ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಟಾಪಿಂಗ್‌: ನೆಲಕಚ್ಚಿದ ವ್ಯಾಪಾರ

ಬಿವಿಕೆ ಅಯ್ಯಂಗಾರ ರಸ್ತೆಯ ಕಾಮಗಾರಿಯನ್ನು ಮಳೆಗಾಲದಲ್ಲಿ ಆರಂಭಿಸಿದಕ್ಕೆ ವ್ಯಾಪಾರಿಗಳ ಆಕ್ಷೇಪ
Published 31 ಮೇ 2024, 23:31 IST
Last Updated 31 ಮೇ 2024, 23:31 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತ ನೋಡಿದರತ್ತ ಅಗೆದಿರುವ ರಸ್ತೆ, ಅಲ್ಲಲ್ಲಿ ತೋಡಿರುವ ಗುಂಡಿಗಳು, ಬಟ್ಟೆ, ಅಲಂಕಾರಿಕ ಮತ್ತು ಎಲೆಕ್ಟ್ರಿಕಲ್‌ ವಸ್ತುಗಳ ಮೇಲೆ ಕುಳಿತಿರುವ ದೂಳನ್ನು ಸ್ವಚ್ಛಗೊಳಿಸುತ್ತಿರುವ ವ್ಯಾಪಾರಿಗಳು...

ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ ರಸ್ತೆಯ ದುಃಸ್ಥಿತಿ ಇದು.

ಒಂದೂವರೆ ತಿಂಗಳ ಹಿಂದೆ ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್‌ ರಸ್ತೆಯ ಏಕ್‌ ಮೀನಾರ್‌ ಮಸೀದಿಯಿಂದ ಕಂಚಿ ಅಪೆಕ್ಸ್‌ ಸೊಸೈಟಿವರೆಗೆ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭವಾಗಿದೆ. ಕಾಮಗಾರಿಗಾಗಿ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿರುವುದರಿಂದ, ಸ್ಥಳೀಯ ವಾಹನ ಓಡಾಟ ಹಾಗೂ ನಿಲುಗಡೆಗೆ ಅಡ್ಡಿಯಾಗಿದೆ. ವಾಹನಗಳ ಸಂಚಾರಕ್ಕಾಗಿ ಬದಲಿ ಮಾರ್ಗವನ್ನು ಕಲ್ಪಿಸಲಾಗಿದೆ. ಆದರೆ, ಮಳಿಗೆಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ಶೇ 30–40ರಷ್ಟು ವ್ಯಾಪಾರ–ವಹಿವಾಟು ಕುಸಿದಿದೆ.

ಬಿವಿಕೆ ಅಯ್ಯಂಗಾರ್‌ ರಸ್ತೆಯ ಮೂಲಕವೇ ಚಿಕ್ಕಪೇಟೆಗೆ ಸಾವಿರಾರೂ ಜನ ಭೇಟಿ ನೀಡುತ್ತಾರೆ. ಇಲ್ಲಿನ ಕಾಂಕ್ರೀಟ್‌ ರಸ್ತೆಯನ್ನು ನಾಲ್ಕೈದು ಅಡಿವರೆಗೆ ಅಗೆದು ಹಾಕಲಾಗಿದೆ. ರಸ್ತೆಯ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಹೋಟೆಲ್‌ಗಳಿಗೆ ಹೋಗಲು ರಸ್ತೆ ಇಲ್ಲ. ಮಳೆಗಾಲದಲ್ಲಿ ಕಾಮಗಾರಿ ಪ್ರಾರಂಭಿಸಿರುವುದರಿಂದ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

‘ಈ ರಸ್ತೆಯಲ್ಲಿ ಜವಳಿ, ಪಾದರಕ್ಷೆಗಳು, ಮಹಿಳೆಯರ ಅಲಂಕಾರಿಕ ಹಾಗೂ ದಿನಬಳಕೆ ವಸ್ತುಗಳ ಅಂಗಡಿಗಳಿವೆ. ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಜನ ಓಡಾಡದಂತಹ ಪರಿಸ್ಥಿತಿ ಇದೆ. ಇದರಿಂದ, ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಅಂಗಡಿಗಳ ಬಾಡಿಗೆ ಹಾಗೂ ಕಾರ್ಮಿಕರಿಗೆ ವೇತನ ನೀಡಲು ಆಗುತ್ತಿಲ್ಲ’ ಎಂದು ವ್ಯಾಪಾರಿಗಳು ಅವಲತ್ತು ತೋಡಿಕೊಂಡರು.

‘ರಸ್ತೆ ಬದಿ ಬಾಳೆಹಣ್ಣು ಮಾರಿಕೊಂಡು ಜೀವನ ನಡೆಸುತ್ತಿದ್ದೇನೆ. ಕಾಮಗಾರಿಯಿಂದ ಒಳ್ಳೆಯ ರಸ್ತೆಯೇನೋ ಬರುತ್ತಿದೆ. ಇದಕ್ಕೆ ನನ್ನ ವಿರೋಧವಿಲ್ಲ. ಒಂದು ತಿಂಗಳಿನಿಂದ ವ್ಯಾಪಾರವೇ ಇಲ್ಲ. ಅಗೆದ ರಸ್ತೆಯ ಮಧ್ಯದಲ್ಲಿಯೇ ಕುಳಿತುಕೊಂಡು ಬಾಳೆಹಣ್ಣು ಮಾರುತ್ತಿದ್ದೇನೆ. ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಬರುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಬಾಳೆಹಣ್ಣು ವ್ಯಾಪಾರಿ ಅಂಬಿಕಾ ಸಂಕಟ ಹೊರಹಾಕಿದರು.

‘₹1 ಕೋಟಿ ವೆಚ್ಚದಲ್ಲಿ ಬಿವಿಕೆ ಅಯ್ಯಂಗಾರ್‌ ರಸ್ತೆಯ 200 ಮೀಟರ್‌ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಾಗಿದೆ. ಮೂರು ತಿಂಗಳ ಒಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ. ರಸ್ತೆ ಮಧ್ಯೆ ಒಳಚರಂಡಿ ಪೈಪ್‌ ಮತ್ತು ಬೆಸ್ಕಾಂ ಕೇಬಲ್‌ ಮತ್ತು ಆಪ್ಟಿಕಲ್ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ನಂತರ ವೈಟ್‌ ಟಾಪಿಂಗ್‌ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಬಿಬಿಎಂಪಿ ಎಂಜಿನಿಯರ್‌ರೊಬ್ಬರು ತಿಳಿಸಿದ್ದಾರೆ.

ವ್ಯಾಪಾರಿಗಳು ಏನಂತಾರೆ?

ಬಿವಿಕೆ ಅಯ್ಯಂಗಾರ್‌ ರಸ್ತೆಯ ಕಾಮಗಾರಿ ಕೈಗೊಂಡ ಪರಿಣಾಮ ನಮ್ಮ ವ್ಯಾಪಾರ ಕುಸಿತಗೊಂಡಿದೆ. ಪ್ರತಿನಿತ್ಯ ದೂಳಿನ ಸಮಸ್ಯೆ ಹೆಚ್ಚಾಗುತ್ತಿದ್ದು ಇಲ್ಲಿನ ವ್ಯಾಪಾರಿಗಳು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಖಲೀಲ್‌ ಅಹ್ಮದ್‌ ವ್ಯಾಪಾರಿ ಅಭಿವೃದ್ಧಿಯ ಹೆಸರಿನಲ್ಲಿ ಚೆನ್ನಾಗಿದ್ದ ರಸ್ತೆ ಅಗೆದು ಹಾಗಿಯೇ ಬಿಡಲಾಗಿದೆ. ಇಲ್ಲಿನ ವ್ಯಾಪಾರಿಗಳಿಗೆ ತಿಂಗಳಿಗೆ ₹1 ಲಕ್ಷ ನಷ್ಟವಾಗುತ್ತಿದೆ. ಕಾರ್ಮಿಕರಿಗೆ ವೇತನ ನೀಡಲು ಆಗುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು - ಭರತ್ ಕುಮಾರ್, ಎಲೆಕ್ಟ್ರಿಕಲ್ ಅಂಗಡಿ ಮಾಲೀಕ

ಬಿವಿಕೆ ಅಯ್ಯಂಗಾರ್‌ ರಸ್ತೆಯ ಕಾಮಗಾರಿ ಕೈಗೊಂಡ ಪರಿಣಾಮ ನಮ್ಮ ವ್ಯಾಪಾರ ಕುಸಿತಗೊಂಡಿದೆ. ಪ್ರತಿನಿತ್ಯ ದೂಳಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇಲ್ಲಿನ ವ್ಯಾಪಾರಿಗಳು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ - ಖಲೀಲ್‌ ಅಹ್ಮದ್‌, ವ್ಯಾಪಾರಿ

ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿರುವುದು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿರುವುದು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿರುವ ಜಾಗದಲ್ಲೇ 20 ವರುಷದಿಂದ ಸತತವಾಗಿ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಅಂಬಿಕಾ ಅವರು ವ್ಯಾಪಾರ ಕಡಿಮೆಯಾದರೂ ಕೂಡ ಬೇರೆ ಸ್ಥಳ ಸಿಗದ ಕಾರಣ ಕೆಲಸ ನಡೆಯುತ್ತಿರುವ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿರುವ ಜಾಗದಲ್ಲೇ 20 ವರುಷದಿಂದ ಸತತವಾಗಿ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಅಂಬಿಕಾ ಅವರು ವ್ಯಾಪಾರ ಕಡಿಮೆಯಾದರೂ ಕೂಡ ಬೇರೆ ಸ್ಥಳ ಸಿಗದ ಕಾರಣ ಕೆಲಸ ನಡೆಯುತ್ತಿರುವ ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT