ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸನಪುರಕ್ಕೆ ಎಪಿಎಂಸಿ ವಹಿವಾಟು ಸ್ಥಳಾಂತರಕ್ಕೆ ಆಕ್ಷೇಪ

Last Updated 10 ಫೆಬ್ರುವರಿ 2023, 17:01 IST
ಅಕ್ಷರ ಗಾತ್ರ

ಬೆಂಗಳೂರು: ಈರುಳ್ಳಿ, ಆಲೂಗಡ್ಡೆ, ಶುಂಠಿ ಮತ್ತು ಬೆಳ್ಳುಳ್ಳಿ ವಹಿವಾಟನ್ನು ಯಶವಂತಪುರದಿಂದ ದಾಸನಪುರ ಎಪಿಎಂಸಿಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

1975ರಿಂದ ಯಶವಂತಪುರ ಎಪಿಎಂಸಿಯಲ್ಲಿ 2 ಸಾವಿರಕ್ಕೂ ಹೆಚ್ಚು ಪರವಾನಗಿ ಪಡೆದ ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. 106 ಎಕರೆ ವಿಸ್ತೀರ್ಣದಲ್ಲಿರುವ ಪ್ರಾಂಗಣಕ್ಕೆ 12ಕ್ಕೂ ಹೆಚ್ಚು ಗೇಟ್‌ಗಳಿವೆ. ವಾಹನ ನಿಲುಗಡೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಇದೆ. ₹100 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಾರ್ಕಿಂಗ್ ಸಂಕೀರ್ಣ ಉದ್ಘಾಟನೆಗೆ ಸಿದ್ಧವಾಗಿದೆ ಎಂದು ತಿಳಿಸಿದೆ.

ರೈಲ್ವೆ ನಿಲ್ದಾಣ, ಮೆಟ್ರೊ ರೈಲು ಸಂಪರ್ಕ, ರಾಷ್ಟ್ರೀಯ ಹೆದ್ದಾರಿ ಸೇರಿ ಸಾಕಷ್ಟು ಸೌಕರ್ಯಗಳಿದ್ದು, ವಹಿವಾಟು ಸುಗಮವಾಗಿ ನಡೆಯುತ್ತಿದೆ. ರೈತರು, ವರ್ತಕರು, ಚಿಲ್ಲರೆ ವ್ಯಾಪಾರಿಗಳು ಬಂದು ಹೋಗಲು ಅನುಕೂಲಗಳಿವೆ. ಒಟ್ಟು 89 ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿದ್ದು, ಇವುಗಳಲ್ಲಿ ನಾಲ್ಕು ಪದಾರ್ಥಗಳ ವಹಿವಾಟನ್ನು ದಾಸನಪುರಕ್ಕೆ ಸ್ಥಳಾಂತರಿಸಲು ಹೊರಟಿರುವುದು ಸರಿಯಲ್ಲ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ಸಂಘ ಆಕ್ಷೇಪಣೆ ಸಲ್ಲಿಸಿದೆ.

ದಾಸನಪುರದಲ್ಲಿ ನಿರ್ಮಿಸಿರುವ ಹೊಸ ಮಾರುಕಟ್ಟೆಯು ರಾಷ್ಟ್ರೀಯ ಹೆದ್ದಾರಿಯಿಂದ 6 ಕಿಲೋ ಮಿಟರ್ ದೂರದಲ್ಲಿದ್ದು, ರಸ್ತೆ ಸೇರಿದಂತೆ ಯಾವುದೇ ಸೌಕರ್ಯ ಇಲ್ಲ. ಬಹುತೇಕ ವರ್ತಕರು 60 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು. ಆಸ್ಪತ್ರೆ ಸೇರಿ ಯಾವುದೇ ಸೌಲಭ್ಯ ಇಲ್ಲದ ದಾಸನಪುರಕ್ಕೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿದರೆ ವರ್ತಕರ ಆರೋಗ್ಯ ಮತ್ತು ವಹಿವಾಟಿನ ಮೇಲೆ ಹೊಡೆತ ಬೀಳಲಿದೆ ಎಂದು ಸಂಘ ತಿಳಿಸಿದೆ.

ವರ್ತಕರಿಗೆ ಅನನುಕೂಲ ಆಗಲಿರುವ ನಿರ್ಧಾರಗಳನ್ನು ಕೈಬಿಟ್ಟು ಯಶವಂತಪುರ ಮಾರುಕಟ್ಟೆಯಲ್ಲೇ ಈ ನಾಲ್ಕು ಪದಾರ್ಥಗಳ ವಹಿವಾಟು ಮುಂದುವರಿಸಲು ಅವಕಾಶ ನೀಡಬೇಕು. ಸ್ಥಳಾಂತರಕ್ಕೆ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸಂಘದ ಅಧ್ಯಕ್ಷ ಸಿ.ಉದಯಶಂಕರ್ ಮನವಿ ಮಾಡಿದ್ದಾರೆ.

‘ಜಂಟಿ ಸಮಿತಿಯ ವರದಿ ಆಧರಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಜಂಟಿ ಸಮಿತಿ ವರದಿಯ ಪ್ರತಿ ವರ್ತಕರಿಗೆ ಒದಗಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರೂ ಮಾಹಿತಿ ನೀಡಿಲ್ಲ. ಈ ಎಲ್ಲಾ ಕಾರಣಗಳಿಂದ ಮಾರುಕಟ್ಟೆ ಸ್ಥಳಾಂತರ ನಿರ್ಧಾರವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕಾಟಾಚಾರಕ್ಕೆ ಆಕ್ಷೇಪಣೆ ಆಹ್ವಾನ: ಕೆಆರ್‌ಎಸ್‌
ಈರುಳ್ಳಿ, ಆಲೂಗಡ್ಡೆ, ಶುಂಠಿ ಮತ್ತು ಬೆಳ್ಳುಳ್ಳಿ ವಹಿವಾಟ ಸ್ಥಳಾಂತರಕ್ಕೆ ಆದೇಶ ಹೊರಡಿಸಿರುವ ಕೃಷಿ ಮಾರುಕಟ್ಟೆ ಇಲಾಖೆಯು ಕಾಟಾಚಾರಕ್ಕೆ ಆಕ್ಷೇಪಣೆ ಆಹ್ವಾನಿಸಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷ ದೂರಿದೆ.

ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ಆಕ್ಷೇಪಣೆ ಸಲ್ಲಿಸಿರುವ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಿ.ವಿಜಯಕುಮಾರ್, ‘ಈ ಹಿಂದೆ ವ್ಯಾಪಾರ ನಡೆಸದೆ ಇರುವವರಿಗೆ ದಾಸನಪುರ ಮಾರುಕಟ್ಟೆಯಲ್ಲಿ ದೊಡ್ಡ ವಿಸ್ತೀರ್ಣದ ಮಳಿಗೆಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ. ಮಳಿಗೆ ಪಡೆದವರು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಈಗ ಚಿಕ್ಕ ವಿಸ್ತೀರ್ಣದ ಮಳಿಗೆಗಳನ್ನು ಹಂಚಿಕೆ ಮಾಡಲು ಹೊರಟಿರುವುದು ಅಕ್ಷಮ್ಯ. ಮಳಿಗೆ ಹಂಚಿಕೆ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಸ್ತುತ ಯಶವಂತಪುರ ಮುಖ್ಯ ಮಾರುಕಟ್ಟೆಯಲ್ಲಿ 309 ಅಧಿಕೃತ ವರ್ತಕರಿದ್ದು, ದಾಸನಪುರ ಉಪ ಮಾರುಕಟ್ಟೆಯಲ್ಲಿ 266 ಮಳಿಗೆಗಳಷ್ಟೇ ಲಭ್ಯ ಇವೆ. 43 ವರ್ತಕರುಗಳಿಗೆ ಮಳಿಗೆಗಳು ಇಲ್ಲ. ರಸ್ತೆ ಸೇರಿದಂತೆ ಯಾವುದೇ ಸೌಕರ್ಯ ಇಲ್ಲದ ದಾಸನಪುರಕ್ಕೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT