ಮಂಗಳವಾರ, ಜೂನ್ 28, 2022
25 °C

ಲಂಚ ಪ್ರಕರಣ: ಬಿಬಿಎಂಪಿ, ಬೆಸ್ಕಾಂನ ನೌಕರರು ಸೇರಿ ಆರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಎರಡು ಪ್ರತ್ಯೇಕ ಲಂಚ ಪ್ರಕರಣಗಳಲ್ಲಿ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳು, ನೌಕರರು ಸೇರಿದಂತೆ ಆರು ಮಂದಿಯನ್ನು ಮಂಗಳವಾರ ಬಂಧಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ₹ 1.60 ಲಕ್ಷ ನಗದು ವಶಪಡಿಸಿಕೊಂಡಿದೆ.

ಮುರುಗೇಶ ಪಾಳ್ಯದಲ್ಲಿರುವ ನಿವೇಶನವೊಂದಕ್ಕೆ ‘ಎ’ ಖಾತಾ ನೀಡುವಂತೆ ಜೆ.ಪಿ. ನಗರದ ಸನ್‌ ಸಿಟಿ ನಿವಾಸಿಯೊಬ್ಬರು ಬಿಬಿಎಂಪಿಯ ಕೋನೇನ ಅಗ್ರಹಾರ ವಾರ್ಡ್‌ (ಸಂಖ್ಯೆ 113) ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ₹ 30,000 ಶುಲ್ಕ ಮತ್ತು ₹ 1.10 ಲಕ್ಷ ಲಂಚ ನೀಡುವಂತೆ ಅಲ್ಲಿನ ಸಹಾಯಕ ಕಂದಾಯ ಅಧಿಕಾರಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಬಿಬಿಎಂಪಿ ಅಧಿಕಾರಿಗಳ ಪರವಾಗಿ ಶ್ರೀನಿವಾಸ್‌ ಎಂಬ ಖಾಸಗಿ ವ್ಯಕ್ತಿ ಲಂಚದ ಹಣವನ್ನು ಪಡೆದುಕೊಂಡರು. ಅವರೊಂದಿಗೆ ಬಿಬಿಎಂಪಿ ಜೀವನಬಿಮಾ ನಗರದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮೂರ್ತಿ ಮತ್ತು ಕಂದಾಯ ನಿರೀಕ್ಷಕ ಮೊಹಮ್ಮದ್‌ ಇದ್ರೀಸ್‌ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

ವಿಚಕ್ಷಣಾ ಅಧಿಕಾರಿಗಳ ಬಂಧನ: ಅಮೃತಹಳ್ಳಿ ನಿವಾಸಿಯೊಬ್ಬರು ಹೈ ಟೆನ್ಷನ್‌ ವಿದ್ಯುತ್‌ ಮಾರ್ಗದ ಅಡಿಯಲ್ಲಿ ಮನೆ ನಿರ್ಮಿಸಿದ್ದರು. ಅವರು ತಾತ್ಕಾಲಿಕ ವಾಗಿ ಪಡೆದುಕೊಂಡಿದ್ದ ವಿದ್ಯುತ್‌ ಸಂಪರ್ಕದ ಅವಧಿ 2021ರ ಆಗಸ್ಟ್‌– ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರು. ಬಳಿಕ ಆ ವ್ಯಕ್ತಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದರು.

ದೂರಿನ ಆಧಾರದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಬೆಸ್ಕಾಂ ವಿಚಕ್ಷಣ ದಳದ ಅಧಿಕಾರಿಗಳು, ಮಹಜರು ನಡೆಸಿದ್ದರು. ₹ 1.10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು, ₹ 45,000 ಪಡೆದುಕೊಂಡಿದ್ದರು. ಉಳಿದ ಮೊತ್ತ ನೀಡುವಂತೆ ಪುನಃ ಬೇಡಿಕೆ ಇಟ್ಟಿದ್ದರು. ಕಟ್ಟಡದ ಮಾಲೀಕರಾಗಿರುವ ಮಹಿಳೆಯ ಸಹೋದರ ಎಸಿಬಿಗೆ ದೂರು ನೀಡಿದ್ದರು.

ಮಲ್ಲೇಶ್ವರದಲ್ಲಿರುವ ಬೆಸ್ಕಾಂ ವಿಚಕ್ಷಣಾ ದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗೇಶ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್‌ ಪರವಾಗಿ ಮೊಹಿದ್ದೀನ್‌ ಆರೀಫ್‌ ಎಂಬ ಖಾಸಗಿ ವ್ಯಕ್ತಿ ₹ 50,000 ಲಂಚದ ಹಣ ಪಡೆದುಕೊಂಡರು. ಮೂವರನ್ನೂ ಬಂಧಿಸಲಾಯಿತು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು