ಗುರುವಾರ , ಜುಲೈ 7, 2022
25 °C
ಸಮಾಜವಾದಿ ವಿಚಾರ ಯಾತ್ರೆಯಲ್ಲಿ ಭಾಗವಹಿಸಿದ್ದ ಸಾಹಿತಿ ದೇವನೂರ ಮಹಾದೇವ ಸಲಹೆ

ಸಿಎಎ| ದಲಿತರು, ಪ್ರಗತಿಪರರು ಒಂದಾಗಿ: ಸಾಹಿತಿ ದೇವನೂರ ಮಹಾದೇವ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದಲಿತ ಸಂಘಟನೆಗಳ ಎಲ್ಲಾ ಬಣಗಳೂ ಒಂದಾಗಿ ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟಕ್ಕೆ ಇಳಿಯಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ಸ್ವಾತಂತ್ರ್ಯ ಆಂದೋಲನ ಮತ್ತು ಸಮಾಜವಾದಿ ಆಂದೋಲನಗಳನ್ನು ಪುನರುಜ್ಜೀವನಗೊಳಿಸಲು ಸಮಾಜವಾದಿ ಸಮಾಗಮ, ಸಮಾಜವಾದಿ ಅಧ್ಯಯನ ಕೇಂದ್ರ, ರಾಷ್ಟ್ರಸೇವಾ ದಳವು ಹಮ್ಮಿಕೊಂಡಿದ್ದ ಸಮಾಜವಾದಿ ವಿಚಾರ ಯಾತ್ರೆಯನ್ನು ಪುರಭವನದ ಬಳಿ ಭಾನುವಾರ ಸ್ವಾಗತಿಸಿ ಅವರು ಮಾತನಾಡಿದರು.

‘ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕತೆ ಕುಸಿದಿರುವ ಬಗ್ಗೆ ಜನ ಪ್ರಶ್ನಿಸಿದರೆ ಅವರ ಪೌರತ್ವದ ದಾಖಲೆಯನ್ನು ಸರ್ಕಾರ ಕೇಳುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ಕಿವಿಗೊಡುತ್ತಿಲ್ಲ. ಇಂತಹ ಸಂದರ್ಭದ‌ಲ್ಲಿ ಪ್ರಗತಿಪರ, ದಲಿತ ಸಂಘಟನೆಗಳು ಒಗ್ಗೂಡುವ ಅನಿವಾರ್ಯವಿದೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಸಮಾಜವಾದಿ ಮುಖಂಡ ಅಲಿಬಾಬಾ, ಕಾಂಗ್ರೆಸ್ ಮುಖಂಡರಾದ ಕವಿತಾ ರೆಡ್ಡಿ, ರೈತ ಮುಖಂಡ ವೀರಸಂಗಯ್ಯ, ಕೃಷಿ ತಜ್ಞ ಪ್ರಕಾಶ್‌ ಕಮ್ಮರಡಿ ಮಾತನಾಡಿದರು.

ನವದೆಹಲಿಯಲ್ಲಿ ಜ.30ರಂದು ಆರಂಭವಾದ ಮೊದಲ ಹಂತದ ಯಾತ್ರೆ ಮಾ. 23ಕ್ಕೆ ಹೈದರಾಬಾದ್‌ ತಲುಪಲಿದೆ. ಎರಡನೇ ಹಂತದ ಯಾತ್ರೆ ಏಪ್ರಿಲ್‌ 10ರಂದು ಬಿಹಾರದ ಚಂಪಾರಣ್ಯದಿಂದ ಹೊರಟು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ. ಮೇ 17ರಂದು ಪಟ್ನಾ ತಲುಪಲಿದೆ. ಮೂರನೇ ಹಂತದ ಯಾತ್ರೆ ಅ.11ರಂದು ಬಿಹಾರದ ಸಿತಾಬ್ದಿಯಾರದಿಂದ ಹೊರಟು ಅ.31ಕ್ಕೆ ನವದೆಹಲಿ ತಲುಪಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

‘ದೇಶದ್ರೋಹಿಯಂತೆ ಬಿಂಬಿಸುವುದು ತಪ್ಪು’

