯ ವೆಚ್ಚವೂ ಅಮೆರಿಕದಂತಹ ದೇಶಗಳಿಗೆ ಹೋಲಿಸಿದಲ್ಲಿ ಕಡಿಮೆಯಿದೆ. ಇದರಿಂದಾಗಿ ಅಮೆರಿಕದಂತಹ ಮುಂದುವರಿದ ದೇಶದಿಂದಲೂ ಇಲ್ಲಿಗೆ ರೋಗಿಗಳು ಬರುತ್ತಿದ್ದಾರೆ.

‘2020 ಹಾಗೂ 2021ರಲ್ಲಿ ಕೋವಿಡ್‌ ಪ್ರಕರಣಗಳಿಗೆ ಆದ್ಯತೆ ನೀಡಿದ್ದೆವು. ಆ ಸಂದರ್ಭದಲ್ಲಿ ಕೆಲವು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿತ್ತು. 2022ರ ಬಳಿಕ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ನೀಡಲಾಗಿದೆ. ಪ್ರಮುಖವಾಗಿ ರೋಬೋಟಿಕ್‌ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಬಹುತೇಕ ಮಂದಿ ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಲವು ತೋರುತ್ತಿದ್ದಾರೆ’ ಎಂದು ಫೋರ್ಟಿಸ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕಿ ಡಾ. ಪ್ರಿಯಾ ಗೌತಮ್ ತಿಳಿಸಿದರು. 

ವಿದೇಶಗಳಿಗೆ ಹೋಲಿಸಿದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ. ಆದ್ದರಿಂದ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದಾರೆ. ಕಳೆದೊಂದು ವರ್ಷದಿಂದ ಶಸ್ತ್ರಚಿಕಿತ್ಸೆ ಹೆಚ್ಚಳವಾಗಿದೆ. ।
ಡಾ.ಸಿ.ಎನ್. ಮಂಜುನಾಥ್ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ
ಇಲ್ಲಿ ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ಇದರಿಂದಾಗಿ ಇಲ್ಲಿನ ವೈದ್ಯರು ಹೆಚ್ಚು ನೈಪುಣ್ಯತೆ ಹೊಂದಿದ್ದಾರೆ. ಚಿಕಿತ್ಸಾ ವೆಚ್ಚವೂ ಕಡಿಮೆಯೆಂಬ ಕಾರಣಕ್ಕೆ ವಿದೇಶಿಗರೂ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದಾರೆ.
ಡಾ.ಎಸ್. ಶ್ರೀನಿವಾಸ್ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಚುನಾಯಿತ ಅಧ್ಯಕ್ಷ

ಹೊರರೋಗಿಗಳ ಸಂಖ್ಯೆಯೂ ಹೆಚ್ಚಳ

ಕಳೆದೊಂದು ವರ್ಷದಿಂದ ನಗರದಲ್ಲಿ ಹೊರರೋಗಿಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗಿದೆ. ವಾಣಿವಿಲಾಸ ಆಸ್ಪತ್ರೆಯಲ್ಲಿ 300ರ ಆಸುಪಾಸಿನಲ್ಲಿದ್ದ ಹೊರರೋಗಿಗಳ ಸಂಖ್ಯೆ ಈಗ 500ರ ಗಡಿ ಸಮೀಪಿಸಿದೆ. ಜಯದೇವ ಹೃದ್ರೋಗ ಆಸ್ಪತ್ರೆಗೆ 2100ರಿಂದ 2200 ಮಂದಿ ಭೇಟಿ ನೀಡುತ್ತಿದ್ದು ಈ ಸಂಖ್ಯೆ ಹಿಂದೆ 1600 ರಷ್ಟಿತ್ತು. ಕಿದ್ವಾಯಿ ಆಸ್ಪತ್ರೆಗೆ 1850ರಿಂದ 1900 ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ಈ ಮೊದಲು 1700ರಷ್ಟು ಮಂದಿ ಹೊರರೋಗಿಗಳು ಬರುತ್ತಿದ್ದರು. ಅದೇ ರೀತಿ ಕೆ.ಸಿ ಜನರಲ್ ಆಸ್ಪತ್ರೆಗೆ 950ರಿಂದ 1000 ವಿಕ್ಟೋರಿಯಾ ಆಸ್ಪತ್ರೆಗೆ 1200ರಿಂದ 1300 ರೋಗಿಗಳು ಭೇಟಿ ನೀಡುತ್ತಿದ್ದಾರೆ. 

ವಿದೇಶಿಗರು ಶಸ್ತ್ರಚಿಕಿತ್ಸೆಗೆ ಬರಲು ಕಾರಣಗಳು

* ಶಸ್ತ್ರಚಿಕಿತ್ಸೆಗೆ ಕಾಯುವ ಅವಧಿ ಕಡಿಮೆ

* ವಿದೇಶಗಳಿಗೆ ಹೋಲಿಸಿದರೆ ವೈದ್ಯಕೀಯ ವೆಚ್ಚ ಕಡಿಮೆ

* ರೋಗಿಗಳಿಗೆ ಉತ್ತಮ ಆರೈಕೆ

* ರೋಗಿಗಳ ಬೇಡಿಕೆಗಳಿಗೆ ಸ್ಪಂದನೆ

* ಅತ್ಯಾಧುನಿಕ ಸೌಲಭ್ಯ ಹೊಂದಿದ ಆಸ್ಪತ್ರೆಗಳು

* ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಉತ್ತಮ ಸಾರಿಗೆ ಸಂಪರ್ಕ

* ವೈದ್ಯಕೀಯ ವೀಸಾ ಪಡೆಯುವುದು ಸುಲಭ

* ವಿವಿಧ ದರ್ಜೆಯ ಆತಿಥ್ಯ ಕೇಂದ್ರಗಳು ಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT