ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣಕ್ಕೆ ನೂತನ ಸಾಧನ ಅಭಿವೃದ್ಧಿ

ದಯಾನಂದ ಸಾಗರ್‌ ಕಾಲೇಜಿನ ವಿದ್ಯಾರ್ಥಿ ಆಶಿಕ್‌ ಸಾಧನೆ
Last Updated 23 ಜೂನ್ 2019, 13:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ದಯಾನಂದ ಸಾಗರ ಎಂಜಿನಿಯರಿಂಗ್‌ಕಾಲೇಜಿನಲ್ಲಿ ‌ಬಿ.ಇ. (ಆಟೊಮೊಬೈಲ್‌ ಎಂಜಿನಿಯರಿಂಗ್‌) ಎರಡನೇ ವರ್ಷ ವ್ಯಾಸಂಗ ಮಾಡುತ್ತಿರುವ ಎಸ್.ವಿ.ಆಶಿಕ್‌ ವಾಯುಮಾಲಿನ್ಯ ನಿಯಂತ್ರಿಸುವ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಕಾರ್ಖಾನೆಗಳು ಮತ್ತು ವಾಹನಗಳು ಉಗುಳುವ ಹೊಗೆಯಿಂದ ವಾತಾವರಣ ಸೇರುವ ಇಂಗಾಲದ ಹಾನಿಕಾರಕ ಕಣಗಳನ್ನು ತಡೆಯುವ ಕೆಲಸವನ್ನು ಈ ಸಾಧನ ಮಾಡುತ್ತದೆ ಎಂದು ಅವರು ಹೇಳಿಕೊಂಡಿದ್ದು, ಸಾಧನದ ಹಕ್ಕುಸ್ವಾಮ್ಯ ಪಡೆಯುವುದಕ್ಕಾಗಿ ಬೌದ್ಧಿಕ ಆಸ್ತಿ ಹಕ್ಕು ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ.

ಆಶಿಕ್‌ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಗ್ರಾಮದವರು. ಮಾಲಿನ್ಯ ನಿಯಂತ್ರಿಸುವ 35 ಮಾದರಿಗಳನ್ನು ರೂಪಿಸಿದ ನಂತರ, ಅಂತಿಮವಾಗಿ ಈ ಸಾಧನ ಅಭಿವೃದ್ಧಿಪಡಿಸಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಲು ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತಿರುವುದು ಕಾರ್ಖಾನೆ ಹಾಗೂ ವಾಹನಗಳು ಉಗುಳುತ್ತಿರುವ ಹೊಗೆ. ಅಂತಹ ಹೊಗೆ ನಿಯಂತ್ರಣವೇ ಈ ಸಾಧನದ ಪ್ರಮುಖ ಕೆಲಸ ಎಂದು ಹೇಳುತ್ತಾರೆ ಆಶಿಕ್.

‘ಏಳನೇ ತರಗತಿಯಲ್ಲಿ ಶಿಕ್ಷಕರೊಬ್ಬರು ವಾಯುಮಾಲಿನ್ಯ ಕುರಿತು ಪಾಠ ಮಾಡುತ್ತಿದ್ದರು. ಆಗಲೇ, ಮಾಲಿನ್ಯ ನಿಯಂತ್ರಣಕ್ಕೆ ಸಾಧನವೊಂದನ್ನು ಕಂಡುಹಿಡಿಯಬೇಕು ಎಂಬ ಕನಸು ಮೊಳಕೆಯೊಡೆದಿತ್ತು. 12ನೇ ತರಗತಿಯಲ್ಲಿ ಮೊದಲ ಬಾರಿಗೆ ಮಾದರಿಯೊಂದನ್ನು ರೂಪಿಸಿದೆ. ಕಳೆದ ವರ್ಷ ಈಗಿರುವ ಅಂತಿಮ ಸಾಧನ ರೂಪು ತಳೆಯಿತು’ ಎಂದು ಅವರು ಹೇಳಿದರು.

‘ನನ್ನ ಈ ಕಾರ್ಯಕ್ಕೆತಂದೆ ವಸಂತಕುಮಾರ್‌ ಶೇಠ್‌, ತಾಯಿ ಶಾರದಾ ಬೆಂಬಲವಾಗಿ ನಿಂತಿದ್ದಾರೆ. ಸ್ನೇಹಿತ ಪ್ರತೀಕ್‌ ಚಂದ್ರ ಸಹಕಾರ ನೀಡಿದ್ದಾರೆ. ಅಲ್ಲದೆ, ನಮ್ಮ ಕಾಲೇಜಿನ ಪ್ರೊ. ನವೀನ್‌ ಸಂಶೋಧನಾ ವರದಿ ರೂಪಿಸಲು ಸಹಾಯ ಮಾಡಿದ್ದಾರೆ’ ಎಂದರು.

ಹೇಗೆ ಕೆಲಸ ಮಾಡುತ್ತದೆ?
ಹೊಗೆಯಲ್ಲಿನ ಹಾನಿಕಾರಕ ಇಂಗಾಲದ ಕಣಗಳನ್ನು ಶೋಧಿಸುವ ಕೆಲಸವನ್ನು ಈ ಸಾಧನ ಮಾಡುತ್ತದೆ. ಅಂದರೆ, ಸಾಧನದ ಮೇಲೆ ಅಳವಡಿಸಿರುವ ಫ್ಯಾನ್‌ ಎಲ್ಲ ಇಂಗಾಲ ಕಣಗಳನ್ನು ಹೀರಿಕೊಳ್ಳುತ್ತದೆ. ನಂತರ, ಇದರೊಳಗೆ ಅಳವಡಿಸಿರುವ ತೆಳು ಪದರಗಳು ಸೋಸುವ ಕಾರ್ಯ ಮಾಡುತ್ತವೆ. ಕೊನೆಗೆ, ಫಿಲ್ಟರ್‌ ಚೇಂಬರ್‌ನಲ್ಲಿ ಅಳವಡಿಸಿರುವ ವಿಶೇಷ ಲೋಹದ ಬಲೆ ಅಥವಾ ಜಾಲವು ಕಣಗಳನ್ನು ಸೋಸುತ್ತದೆ. ತಳಭಾಗದಲ್ಲಿ ಇಂಗಾಲದ ಕಣಗಳು ಉಳಿಯುತ್ತವೆ.

‘ಈ ಸಾಧನಕ್ಕೆ ₹ 20 ಸಾವಿರ ವೆಚ್ಚವಾಗುತ್ತದೆ. ಅಂದರೆ, ಸಾಧನದ ಗಾತ್ರದ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ದೀರ್ಘಾವಧಿ ಬಾಳಿಕೆ ಬರುವ ಈ ಸಾಧನಕ್ಕೆಆರು ತಿಂಗಳಿಗೊಮ್ಮೆ ಸರ್ವಿಸ್‌ ಮಾಡಬೇಕಷ್ಟೆ. ಇದಕ್ಕೆ ಮಾಡಿದ ವೆಚ್ಚ ಆರು ತಿಂಗಳಲ್ಲಿ ನಿಮಗೆ ಸಿಗುತ್ತದೆ’ ಎಂದು ಆಶಿಕ್‌ ತಿಳಿಸಿದರು.

‘ವಾತಾವರಣ ಸೇರುವ ಶೇ 60ರಿಂದ 70ರಷ್ಟು ಇಂಗಾಲದ ಕಣಗಳನ್ನು ಈ ಸಾಧನೆ ತಡೆಯಲಿದೆ. ಈ ಸಾಧನದಲ್ಲಿ ಸಂಗ್ರಹವಾದ ಕಾರ್ಬನ್‌ ಅನ್ನು ಕೂಡ ಪುನರ್‌ ಬಳಸಬಹುದು. ರಸ್ತೆಗೆ ಡಾಂಬರ್‌, ಟೈರ್‌ ಹಾಗೂ ಇಂಕ್‌ ರೂಪದಲ್ಲಿ ಇದನ್ನು ಬಳಸಬಹುದು’ ಎಂದರು.

ಮಾಲಿನ್ಯ ನಿಯಂತ್ರಣ ಸಾಧನ
1. ಮೇಲ್ಭಾಗದಲ್ಲಿರುವ ಫ್ಯಾನ್‌
2. ಒತ್ತಡ ನಿಯಂತ್ರಕ
3. ಪೈಪ್‌
4. ದ್ರವ ಮಾದರಿ ಸಂಗ್ರಹದ ಟ್ಯಾಂಕ್‌
5. ಪ್ರಕ್ರಿಯೆ ನಡೆಯುವ ಭಾಗ
6. ತೆಳು ಪದರಗಳು
7. ಫಿಲ್ಟರ್‌
8. ಅನಿಲ ಹೊರಬಿಡುವ ಸಾಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT