ಗುರುವಾರ , ಜನವರಿ 23, 2020
26 °C
ಬಿಎಂಟಿಸಿ ಸಿದ್ಧತೆ

ಮತ್ತೆ 4 ಕಾರಿಡಾರ್‌ಗಳಲ್ಲಿ ಬಸ್‌ ಆದ್ಯತಾ ಪಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಟಿನ್‌ ಫ್ಯಾಕ್ಟರಿವರೆಗೆ ಬಿಎಂಟಿಸಿ ಬಸ್‌ಗಳಿಗೆ ಆದ್ಯತಾ ಪಥ ಆರಂಭಿಸಿದ ಬಳಿಕ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಇಳಿಕೆ ಕಂಡ ಪರಿಣಾಮ ಇನ್ನೂ ನಾಲ್ಕು ಕಾರಿಡಾರ್‌ಗಳಿಗೆ ಈ ಯೋಜನೆ ವಿಸ್ತರಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

‘ಬಸ್‌ ಆದ್ಯತಾ ಪಥಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಟಿನ್‌ ಫ್ಯಾಕ್ಟರಿವರೆಗಿನ ಮಾರ್ಗದಲ್ಲಿ ದಟ್ಟಣೆ ಅವಧಿಯಲ್ಲಿ ಸಂಚಾರದ ಸಮಯ ಶೇ 60ರಷ್ಟು ಕಡಿಮೆ ಆಗಿದೆ. ಹಾಗಾಗಿ, ನಾವು ಇನ್ನಷ್ಟು ಕಡೆಗೆ ಈ ಯೋಜನೆಯನ್ನು ವಿಸ್ತರಿಸಲಿದ್ದೇವೆ’ ಎಂದು ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌.ನಂದೀಶ್‌ ರೆಡ್ಡಿ ತಿಳಿಸಿದರು.

‘ಬಸ್‌ ಆದ್ಯತಾ ಪಥ ಯಶಸ್ವಿ ಆಗಬಾರದು ಎಂದು ಟ್ಯಾಕ್ಸಿ ಲಾಬಿ ಪ್ರಯತ್ನಿಸುತ್ತಿದೆ. ಆದ್ಯತಾ ಪಥದಲ್ಲಿ ಬೇರೆ ವಾಹನ ಸಂಚಾರ ನಿಷೇಧಿಸಿದ್ದರೂ ಕೆಲವು ಟ್ಯಾಕ್ಸಿಗಳು ಬೇಕೆಂದೇ ಅದರ ಒಳಗೆ ಸಂಚರಿಸುತ್ತಿವೆ. ಇದಕ್ಕೆಲ್ಲ ನಾವು ಸೊಪ್ಪು ಹಾಕುವುದಿಲ್ಲ’ ಎಂದರು.

‘ಸಿಲ್ಕ್‌ ಬೋರ್ಡ್‌ನಿಂದ ಎಲೆಕ್ಟ್ರಾನಿಕ್‌ ರಸ್ತೆವರೆಗೆ, ಟಿನ್‌ ಫ್ಯಾಕ್ಟರಿಯಿಂದ ಹೆಬ್ಬಾಳದವರೆಗೆ, ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿವರೆಗೆ (ಹೊರ ವರ್ತುಲ ರಸ್ತೆ) ಹಾಗೂ ಗೊರಗುಂಟೆಪಾಳ್ಯದಿಂದ ನಾಗಸಂದ್ರದವರೆಗಿನ (ತುಮಕೂರು ರಸ್ತೆ) ರಸ್ತೆಗಳಲ್ಲಿ ಬಸ್‌ ಆದ್ಯತಾ ಪಥ ಆರಂಭಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಎಸ್‌.ರಾಜೇಶ್‌ ತಿಳಿಸಿದರು.

‘ಈ ಹಿಂದೆ ಈ ಮಾರ್ಗದಲ್ಲಿ ತಿಂಗಳಿಗೆ ಸರಾಸರಿ 40 ಸಾವಿರ ಮಂದಿ ಪ್ರಯಾಣಿಸುತ್ತಿದ್ದರು. ಬಸ್‌ ಆದ್ಯತಾ ಪಥ ಆರಂಭವಾದ ಬಳಿಕ ಸರಾಸರಿ 95 ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ’ ಎಂದು ಉಪ ಸಂಚಾರ ವ್ಯವಸ್ಥಾಪಕ ವಿ.ನಾಗರಾಜ್ ತಿಳಿಸಿದರು.

‘ಮೆಟ್ರೊ ಸಂಪರ್ಕಕ್ಕೆ ಮತ್ತೆ 90 ಬಸ್‌’

‘ನಮ್ಮ ಮೆಟ್ರೊ’ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ ಸಂಪರ್ಕ ಕಲ್ಪಿಸುವ ಬಗ್ಗೆ ಅನೇಕರು ಒತ್ತಾಯಿಸಿದರು.

‘ಈಗಾಗಲೇ 135 ಮಾರ್ಗಗಳಲ್ಲಿ ಮೆಟ್ರೊ ಸಂಪರ್ಕ ಸೇವೆ ಒದಗಿಸುತ್ತಿದ್ದು, ನಿತ್ಯ 1,700 ಟ್ರಿಪ್‌ ನಡೆಸುತ್ತಿದ್ದೇವೆ. ಇದನ್ನು ಇನ್ನಷ್ಟು ಹೆಚ್ಚಿಸಲು ಸಿದ್ಧತೆ ನಡೆದಿದೆ’ ಎಂದು ನಂದೀಶ್‌ ರೆಡ್ಡಿ ತಿಳಿಸಿದರು.

‘ಈ ಸಲುವಾಗಿ 90 ಮಿಡಿ ಬಸ್‌ಗಳನ್ನು ಖರೀದಿಸುವ ಪ್ರಸ್ತಾವ ಸಿದ್ಧವಾಗಿದೆ. ಇದರಿಂದ ನಿತ್ಯ 1,000 ಹೆಚ್ಚುವರಿ ಟ್ರಿಪ್‌ ನಡೆಸುವುದು ಸಾಧ್ಯವಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ’ ಎಂದರು.

‘ಇನ್ನು ಕೆಲವೇ ತಿಂಗಳಲ್ಲಿ ನಗರದ ಸಾರಿಗೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಲಿದ್ದೇವೆ. ಸಂಚಾರ ವ್ಯವಸ್ಥೆ ಸುಧಾರಣೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು