ಬೆಂಗಳೂರು: ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ಆರೋಪದಡಿ ದಾಖಲಿಸಿದ್ದ ಪ್ರಕರಣವೊಂದನ್ನು ಮುಕ್ತಾಯಗೊಳಿಸಲು ₹ 1.5 ಲಕ್ಷ ಲಂಚ ಪಡೆದ ಬೆಸ್ಕಾಂ ಇಂದಿರಾನಗರ ಉಪ ವಿಭಾಗದ ವಿಚಕ್ಷಣ ದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಯೋಗೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದ ವೆಂಕಟೇಶ್ ವಿರುದ್ಧ ಬೆಸ್ಕಾಂ ವಿಚಕ್ಷಣ ದಳ ಪ್ರಕರಣ ದಾಖಲಿಸಿತ್ತು. ಅದನ್ನು ಮುಕ್ತಾಯಗೊಳಿಸಲು ₹ 1.70 ಲಕ್ಷ ಲಂಚ ನೀಡುವಂತೆ ವಿಚಕ್ಷಣ ದಳದ ಎಇಇ ಬೇಡಿಕೆ ಇಟ್ಟಿದ್ದರು. ಆಪಾದಿತರ ಕಡೆಯವರು ಭೇಟಿ ಮಾಡಿ ಚೌಕಾಸಿ ನಡೆಸಿದ್ದಾಗ ₹ 1.50 ಲಕ್ಷ ಲಂಚ ಕೊಟ್ಟರೆ ಪ್ರಕರಣ ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದರು.
ಯೋಗೇಶ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಾರತ್‌ಹಳ್ಳಿಯ ಬಸವನಗರ ನಿವಾಸಿ ಶ್ರೀಧರ ಆಚಾರ್ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು. ದೂರುದಾರರಿಂದ ಮಂಗಳವಾರ ₹ 1.5 ಲಕ್ಷ ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಮಹದೇವಯ್ಯ ಮತ್ತು ತಂಡ ಆರೋಪಿಯನ್ನು ಬಂಧಿಸಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ಭೂಮಾಪಕ, ಮಧ್ಯವರ್ತಿ ಸೆರೆ:
ಪ್ರಮಾಣಿತ ಭೂ ದಾಖಲೆಗಳನ್ನು ಒದಗಿಸಲು ₹ 7,000 ಲಂಚ ಪಡೆದ ಕೆ.ಆರ್.ಪುರ ತಾಲ್ಲೂಕಿನ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಮೂರ್ತಿ ನಾಯ್ಕ್ ಮತ್ತು ಅವರ ಪರವಾಗಿ ಹಣ ಪಡೆದ ದಿವಾಕರ್ ಎಂಬ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾಡುಗೋಡಿ ಸಮೀಪದ ದೊಮ್ಮಸಂದ್ರ ನಿವಾಸಿ ಸಂದೇಶ್ ಹೊಸಮಠ ಎಂಬುವವರು ಜಮೀನಿನ ಪ್ರಮಾಣಿತ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ದಾಖಲೆಗಳನ್ನು ಒದಗಿಸಲು ₹ 7,000 ಲಂಚ ನೀಡುವಂತೆ ಭೂಮಾಪಕ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ದೂರುದಾರರು ಮಂಗಳವಾರ ಲಂಚದ ಹಣ ತಲುಪಿಸಲು ಮೂರ್ತಿ ನಾಯ್ಕ್ ಅವರನ್ನು ಭೇಟಿಮಾಡಿದ್ದರು. ಸ್ಥಳದಲ್ಲಿದ್ದ ಮಧ್ಯವರ್ತಿ ದಿವಾಕರ್ ಎಂಬುವವರಿಗೆ ಹಣ ನೀಡುವಂತೆ ಭೂಮಾಪಕ ಸೂಚಿಸಿದರು. ಸಂದೇಶ್ ಅದೇ ಪ್ರಕಾರ ಹಣ ನೀಡಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಗಂಗರುದ್ರಯ್ಯ, ಆನಂದ್, ಶಂಕರಪ್ಪ ಮತ್ತು ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಕಾರ್ಯಾಚರಣೆಗಳು ಲೋಕಾಯುಕ್ತದ ಬೆಂಗಳೂರು ನಗರ ವಿಭಾಗದ ಪ್ರಭಾರ ಎಸ್‌ಪಿ ಶ್ರೀನಾಥ್ ಜೋಶಿ ಅವರ ಮಾರ್ಗದರ್ಶನದಲ್ಲಿ ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.