ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಚಲಾಯಿಸಲು ಸಜ್ಜಾದ ಕೊಳೆಗೇರಿ ಮಹಿಳೆಯರು

Last Updated 24 ಮಾರ್ಚ್ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕೊಳೆಗೇರಿ ಪ್ರದೇಶದ ಇಕ್ಕಟ್ಟಿನ ಜಾಗದಲ್ಲೇ ವಾಸವಿದ್ದುಕೊಂಡು ಬದುಕಿನ ಬಂಡಿ ಎಳೆಯುವ ಮಹಿಳೆಯರವರು. ಕುಟುಂಬದ ಆರೈಕೆಗಾಗಿಯೇ ತಮ್ಮ ಬದುಕನ್ನು ಪಣಕ್ಕಿಟ್ಟವರು. ಅಂಥ ಮಹಿಳೆಯರೀಗ ‘ಸ್ಟೇರಿಂಗ್’ ಹಿಡಿದು ಕಾರು ಚಲಾಯಿಸಲು ಸಜ್ಜಾಗಿದ್ದಾರೆ.

ಏನೋ ಸಾಧಿಸಿದ ಸಾರ್ಥಕ ಭಾವ ಅವರಲ್ಲಿ ಎದ್ದು ಕಾಣುತ್ತಿತ್ತು. ತುತ್ತಿನ ಚೀಲ ತುಂಬಿಕೊಳ್ಳಲು ಕಲಿತ ವಿದ್ಯೆ ನೆರವಾಯಿತಲ್ಲ ಎನ್ನುವ ಸಂತೃಪ್ತಿ ಈ ಕಾರು ಚಾಲಕಿಯರ ಮೊಗದಲ್ಲಿ ಮೂಡಿತ್ತು.

‘ಆ್ಯಕ್ಷನ್ ಎಯ್ಡ್‌’ ಸಂಘಟನೆಯು ‘ಡಿಎಕ್ಸ್‌ಸಿಟೆಕ್ನಾಲಜಿಸ್‌' ಸಹಯೋಗದಲ್ಲಿ ನಗರದ ಕೊಳೆಗೇರಿಗಳ 15 ಮಹಿಳೆಯರಿಗೆ ಕಾರು ಚಾಲನಾ ತರಬೇತಿ ನೀಡಲಾಗಿದ್ದು, ಅವರಿಗೆ ಭಾನುವಾರ ಪ್ರಮಾಣಪತ್ರ ವಿತರಿಸಲಾಯಿತು.

ಕೋರಮಂಗಲದ ‘ಪ್ರಥಮ್ ಮೋಟರ್ಸ್‌’ನ ಮಾರುತಿ ಡ್ರೈವಿಂಗ್ ಶಾಲೆಯ ತರಬೇತುದಾರು ಈ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ.

‘ಮಹಿಳೆಯರು ಕೂಡ ಪುರುಷರಂತೆ ವಾಹನ ಚಲಾಯಿಸಲು ಸಮರ್ಥರು ಎಂಬುದನ್ನು ಈ ತರಬೇತಿ ತೋರಿಸಿಕೊಟ್ಟಿದೆ. ಇದರ ಜತೆಗೆ ಸ್ವಯಂರಕ್ಷಣೆ, ಬೇಸಿಕ್‌ ಇಂಗ್ಲಿಷ್‌, ಜೀವನ ಕೌಶಲಗಳ ತರಬೇತಿಯನ್ನೂ ನೀಡಿದ್ದೇವೆ’ ಎಂದು ‘ಆ್ಯಕ್ಷನ್ ಎಯ್ಡ್‌’ನ ಝಾನ್ಸಿ ಹೇಳಿದರು.

‘ಚಾಲನೆ ತರಬೇತಿಗೂ ಮುನ್ನ ‘ಕಲಿಕಾ ಪರವಾನಗಿ ಪತ್ರ (ಎಲ್‌ಎಲ್‌ಆರ್‌)’ ಪಡೆಯಬೇಕಿತ್ತು. ಹೀಗಾಗಿ, ಸಂಚಾರ ಸಿಗ್ನಲ್‌ಗಳ ಬಗ್ಗೆಯೇ ಹೆಚ್ಚು ದಿನಗಳವರೆಗೆ ಮಹಿಳೆಯರಿಗೆ ಕಲಿಸಲಾಯಿತು. ವಿಷಯವನ್ನು ಬಹುಬೇಗನೇ ಕಲಿತ ಮಹಿಳೆಯರು, ಆರ್‌ಟಿಒ ಎದುರು ಪರೀಕ್ಷೆ ಎದುರಿಸಿ ಎಲ್‌ಎಲ್‌ಆರ್‌ ಪಡೆಯುವಲ್ಲಿ ಯಶಸ್ವಿಯಾದರು. ಈಗ ಕಾರು ಚಾಲನೆಯನ್ನೂ ಸಂಪೂರ್ಣವಾಗಿ ಕಲಿತಿದ್ದು, ಪರವಾನಗಿಯನ್ನೂ ಪಡೆದಿದ್ದಾರೆ. ಸ್ವಾವಲಂಬಿ ಜೀವನ ನಡೆಸಲು ಇದು ನೆರವಾಗಲಿದೆ’ ಎಂದು ತಿಳಿಸಿದರು.

ಕೆಲಸಕ್ಕೆ ಆಫರ್‌: ಚಾಲನಾ ತರಬೇತಿ ವೇಳೆ ಉತ್ತಮ ಪ್ರದರ್ಶನ ತೋರಿದ 8 ಮಹಿಳೆಯರಿಗೆ ‘ಗೋ ಪಿಂಕ್’ ಹಾಗೂ ‘ಟ್ಯಾಕ್ಸೆ’ ಕ್ಯಾಬ್‌ ಕಂಪನಿಗಳಲ್ಲಿ ಉದ್ಯೋಗಕ್ಕೆ ಅವಕಾಶ ಸಿಕ್ಕಿದೆ. ಅವರೆಲ್ಲ ವಾಹನ ಚಾಲಕಿಯರಾಗಿ ಕೆಲಸ ಮಾಡುತ್ತಿದ್ದಾರೆ.

‘ನನ್ನ ಬದುಕು ಬದಲಿಸಲು ಸುವರ್ಣ ಅವಕಾಶ ದೊರಕಿದಂತಾಗಿದೆ. ಮಹಿಳೆಯರು ಮನೆಯಿಂದ ಆಚೆ ಬಂದು ಸ್ವತಂತ್ರವಾಗಿ ದುಡಿಯಲು ಮುಂದಾಗಬೇಕು. ನಾನೂ ಸ್ವತಂತ್ರ ಬದುಕು ಕಟ್ಟಿಕೊಂಡಿದ್ದೇನೆ. ನಮಗಾಗಿ ನಾವು ಬದುಕಬೇಕು’ ಎಂದು ಫ್ಲವರ್‌ ಗಾರ್ಡನ್‌ನ ಕೊಳಗೇರಿ ನಿವಾಸಿ ಜಾನ್ಸಿ ಅಭಿಪ್ರಾಯ ಹಂಚಿಕೊಂಡರು.

‘ಕೊಳಗೇರಿಯ ಜನ ಯಾರಿಗೂ ಕಮ್ಮಿ ಇಲ್ಲ. ನಾನು ಸಿವಿಲ್‌ ಎಂಜಿನಿಯರಿಂಗ್‌ ಓದಿದ್ದೇನೆ. ಅಪ್ಪ–ಅಮ್ಮನ ಶ್ರಮದಿಂದ ಈ ಸಾಧನೆ ಮಾಡಿದ್ದೇನೆ. ಕಾರು ಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿರುವುದಕ್ಕೆ ಖುಷಿ ಇದೆ’ ಎಂದುಇಂದೂ ಅವರು ಹೇಳಿದರು.

*
ಶ್ರೀಮಂತರಂತೆ ಪರಸ್ಪರ ಕಿತ್ತು ತಿನ್ನುವ ಜನರು ಕೊಳಗೇರಿಗಳಲ್ಲಿಲ್ಲ. ಇಲ್ಲಿ, ಹಂಚಿ ತಿನ್ನುವ ಹಾಗೂ ಕೂಡಿ ಬಾಳುವ ಜನರಿದ್ದಾರೆ. ಅವರನ್ನು ಗೌರವಿಸಿ.
-ಮಂಜುಳಾ, ತರಬೇತಿ ಪಡೆದ ಮಹಿಳೆ

*
ತರಬೇತಿ ಪಡೆದು ಸ್ವಾವಂಬಿಯಾಗಿರುವ ಮಹಿಳೆಯರು ಇತರ ಕೊಳೆಗೇರಿಗಳ ಮಹಿಳೆಯರಿಗೂ ಪ್ರೇರಣೆಯಾಗಲಿ.
-ಪ್ರೀತಿ, ಡಿಎಕ್ಸ್‌ಟಿ ಟೆಕ್ನಾಲಜಿಸ್‌ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT