ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮ ಆಧರಿತ ಮೊದಲ ಕಾನೂನು’

ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ಪ್ರತಿಭಟನೆ
Last Updated 20 ಫೆಬ್ರುವರಿ 2020, 22:11 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲೇ ಮೊದಲ ಬಾರಿಗೆ ಧರ್ಮ ಆಧಾರಿತವಾಗಿ ‘ಸಿಎಎ’ ಕಾನೂನು ರೂಪಿಸಲಾಗಿದೆ. ಮುಸ್ಲಿಂ, ಹಿಂದೂ, ಸಿಖ್‌ ಸೇರಿ ಎಲ್ಲ ಧರ್ಮಗಳ ಜನ ಹಾಗೂ ಬಡವರು ಇದರಿಂದ ಕಷ್ಟ ಅನುಭವಿಸಲಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ನಿರಂತರವಾಗಿ ಹೋರಾಟ ಮಾಡಬೇಕಿದೆ’ ಎಂದು ಸಂಸದ ಅಸಾದುದ್ದೀನ್ ಒವೈಸಿ ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರೋಧಿಸಿ ‘ಹಿಂದೂ–ಮುಸ್ಲಿಂ–ಸಿಖ್‌–ಇಸಾಯಿ ಫೆಡರೇಷನ್ ಬೆಂಗಳೂರು’ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನಾವು ಭಾರತೀಯರು. ಬಿಜೆಪಿಯವರು ಹೇಳುವಂತೆ ಬೇರೆ ಯಾವ ದೇಶಕ್ಕೂ ಹೋಗುವುದಿಲ್ಲ. ನಮ್ಮ ಹಿರಿಯರು ಇಲ್ಲಿಯೇ ಇದ್ದರು. ನಾವೂ ಇಲ್ಲಿಯೇ ಇರುತ್ತೇವೆ’ ಎಂದು ತಿರುಗೇಟು ನೀಡಿದರು.

‘ಸಿಎಎ ಆಧರಿಸಿ ಗಣತಿ ಆರಂಭವಾದರೆ ಅಧಿಕಾರಿಗಳು ಮನೆಗೆ ಬರುತ್ತಾರೆ. ದಾಖಲೆ ತೋರಿಸಿದರೂ ನಿಮ್ಮ ಮೇಲೆ ಅನುಮಾನಪಟ್ಟು ವರದಿ ನೀಡುತ್ತಾರೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ನಿಮ್ಮ ಏಳಿಗೆ ಸಹಿಸದ ಯಾರಾದರೂ ಮೌಖಿಕವಾಗಿ ಹೇಳಿದರೂ ನಿಮ್ಮ ಮೇಲೆ ಅನುಮಾನದ ವರದಿ ಸಿದ್ಧವಾಗಲಿದೆ. ಇಂಥ ಕಾಯ್ದೆ ವಿರುದ್ಧ ಎಲ್ಲರೂ ಧ್ವನಿ ಎತ್ತಲೇ ಬೇಕಿದೆ’ ಎಂದು ಕರೆ ನೀಡಿದರು.

‘ಅಂದು ಹಿಟ್ಲರ್‌ ನಾನಾ ಕಸರತ್ತು ನಡೆಸಿ ಯೆಹೂದಿಗಳನ್ನು ಮುಗಿಸಿದ. ಇಂದಿನ ಗೃಹ ಸಚಿವರೂ ಅದೇ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ’ ಎಂದು ಹೇಳಿದರು.

ಮಕ್ಕಳ ತಾಯಿಗೆ ಶಿಕ್ಷೆ: ‘ಬೀದರ್‌ನಲ್ಲಿ ಇತ್ತೀಚೆಗೆ ಮಕ್ಕಳು ನಾಟಕ ಮಾಡಿದ್ದಕ್ಕೆ ತಾಯಿ ಹಾಗೂ ಶಿಕ್ಷಕಿ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು. ಅದೇ ಜಾಮೀಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ರಾಮಭಕ್ತನೊಬ್ಬ ಗುಂಡು ಹಾರಿಸಿದ. ಆತ ಬಾಲಕನೆಂದು ಬಿಜೆಪಿಯವರು ಸಬೂಬು ನೀಡಿದರು. ಬೀದರ್‌ನಲ್ಲಿ ನಾಟಕ ಮಾಡಿದ್ದ ಮಕ್ಕಳು ಮಕ್ಕಳಲ್ಲವೇ’ ಎಂದು ಒವೈಸಿ ಪ್ರಶ್ನಿಸಿದರು.

‌ಪ್ರತಿಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.

‘ಮಗಳು ಜೈಲಿನಲ್ಲೇ ಇರಲಿ’
ಚಿಕ್ಕಮಗಳೂರು: ‘ಮಗಳು ಅಮೂಲ್ಯಾ ‘ಪಾಕಿಸ್ತಾನ್ ಜಿಂದಾಬಾದ್‌’ ಎಂದು ಕೂಗಿರುವುದು ಖಂಡಿತಾ ತಪ್ಪು, ಅವಳು ಜೈಲಿನಲ್ಲಿಯೇ ಇರಲಿ’ ಎಂದು ತಂದೆ ವೊಜಲ್ಡ್‌ ಹೇಳಿದ್ದಾರೆ.

ಗುರುವಾರ ರಾತ್ರಿ ಮನೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರೊಂದಿಗೆ ಮಾತನಾಡಿರುವ ವೊಜಲ್ಡ್‌, ‘ಪೊಲೀಸರು ಪುತ್ರಿಯ ಕೈಕಾಲು ಮುರಿಯಲಿ, ನಮ್ಮದೇನು ಅಭ್ಯಂತರ ಇಲ್ಲ’ ಎಂದಿದ್ದಾರೆ.

‘ಅಮೂಲ್ಯಾಳಿಗೆ ಈ ರೀತಿ ಮಾತನಾಡಬಾರದೆಂದು ಹೇಳಿದ್ದೆ. ಆಕೆ ಕೇಳುತ್ತಿರಲಿಲ್ಲ. ಕುಟುಂಬದವರಿಗೆ ಬಹಳ ಬೇಸರ ಮಾಡಿಸಿದ್ದಾಳೆ’ ಎಂದು ಹೇಳಿದ್ದಾರೆ.
ಬಜರಂಗದಳವರು ಅಮೂಲ್ಯಾ ಮನೆಗೆ ಹೋಗಿ ವೊಜಲ್ಡ್‌ ಅವರ ಜತೆ ಮಾತುಕತೆ ನಡೆಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

‘ಸಿಎಎ ವಿರೋಧಿಸಿ ಜೈಲ್‌ ಭರೊ’
‘ದೇಶದ ಶೇ 28ರಷ್ಟು ಜನರ ಬಳಿ ಜನ್ಮ ದಿನಾಂಕದ ದಾಖಲೆಗಳೇ ಇಲ್ಲ. ಸಿಎಎ ಜಾರಿಗೆ ಬಂದರೆ 8 ಕೋಟಿ ಭಾರತೀಯರು ಪೌರತ್ವ ಕಳೆದುಕೊಳ್ಳಲಿದ್ದಾರೆ. ಹೀಗಾಗಿ, ಕಾಯ್ದೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ದೇಶದಾದ್ಯಂತ ಜೈಲ್ ಭರೋ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಅಸಾದುದ್ದೀನ್ ಒವೈಸಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT