ಶನಿವಾರ, ಏಪ್ರಿಲ್ 1, 2023
32 °C

ಬ್ರ್ಯಾಂಡ್ ಬೆಂಗಳೂರು | ಮತ್ತೆ ಕಳೆಗಟ್ಟುವ ತವಕದಲ್ಲಿ ದಾಸನಪುರ ಎಪಿಎಂಸಿ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ನಗರದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಕಡಿಮೆ ಮಾಡಲು ನಿರ್ಮಿಸಿರುವ ದಾಸನಪುರ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ಚುರುಕುಗೊಳ್ಳುವ ಕಾಲ ಹತ್ತಿರವಾಗಿದೆ. ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಮತ್ತು ಶುಂಠಿ ವ್ಯಾಪಾರವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.

ಯಶವಂತಪುರ ಮಾರುಕಟ್ಟೆ ಎಂದರೆ ಈ ನಾಲ್ಕು ಉತ್ಪನ್ನಗಳ ವಹಿವಾಟು ನಡೆಯುವ ದೊಡ್ಡ ಕೇಂದ್ರ. ರಾಜ್ಯ ಮಾತ್ರವಲ್ಲ ಮಹಾರಾಷ್ಟ್ರದಿಂದಲೂ ಈರುಳ್ಳಿ ಇಲ್ಲಿಗೆ ಬರಲಿದೆ. ಬೆಂಗಳೂರಿನ ಗ್ರಾಹಕರ ಜತೆಗೆ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಾಂಗ್ಲಾದೇಶಕ್ಕೆ ಈರುಳ್ಳಿ ಕಳುಹಿಸಲಾಗುತ್ತದೆ.

ಮಧ್ಯಪ್ರದೇಶ, ದೆಹಲಿ, ಉತ್ತರ ಪ್ರದೇಶ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರದಿಂದ ಬರುವ ಆಲೂಗಡ್ಡೆ, ತಮಿಳುನಾಡು ಮತ್ತು ಬೆಂಗಳೂರಿನ ಗ್ರಾಹಕರಿಗೆ ತಲುಪುತ್ತದೆ. ಇದರ ಜತೆಗೆ ಶುಂಠಿ ಮತ್ತು ಬೆಳ್ಳುಳ್ಳಿ ವಹಿವಾಟಿಗೂ ಇದೇ ದೊಡ್ಡ ಮಾರುಕಟ್ಟೆ.

ವರ್ತಕರು ಈ ವಹಿವಾಟಿನ ಮೇಲೆ ಬಲವಾದ ಹಿಡಿತ ಸಾಧಿಸಿದ್ದು, ವರ್ಷದಿಂದ ವರ್ಷಕ್ಕೆ ಈ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ದಿನಕ್ಕೆ ಸರಾಸರಿ 1300ರಿಂದ 1600 ಲಾರಿಗಳು ಈ ಪಾದರ್ಥಗಳನ್ನು ಹೊತ್ತು ಎಪಿಎಂಸಿಗೆ ಬರುತ್ತಿವೆ. ಬೆಳೆಯುತ್ತಿರುವ ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡು 2006ರಲ್ಲಿ ‌ದಾಸನಪುರದ ಬಳಿ 67 ಎಕರೆ ಸ್ವಾಧೀನಪಡಿಸಿಕೊಂಡ ಸರ್ಕಾರ, ವಿಶಾಲ ಮತ್ತು ಸುಸಜ್ಜಿತವಾದ ಮಾರುಕಟ್ಟೆ ನಿರ್ಮಿಸಿತು.

ಎ ಮತ್ತು ಬಿ ಬ್ಲಾಕ್ ಕಾಮಗಾರಿ ಪೂರ್ಣಗೊಂಡು 14 ವರ್ಷಗಳೇ ಕಳೆದಿದ್ದು, ಮಾರುಕಟ್ಟೆ ಮಾತ್ರ ಪರಿಪೂರ್ಣವಾಗಿ ಆರಂಭವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಜನ ಸಂದಣೆ ಕಡಿಮೆ ಮಾಡಲು ಈ ಮಾರುಕಟ್ಟೆಯನ್ನು ಸರ್ಕಾರ ಬಳಸಿಕೊಂಡಿತು. ಈರುಳ್ಳಿ–ಬೆಳ್ಳುಳ್ಳಿ ಮತ್ತು ಆಲೂಗಡ್ಡೆ ವರ್ತಕರನ್ನು ಯಶವಂತಪುರದಿಂದ ದಾಸನಪುರಕ್ಕೆ ಸಂಪೂರ್ಣವಾಗಿ ಸ್ಥಳಾಂತರ ಮಾಡಿತ್ತು.

ಕೋವಿಡ್ ಎರಡನೇ ಅಲೆ ಲಾಕ್‌ಡೌನ್ ಮುಗಿದ ಬಳಿಕ 309 ವರ್ತಕರು ದಾಸನಪುರದಿಂದ ಯಶವಂತಪುರಕ್ಕೆ ಮರಳಿ ವಹಿವಾಟು ಆರಂಭಿಸಿದ್ದರು. ಯಶವಂತಪುರದಲ್ಲಿ ಮಳಿಗೆ ಇಲ್ಲದ ಶೇ 30ರಷ್ಟು ವರ್ತಕರು ಮಾತ್ರ ದಾಸನಪುರದಲ್ಲಿ ವಹಿವಾಟು ಮುಂದುವರಿಸಿದ್ದರು.

ಈಗ ಈರುಳ್ಳಿ, ಆಲೂಗಡ್ಡೆ, ಶುಂಠಿ ಮತ್ತು ಬೆಳ್ಳುಳ್ಳಿ ವಹಿವಾಟನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ದಿಟ್ಟ ನಿರ್ಧಾರವನ್ನು ಎಪಿಎಂಸಿ ಆಡಳಿತ ಮಂಡಳಿ ಕೈಗೊಂಡಿದೆ. ‘ಜನವರಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿದೆ. ಇನ್ನೊಂದು ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರ ಬಳಲಿದ್ದು, ವಹಿವಾಟು ಸ್ಥಳಾಂತರ ಆಗಲಿದೆ. ಮುಂದಿನ ದಿನಗಳಲ್ಲಿ ದಿನಸಿ ವಹಿವಾಟ ಮಾತ್ರ ಈ ಮಾರುಕಟ್ಟೆಯಲ್ಲಿ ಇರಲಿದೆ’ ಎಂದು ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ದಾಸನಪುರ ಮಾರುಕಟ್ಟೆ ಉಪಯೋಗಗಳೇನು?
ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಕೃಷಿ ಉತ್ಪನ್ನಗಳನ್ನು ಹೊತ್ತು ಬರುವ ಲಾರಿಗಳು ನಗರ ಪ್ರವೇಶಿಸಲು ರಾತ್ರಿ ತನಕ ಕಾಯಬೇಕಿದೆ. ದಾಸನಪುರಕ್ಕೆ ಮಾರುಕಟ್ಟೆ ಸ್ಥಳಾಂತರವಾದರೆ ಯಾವುದೇ ಸಮಯದಲ್ಲಾದರೂ ಬಂದು ಹೋಗಲು ಅವಕಾಶ ಇರಲಿದೆ. ಬೆಳಿಗ್ಗೆ 11 ಗಂಟೆ ವೇಳೆಗೆ ಸರಕು ಇಳಿಸಿದರೂ ರಾತ್ರಿ ತನಕ ಕಾದು ಕೊಳಿತುಕೊಳ್ಳಬೇಕು. ಸರಕು ಹೊತ್ತು ಹೊರ ರಾಜ್ಯಗಳಿಗೆ ಹೋಗುವ ಲಾರಿಗಳೂ ರಾತ್ರಿ 9ರ ತನಕ ಕಾಯಬೇಕಿದೆ. ದಾಸನಪುರದಲ್ಲಿ ಈ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ತುಮಕೂರು ರಸ್ತೆಯಿಂದ ದಾಸನಪುರಕ್ಕೆ ಈಗಿರುವ ರಸ್ತೆ ಜತೆಗೆ ನೆಲಮಂಗಲ–ಚಿಕ್ಕಬಳ್ಳಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಯಾಗಲಿದ್ದು, ದಾಸನಪುರಕ್ಕೆ ದಾರಿ ಇನ್ನಷ್ಟು ಸುಗಮ ಆಗಲಿದೆ ಎಂದು ಹೇಳುತ್ತಾರೆ.

ಇನ್ನು ನೆಲಮಂಗಲ ರೈಲು ನಿಲ್ದಾಣ ಸಮೀಪದಲ್ಲೇ ಇದ್ದು, ಅಲ್ಲಿಂದ ಈಶಾನ್ಯ ರಾಜ್ಯಗಳಿಗೆ ನೇರವಾಗಿ ಈರುಳ್ಳಿ ಕಳುಹಿಸಬಹುದಾಗಿದೆ. ಅದಕ್ಕೆ ಬೇಕಿರುವ ಮೂಲ ಸೌಕರ್ಯ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ. ಸಾಗಣೆ ವೆಚ್ಚ ಕಡಿಮೆಯಾದರೆ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ವಿವರಿಸುತ್ತಾರೆ.

ಪೊಲೀಸ್ ಇಲಾಖೆಯಿಂದಲೂ ಪತ್ರ
ಯಶವಂತಪುರ ಸುತ್ತಮುತ್ತ ಸಂಚಾರ ದಟ್ಟಣೆಗೆ ಎಪಿಎಂಸಿ ಕಾರಣವಾಗುತ್ತಿದ್ದು, ದಾಸನಪುರಕ್ಕೆ ಸ್ಥಳಾಂತರ ಮಾಡುವಂತೆ ಕೋರಿದೆ.

ಎಪಿಎಂಸಿ ಪ್ರಾಂಗಣದಲ್ಲಿ ಸುಗ್ಗಿ ಕಾಲದಲ್ಲಿ 1.50 ಲಕ್ಷ ಚೀಲ ಈರುಳ್ಳಿ, ಆಲೂಗಡ್ಡೆ ಉತ್ಪನ್ನ ಬರುತ್ತಿದ್ದು, ದಿನಕ್ಕೆ 1 ಸಾವಿರದಿಂದ 5 ಸಾವಿರ ಸಾವಿರ ತನಕ ಲಾರಿಗಳು ಬಂದಿರುವ ಉದಾಹರಣೆ ಇದೆ. ಇದರಿಂದ ಸಹಜವಾಗಿ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ಯಶವಂತಪುರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಶಾಲಾ ವಾಹನಗಳು ಸಾಗಲು ಅಡಚಣೆಯಾಗಿದೆ. ಆದ್ದರಿಂದ ಸ್ಥಳಾಂತರ ಮಾಡಬೇಕು ಎಂದು ಕೋರಿದ್ದಾರೆ.

ದಾಸನಪುರ ಎಪಿಎಂಸಿ ವರ್ತಕರ ಸಂಘ, ಎಸ್‌ವಿಎಸ್ ಪಾಂಡುರಂಗ ಪ್ರೌಢಶಾಲೆ, ಗೊರಗುಂಟೆಪಾಳ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ, ಶ್ರೀರಾಮ ರಕ್ಷಿತ ಮಾನವ ಹಕ್ಕುಗಳ ಚೈತನ್ಯ ಶಕ್ತಿ ಸಂಘಗಳು ವಿಶೇಷ ಕಮಿಷನರ್(ಸಂಚಾರ) ಎಂ.ಎ.ಸಲೀಂ ಅವರಿಗೆ ಮನವಿಗಳನ್ನು ಸಲ್ಲಿಸಿದ್ದು, ಮಾರುಕಟ್ಟೆ ಸ್ಥಳಾಂತರಕ್ಕೆ ಕೋರಿವೆ. ಈ ಮನವಿಗಳನ್ನು ಇನ್‌ಸ್ಪೆಕ್ಟರ್ ಲಗತ್ತಿಸಿದ್ದಾರೆ.

ಅಂಕಿ–ಅಂಶ
67 ಎಕರೆ: ದಾಸನಪುರ ಮಾರುಕಟ್ಟೆಯ ವಿಸ್ತೀರ್ಣ
252: ಎರಡು ಬ್ಲಾಕ್‌ನಲ್ಲಿ ಇರುವ ಮಳಿಗೆ
4 ಕಿ.ಮೀ.: ತುಮಕೂರು ರಸ್ತೆಯಿಂದ ಇರುವ ದೂರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು