ಬೆಂಗಳೂರು: ರೋಗಿಗಳಿಗೆ ಬಿಡಿ ಮಾತ್ರೆಗಳನ್ನು ನೀಡಲು ನಿರಾಕರಿಸಿದ ಆರೋಪದಡಿ ಫೋರ್ಟಿಸ್ ಆಸ್ಪತ್ರೆ ಆವರಣದಲ್ಲಿರುವ ಔಷಧ ಮಳಿಗೆ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿವಿಐಪಿ ಭದ್ರತಾ ವಿಭಾಗದ ಡಿಸಿಪಿ ಮಂಜುನಾಥ್ ಬಾಬು ಅವರು ಅನಾರೋಗ್ಯದ ಕಾರಣದಿಂದ ಸೋಮವಾರ (ಸೆಪ್ಟೆಂಬರ್ 9) ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವೈದ್ಯರು ಸೂಚಿಸಿದ ಮಾತ್ರೆಗಳನ್ನು ಖರೀದಿಸಲು ಔಷಧ ಅಂಗಡಿಗೆ ಹೋದಾಗ, ಸಿಬ್ಬಂದಿ ಬಿಡಿ ಮಾತ್ರೆಗಳನ್ನು ಕೊಡಲು ನಿರಾಕರಿಸಿದ್ದರು. ಪೂರ್ತಿ ಮಾತ್ರೆಯ ಶೀಟ್‌ಗಳನ್ನೇ ಕೊಳ್ಳುವಂತೆ ಸೂಚಿಸಿದ್ದಾರೆ ಎಂದು ನಗರದ ವಿವಿಐಪಿ ಭದ್ರತಾ ವಿಭಾಗದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಭೈರಯ್ಯ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೈದ್ಯರು ಸೂಚಿಸಿರುವ ಮಾತ್ರೆಗಳನ್ನಷ್ಟೇ ಕೊಡಲು ಕೇಳಿದಾಗ, ‘ನಮ್ಮ ಆಸ್ಪತ್ರೆ ವೈದ್ಯರು ಸೂಚಿಸಿದ ಮಾತ್ರೆಗಳು ಬೇರೆ ಎಲ್ಲಿಯೂ ಸಿಗುವುದಿಲ್ಲ, ಇಲ್ಲಿಗೆ ಬರಬೇಕಾಗುತ್ತದೆ. ನಾನು ಕೊಟ್ಟಷ್ಟು ಮಾತ್ರೆಗಳನ್ನು ತೆಗೆದುಕೊಂಡು ಹೋಗಬೇಕು. ಇದು ಇಲ್ಲಿನ ನಿಯಮ ಎಂದಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಔಷಧ ಅಂಗಡಿ ಸಿಬ್ಬಂದಿಯ ವಿಚಾರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಳ್ಳಲಾಗಿದೆ.