‘ಆವೇಶಕ್ಕೊಳಗಾಗಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಅದನ್ನು ದೇಶದ್ರೋಹದ ಕೆಲಸ ಎಂದು ಆರ್‌ಎಸ್‌ಎಸ್‌ ಮತ್ತು ಸರ್ಕಾರ ಬಿಂಬಿಸುತ್ತಿದೆ. ಅವಳ ಮಾತನ್ನು ಖಂಡಿಸೋಣ. ಆದರೆ, ಆಕೆಯನ್ನು ದೇಶದ್ರೋಹಿಯಂತೆ ಬಿಂಬಿಸುವುದು ತಪ್ಪು’ ಎಂದು ಮಾನವಹಕ್ಕು ಹೋರಾಟಗಾರ ನಗರಗೆರೆ ರಮೇಶ್‌ ಅಭಿಪ್ರಾಯಪಟ್ಟರು. 

‘ಮೋದಿ ಮತ್ತೆ ಪ್ರಧಾನಿಯಾದರೆ ಹಿಟ್ಲರ್‌ ಮಾದರಿ ಆಳ್ವಿಕೆ’

ವೈಟ್‌ಫೀಲ್ಡ್‌: ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರೆ, ಹಿಟ್ಲರ್‌ ಆಳ್ವಿಕೆಯ ಕಾಲ ಮರುಕಳಿಸಲಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ‘ದೇಶ ವಿರೋಧಿ ಹೇಳಿಕೆ ನೀಡುವವರು, ದೇಶದ್ರೋಹ ಮಾಡುವವರ ವಿರುದ್ಧ ಕ್ರಮ ಜರುಗಿಸಲು ಅಭ್ಯಂತರವಿಲ್ಲ. ಆದರೆ, ಸಭೆಯಲ್ಲಿ ಯಾರೋ ಒಬ್ಬರು ತಪ್ಪು ಮಾಡಿದ ಮಾತ್ರಕ್ಕೆ ಆಯೋಜಕರಿಗೆ ತೊಂದರೆ ನೀಡಿ,ಹೋರಾಟವನ್ನು ದಮನ ಮಾಡಿದರೆ ನಾವು ಸುಮ್ಮನಿರಲ್ಲ’ ಎಂದರು.

ಪ್ರತಿಭಟನೆಯಲ್ಲಿ ವಕೀಲ ವಿನಯ್ ಶ್ರೀನಿವಾಸ್, ಮುಫ್ತಿ ಇಸ್ತೆಖಾರ್, ಅಬ್ದುಲ್‌ ಖಾದಿರ್‌ ಉಮ್ರಿ, ಡಾ. ಪ್ರಕಾಶ್, ಮೋಹನ್ ರಾಜ್, ಫ್ರಾನ್ಸಿಸ್‌ ಗುಟ್ಟಪಲ್ಲಿ ಪಾಲ್ಗೊಂಡಿದ್ದರು.

ದೇಶದ್ರೋಹಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ ದೂರು ಸಲ್ಲಿಕೆ

ಧಾರವಾಡ: ಅಳ್ನಾವರ ಪಟ್ಟಣದ ಮಣಕವಾಡ ಬಡಾವಣೆ ನಿವಾಸಿ ಶಾಹಿಲ್‌ ಅಶ್ಪಾಕ್‌ ಜಮೀನ್ದಾರ್‌ ಎಂಬಾತ ಹುಬ್ಬಳ್ಳಿ ಕೆಎಲ್‌ಇ ಕಾಲೇಜು ವಿದ್ಯಾರ್ಥಿಗಳು ಕೂಗಿದ್ದ ದೇಶದ್ರೋಹದ ದೃಶ್ಯದ ತುಣುಕನ್ನು ವಾಟ್ಸ್‌ ಆ್ಯಪ್‌ ಸ್ಟೇಟಸ್‌ ಇಟ್ಟುಕೊಂಡಿದ್ದನು.

ಇದನ್ನು ನೋಡಿರುವ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅಳ್ನಾವರ ಪೊಲೀಸರಿಗೆ ದೂರು ನೀಡಿದ್ದಾರೆ. ದೃಶ್ಯವನ್ನು ಗಮನಿಸಿದ ಪಟ್ಟಣದ ನಿವಾಸಿಗಳು ಪೊಲೀಸ್‌ ಠಾಣೆ ಮುಂಭಾಗದಲ್ಲಿ ಜಮಾವಣೆಗೊಂಡು ಕ್ರಮಕ್ಕೆ  ಒತ್ತಾಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು