ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕಣ್ಣಲ್ಲಿ ಕೇಂದ್ರ ಬಜೆಟ್‌

Last Updated 5 ಜುಲೈ 2019, 19:46 IST
ಅಕ್ಷರ ಗಾತ್ರ

ಶಿಕ್ಷಣ ಪರವಾದ ಬಜೆಟ್‌

ಕೇಂದ್ರದ ಬಜೆಟ್‌ ಶಿಕ್ಷಣಕ್ಕೆ ಒತ್ತು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಹೊಸ ಸುಧಾರಣೆಗಳಿಗೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಯುವಜನತೆ ಸಬಲರಾಗಲು ಶಿಕ್ಷಣ ಎಂಬ ಅಸ್ತ್ರ ಅಗತ್ಯ. ಪ್ರಸ್ತುತ ಮಂಡನೆಯಾದ ಬಜೆಟ್‌ನಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗುವುದರಲ್ಲಿ ಅನುಮಾನವಿಲ್ಲ.

-ಇರ್ಫಾನ್‌ ಖಾನ್‌, ಕರಾಟೆ ತರಬೇತುದಾರ

------------------------------------------------------------------------------------------------------------------------------------

ತೆರಿಗೆ ವಿನಾಯಿತಿ ಬಜೆಟ್‌

ಈ ಸಾಲಿನ ಬಜೆಟ್‌ ಮಧ್ಯಮವರ್ಗದ ಪರವಾಗಿದೆ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಸಾಕಷ್ಟಿವೆ. ಇಂತಹ ಕುಟುಂಬಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಉತ್ತಮ ಚಿಂತನೆ. ಮಧ್ಯಮವರ್ಗದ ಹೊರೆ ಕಡಿಮೆ ಮಾಡಿದೆ.

-ಪವಿತ್ರಾ, ವಿದ್ಯಾರ್ಥಿನಿ

------------------------------------------------------------------------------------------------------------------------------------

ಪರಿಸರ ಸ್ನೇಹಿ ಸಂಪರ್ಕಕ್ಕೆ ಉತ್ತೇಜನ

ಬಜೆಟ್‌ನಲ್ಲಿ ಇ–ವಾಹನಗಳ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಕಡಿಮೆ ಮಾಡಿರುವುದು ಒಳ್ಳೆಯ ನಿರ್ಧಾರ. ಮಾಲಿನ್ಯ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ದೇಶದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಆದ್ಯತೆ ನೀಡಿದೆ.

-ಕರಣ್, ಬ್ಯಾಂಕ್‌ ಉದ್ಯೋಗಿ

------------------------------------------------------------------------------------------------------------------------------------

‘ಅನ್ನದಾತ’ನಿಗೆ ಶಕ್ತಿ

ರೈತರಿಗಾಗಿ ಶೂನ್ಯ ಬಂಡವಾಳ ಕೃಷಿಗೆ ಬಜೆಟ್‌ ಸಹಕರಿಸಿದೆ. ಇದರಿಂದ ರೈತರ ಆದಾಯ ದುಪ್ಪಟ್ಟಾಗಲಿದೆ. ರಾಜ್ಯದಲ್ಲಿ ರೈತರ ಸಾಲಮನ್ನಾ ಎಂಬ ಸುಳ್ಳು ಭರವಸೆಗೆ ಸೆಡ್ಡು ಹೊಡೆಯುವಂತೆ ಬಜೆಟ್‌ ರೈತ ಪರವಾಗಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವುದು ಶ್ಲಾಘನೀಯ.

-ಪ್ರೇಮಾ ಎನ್‌., ಉದ್ಯೋಗಿ

------------------------------------------------------------------------------------------------------------------------------------

ತಲೆಬಿಸಿಯಾದ ‘ತೈಲ’

ದೇಶದಲ್ಲಿ ಈಗಾಗಲೇ ತೈಲ ಬೆಲೆಯಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಬಜೆಟ್‌ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದೆ. ಆದರೆ, ಇಂದಿನ ಬಜೆಟ್‌ ನನ್ನ ನಿರೀಕ್ಷೆ ಹುಸಿಗೊಳಿಸಿದೆ. ಇದರಿಂದ ಮಧ್ಯಮವರ್ಗಕ್ಕೆ ತೀವ್ರ ಪೆಟ್ಟು ಬೀಳಲಿದೆ.

- ಕೆ.ಮುರಳಿ ಕೃಷ್ಣ, ವ್ಯಾಪಾರಿ

------------------------------------------------------------------------------------------------------------------------------------

‘ಆರೋಗ್ಯ’ಕರ ಬಜೆಟ್‌

ಬಜೆಟ್‌ನಲ್ಲಿ ಆರೋಗ್ಯ ಸಂಬಂಧಿ ಪರಿಕರಗಳು ಅಗ್ಗವಾಗಿದ್ದು, ಮಧ್ಯಮವರ್ಗದವರ ಆರೋಗ್ಯ ಸುಧಾರಣೆಯಾಗಲು ನೆರವಾಗಲಿದೆ. ಇದನ್ನು ಆರೋಗ್ಯಕರ ಬಜೆಟ್‌ ಎಂದರೆ ತಪ್ಪಾಗಲಾರದು.

-ತನುಜಾ ಟಿ.ಜೆ., ಛಾಯಾಗ್ರಾಹಕಿ

------------------------------------------------------------------------------------------------------------------------------------

‘ನಾರಿ’ಗೆ ಬಲ

ದೇಶದ ಎಲ್ಲ ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲ ಘೋಷಿಸಿರುವ ನಿರ್ಣಯ ಮೆಚ್ಚುವಂತದ್ದು. ಮುದ್ರಾ ಯೋಜನೆಯಡಿ ಮಹಿಳಾ ಸಂಘಗಳಿಗೆ ₹1 ಲಕ್ಷ ಸಾಲ ಘೋಷಿಸಿವ ಮೂಲಕ ಮಹಿಳೆಯರಿಗೆ ಬಲ ತುಂಬಿದೆ. ಇದರಿಂದ ಮಧ್ಯಮವರ್ಗದ ಕುಟುಂಬಗಳು ಸದೃಢವಾಗಲಿವೆ.

-ಎನ್. ರೂಪಾ,ಗೃಹಿಣಿ

------------------------------------------------------------------------------------------------------------------------------------

ಚಾಲಕರ ವಿರೋಧಿ ಬಜೆಟ್‌

ಈ ಬಾರಿಯ ಬಜೆಟ್‌ ವಾಹನ ಚಾಲಕರ ವಿರೋಧಿ ರೂಪ ತಾಳಿದೆ. ಏಕಾಏಕಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿದ ಕೇಂದ್ರದ ನಡೆಗೆ ನನ್ನ ವಿರೋಧವಿದೆ. ಬೆಲೆ ಏರಿಕೆಯಿಂದ ಖಾಸಗಿ ವಾಹನ ಚಾಲಕರು ಪರದಾಡಬೇಕಾಗಿದೆ. ಸಾರ್ವಜನಿಕರ ಹಿತ ಕಾಯಬೇಕಾದ ಸರ್ಕಾರ ದುಡುಕಿದೆ.

- ಭೈರವ ಸಿದ್ಧರಾಮ, ಅಧ್ಯಕ್ಷ, ಕರ್ನಾಟಕ ಪ್ರವಾಸೋದ್ಯಮ ಖಾಸಗಿ ಸಾರಿಗೆ

ವಾಹನ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT