ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಮರದ ರೆಂಬೆ, ಕೊಂಬೆಗಳು, ವಿದ್ಯುತ್ ಕಂಬಗಳನ್ನು ಆವರಿಸಿರುವ ಮರಗಳ ತೆರವು ಕಾರ್ಯಾಚರಣೆ ಅಭಿಯಾನವನ್ನು ಆರಂಭಿಸಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಜಯನಗರ 2ನೇ ಬ್ಲಾಕ್‌ನಲ್ಲಿ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದಿಂದ ನಿರಂತರವಾಗಿ ಅಪಾಯ ಸ್ಥಿತಿಯಲ್ಲಿರುವ ಮರ ಕಟಾವು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಬಿರುಗಾಳಿಯಿಂದಾಗಿ ಮರಗಳು ಬೀಳುತ್ತವೆ. ಅವುಗಳ ತೆರವಿಗೆ ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿಯಾಗಿ ತೆರವು ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಓಡಾಟ ಹಾಗೂ ವಾಹನ ದಟ್ಟಣೆ ಹೆಚ್ಚಿರುವಂತಹ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ರಾತ್ರಿ ವೇಳೆ ಕಟಾವು ಮಾಡಿ, ಕೂಡಲೇ ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ನಿರಂತರವಾಗಿರುತ್ತದೆ. ಪಾಲಿಕೆ ಹಾಗೂ ಬೆಸ್ಕಾಂ ಸೇರಿ ವಿದ್ಯುತ್ ತಂತಿಗಳಿಗೆ ತಗಲುವ ರೆಂಬೆಗಳನ್ನು ತೆರವು ಮಾಡುವ ಅಭಿಯಾನವನ್ನು ಶುಕ್ರವಾರದಿಂದ 10 ದಿನ ನಡೆಸಲಾಗುವುದು ಎಂದರು.
ಸಮೀಕ್ಷೆ: ಪ್ರಮುಖ ರಸ್ತೆಗಳಲ್ಲಿ ಸಮೀಕ್ಷೆ ಮಾಡಿ ನಂತರ ಅಪಾಯ ಸ್ಥಿತಿಯಲ್ಲಿರುವ ಮರಗಳ ತೆರವು ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಜುಲೈನಿಂದ ಈವರೆಗೆ ಒಣಗಿದ/ಅಪಾಯ ಸ್ಥಿತಿಯಲ್ಲಿರುವ 477 ಮರ ಹಾಗೂ 592 ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ನಾಗರಿಕರಿಂದ ಬಂದಿರುವ ದೂರುಗಳನ್ನು ಆಧರಿಸಿ ಮಳೆ ಗಾಳಿಗೆ ಬಿದ್ದಂತಹ ಸುಮಾರು 1,371 ಮರಗಳು ಹಾಗೂ 3,700 ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.