ಶುಕ್ರವಾರ, ಫೆಬ್ರವರಿ 26, 2021
19 °C
ಅಧಿಕಾರ ವ್ಯಾಪ್ತಿ ಮೀರಿ ಹುದ್ದೆಯಿಂದ ಎಫ್‌ಒ ಬಿಡುಗಡೆ ಕ್ರಮ: ಆರ್ಥಿಕ ಇಲಾಖೆ ಅಸಮಾಧಾನ

‘ಕುಲಪತಿ ಹುದ್ದೆಗೆ ತಕ್ಕುದಲ್ಲದ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ (ಎಫ್‌ಒ) ಎಚ್.ಬಿ. ಪಾರ್ವತಿ ಬುಧವಾರದಿಂದ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಅವರು ಹಣಕಾಸು ಅಧಿಕಾರಿಯನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರು.

ಆದರೆ, ಕುಲಪತಿಯವರ ಈ ನಡೆ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪಾರ್ವತಿಯವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಸೂಚನೆ ನೀಡಿದೆ. ‘ಇದು ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಗೆ ತಕ್ಕುದಲ್ಲದ ಕ್ರಮ’ ಎಂದು ಆರ್ಥಿಕ ಇಲಾಖೆಯೂ ಅಸಮಾಧಾನ ವ್ಯಕ್ತಪಡಿಸಿದೆ.

‘ಮುಖ್ಯಮಂತ್ರಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಅನುಮೋದನೆ ಮೇರೆಗೆ ಆರ್ಥಿಕ ಇಲಾಖೆಯಿಂದ ಪಾರ್ವತಿ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಣಕಾಸು ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದ್ದು, ಅವರ ಅವಧಿಯು 2022ರ ಜುಲೈ 17ರವರೆಗೆ ಇದೆ. ಅವಧಿ ಮುಗಿದ ನಂತರ ಸ್ಥಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಕುಲಪತಿಯವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

‘ಸಕಾರಣವಿಲ್ಲದೆ ಅಧಿಕಾರಿಯನ್ನು ಹುದ್ದೆಯಿಂದ ಬಿಡುಗಡೆ ಮಾಡಿರುವುದು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ. ಮುಂದಿನ ಆದೇಶದವರೆಗೆ ಪಾರ್ವತಿಯವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಬೇಕು’ ಎಂದೂ ಅವರು ಹೇಳಿದ್ದಾರೆ.

‘ತಮ್ಮ ಹಂತದಲ್ಲಿಯೇ ಎಫ್ಒ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ವಿಷಾದನೀಯ. ಇದು ಅಧಿಕಾರ ವ್ಯಾಪ್ತಿ ಮೀರಿದ ಕ್ರಮ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್‌ ಅವರು ಕುಲಪತಿಯವರಿಗೆ ಬುಧವಾರ ಪತ್ರ ಬರೆದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದವೇನು ?
ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿರುವುದನ್ನು ಲೆಕ್ಕಪರಿಶೀಲನೆ ವೇಳೆ ಪಾರ್ವತಿ ಬೆಳಕಿಗೆ ತಂದಿದ್ದರು. ಇದರ ನಂತರವೇ ಕುಲಪತಿಯವರು ಎಫ್‌ಒ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರು ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರೊಬ್ಬರು ಹೇಳಿದರು.

ವಿಶ್ವವಿದ್ಯಾಲಯದ ಲೆಕ್ಕಪತ್ರಗಳ ಪರಿಶೀಲನೆ ವೇಳೆ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಡಿ.15ರಂದು ಕುಲಪತಿಯವರಿಗೆ ಪಾರ್ವತಿ ವರದಿ ಸಲ್ಲಿಸಿದ್ದರು. ಹಣಕಾಸು ಅಧಿಕಾರಿಯನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳುವಂತೆ ಕುಲಪತಿ ವೇಣುಗೋಪಾಲ್‌, ಇಲಾಖೆಗೆ ಪತ್ರ ಬರೆದಿದ್ದರು. ಆದರೆ, ಡಿ. 28ರಂದು ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಎಫ್‌ಒರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದರು.

‘ಕುಲಪತಿಯವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಿಂಡಿಕೇಟ್‌ ಗಮನಕ್ಕೂ ತರದೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯದ ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾಗಿ ಕುಲಪತಿ ನಡೆದುಕೊಳ್ಳಬೇಕು’ ಎಂದು ಸಿಂಡಿಕೇಟ್‌ ಸದಸ್ಯ ಎಚ್. ಸುಧಾಕರ್‌ ಹೇಳಿದರು.

ಉನ್ನತಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರು ಹಣಕಾಸು ಅಧಿಕಾರಿಯನ್ನು ಕರೆಸಿಕೊಂಡು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ‘ಸ್ವತಂತ್ರವಾಗಿ ನಡೆಸಿದ ಲೆಕ್ಕಪರಿಶೋಧನೆ ವರದಿ ಕುರಿತಂತೆ ಪ್ರಕರಣದ ಎಲ್ಲ ವಿವರವನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರಿಗೆ ತಿಳಿಸಿದ್ದೇನೆ’ ಎಂದು ಪಾರ್ವತಿ ಹೇಳಿದರು.

ಅಕ್ರಮ ಅಲ್ಲ, ಆಕ್ಷೇಪಗಳಷ್ಟೇ: ‘ವಿಶ್ವವಿದ್ಯಾಲಯದ ಎಫ್‌ಒ ಅವರು ಸಲ್ಲಿಸಿರುವ ವರದಿಯಲ್ಲಿ ಲೆಕ್ಕಪತ್ರಗಳ ಬಗ್ಗೆ ಇರುವುದು ಆಕ್ಷೇಪಣೆಗಳಷ್ಟೇ. ಅದು ಅಕ್ರಮವಲ್ಲ. ಹಣಕಾಸು ವಿಭಾಗವೇ ಅದನ್ನು ಸರಿಪಡಿಸಬೇಕು. ಕುಲಪತಿ ಕೆಲಸ ಲೆಕ್ಕಪತ್ರಗಳ ಉಸ್ತುವಾರಿ ನೋಡಿಕೊಳ್ಳುವುದಲ್ಲ’ ಎಂದು ಪ್ರೊ.ಕೆ.ಆರ್. ವೇಣುಗೋಪಾಲ್ ಹೇಳಿದರು.

‘ಈ ವರದಿ ನೀಡಿದ ಕಾರಣಕ್ಕಾಗಿ ಎಫ್‌ಒ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಿದ್ದಲ್ಲ. ಅವರು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ, ಜೋರು ಮಾಡುತ್ತಾರೆ. ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ವಿಶ್ವವಿದ್ಯಾಲಯದ ಬೋಧಕ–ಬೋಧಕೇತರ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದರು. ಮನವಿಯನ್ನೂ ಸಲ್ಲಿಸಿದ್ದರು. ಅದರಂತೆ, ಎಫ್‌ಒ ಅವರನ್ನು ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗಮನಕ್ಕೂ ತಂದು ಕ್ರಮ ಕೈಗೊಳ್ಳಲಾಗಿತ್ತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಲೆಕ್ಕಪರಿಶೋಧನೆಯಲ್ಲಿರುವುದು ನನ್ನ ಅವಧಿಗೂ ಮುನ್ನ ಆರ್ಥಿಕ ಚಟುವಟಿಕೆಯ ಲೆಕ್ಕ. ಮತ್ತೊಮ್ಮೆ ಪರಿಶೀಲನೆ ನಡೆಸಿದರೆ ತಪ್ಪಿತಸ್ಥರು ಯಾರು ಎಂಬುದು ತಿಳಿಯುತ್ತದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು