ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಆಧರಿಸಿದ ‘ದತ್ತಾಂಶ ಅಧ್ಯಯನ ವರದಿ’ಗೆ ತೀವ್ರ ತಕರಾರು ಎದುರಾಗಿದ್ದು, ವಿವಿಧ ಸಮುದಾಯಗಳು ವರದಿಯ ಶಿಫಾರಸು ಜಾರಿ ಮಾಡದಂತೆ ಒತ್ತಡ ಹೇರುವ ತಂತ್ರದ ಮೊರೆ ಹೋಗಿವೆ. ಏತನ್ಮಧ್ಯೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಶಾಸಕರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ

ಸರ್ಕಾರ ಕೆಡಹುತ್ತೇವೆ: ಒಕ್ಕಲಿಗ ಸಂಘ

ಬೆಂಗಳೂರು: ವೀರಶೈವ ಲಿಂಗಾಯತ, ಬ್ರಾಹ್ಮಣ ಸೇರಿದಂತೆ ಅನ್ಯಾಯಕ್ಕೊಳಗಾಗಿರುವ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ರಾಜ್ಯದಾದ್ಯಂತ ಜಾತಿ ಜನಗಣತಿ ವಿರುದ್ಧ ಹೋರಾಟ ನಡೆಸುವುದಾಗಿ ರಾಜ್ಯ ಒಕ್ಕಲಿಗರ ಸಂಘ ಘೋಷಿಸಿದೆ.

ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪ ಗೌಡ, ‘ಹೋರಾಟದ ರೂಪುರೇಷೆಗಳ ಕುರಿತು ಏಪ್ರಿಲ್ 17ರ ಬಳಿಕ ತೀರ್ಮಾನಿಸಲಾಗುವುದು’ ಎಂದರು.

‘ಇದು ಕಾಂತರಾಜ ವರದಿಯಲ್ಲ. ಸಿದ್ದರಾಮಯ್ಯ ವರದಿ. ಈ ವರದಿ ಜಾರಿಯಾದರೆ ಸರ್ಕಾರವನ್ನೇ ಕೆಡುಹುತ್ತೇವೆ. ಆ ಶಕ್ತಿ ನಮ್ಮ ಸಮುದಾಯಕ್ಕಿದೆ. ಜನಾಂಗಕ್ಕೆ ಅನ್ಯಾಯವಾದರೆ ಸಂಘದ ಎಲ್ಲ ನಿರ್ದೇಶಕರು ರಾಜೀನಾಮೆ ಕೊಟ್ಟು ಬೀದಿಗೆ ಇಳಿಯುತ್ತೇವೆ’ ಎಂದು ಎಚ್ಚರಿಸಿದರು.

‘ಎಚ್. ಕಾಂತರಾಜ ನೇತೃತ್ವದಲ್ಲಿ ನಡೆದಿರುವ ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ. ಉಪ ಪಂಗಡಗಳನ್ನೆಲ್ಲ ಕೈಬಿಟ್ಟು ಸಮೀಕ್ಷೆ ನಡೆಸಲಾಗಿದೆ. ವರದಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ, ಅನ್ಯಾಯಕ್ಕೊಳಗಾಗಿರುವ ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ರಾಜ್ಯವನ್ನೇ ಬಂದ್ ಮಾಡುವ ರೀತಿಯಲ್ಲಿ ಹೋರಾಟ ಮಾಡುತ್ತೇವೆ’ ಎಂದು ತಿಳಿಸಿದರು.

‘ನಮ್ಮ ಸಮುದಾಯದಲ್ಲಿ 117 ಉಪಪಂಗಡಗಳಿವೆ. ಅವುಗಳ ಸಂಖ್ಯೆಯನ್ನು ಕಡಿಮೆಗೊಳಿಸಿ, ನಮ್ಮ ನಡುವೆ ವೈಮನಸ್ಸು ಮೂಡಿಸಲು ಯತ್ನಿಸಲಾಗಿದೆ. ಆಧಾರ್ ಸಂಖ್ಯೆ ಪ್ರಕಾರ ರಾಜ್ಯದಲ್ಲಿ ಅಂದಾಜು ಏಳು ಕೋಟಿ ಜನಸಂಖ್ಯೆ ಇದೆ. ಒಂದು ಕೋಟಿ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಈ ವರದಿಯಲ್ಲಿ ನ್ಯೂನತೆಯಿದೆ’ ಎಂದು ದೂರಿದರು.

‘ಹೋರಾಟಕ್ಕೆ ಎಲ್ಲ ಪಕ್ಷಗಳಲ್ಲಿರುವ ಸಮುದಾಯದ ನಾಯಕರನ್ನು ಆಹ್ವಾನಿಸುತ್ತೇವೆ. ಯಾರು ಬರಲಿ, ಬಿಡಲಿ, ನಮ್ಮ ಹೋರಾಟ ಅಚಲವಾಗಿದೆ. ಈ ವರದಿಯನ್ನು ಜಾರಿಗೊಳಿಸಲು ಬಿಡುವುದಿಲ್ಲ’ ಎಂದರು.

ಸಂಘದಿಂದಲೇ ಗಣತಿಗೆ ಸಿದ್ಧ: ‘ನಾವೇ ಪ್ರತ್ಯೇಕ ಜಾತಿ ಜನಗಣತಿ ಮಾಡಿಸುತ್ತೇವೆ. ಇದಕ್ಕಾಗಿ ತಂತ್ರಾಂಶವನ್ನು ಸಿದ್ಧಪಡಿಸುತ್ತೇವೆ. ಈಗಿನ ವರದಿ ವಿರುದ್ಧದ ಹೋರಾಟಕ್ಕಾಗಿ ಬೆಂಗಳೂರು ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಹೋರಾಟಕ್ಕೆ ಕರೆ ನೀಡುತ್ತೇವೆ. ಸಮುದಾಯದ ಮೂವರು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯಲಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ತಿಳಿಸಿದರು.

ಎಲ್ಲರಿಗೂ ತೊಂದರೆ: ವೀರಶೈವ ಲಿಂಗಾಯತ ಮಹಾಸಭಾ

ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತ ಶೈಕ್ಷಣಿಕ ಸಮೀಕ್ಷೆಯ ಶಿಫಾರಸುಗಳು ಜಾರಿಯಾದರೆ ಲಿಂಗಾಯತರಿಗೆ ಮಾತ್ರವಲ್ಲ ಪರಿಶಿಷ್ಟ ಜಾತಿ, ಪಂಗಡ ಸೇರಿ ಎಲ್ಲ ವರ್ಗದವರಿಗೂ ತೊಂದರೆ ಆಗಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

‘ಪ್ರವರ್ಗ 3ಬಿ’ಯಲ್ಲಿ ಈ ಹಿಂದೆ 75 ಲಕ್ಷ ಜನಸಂಖ್ಯೆ ಇತ್ತು. ಪ್ರಸಕ್ತ ವರದಿಯ ‘ಪ್ರವರ್ಗ 3ಬಿ’ನಲ್ಲಿ 67 ಲಕ್ಷ ಜನಸಂಖ್ಯೆ ಎಂದು ತೋರಿಸಲಾಗಿದೆ. ಶೇ 6.6ರಷ್ಟು ಜನಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ವೀರಶೈವ ಲಿಂಗಾಯತರ ಒಳಪಂಗಡಗಳನ್ನು ಬೇರೆ ಬೇರೆ ಮಾಡಲಾಗಿದೆ. ಕೆಲವರನ್ನು ಬೇರೆ ಪ್ರವರ್ಗಕ್ಕೆ ಸೇರಿಸಲಾಗಿದೆ. ಈ ಕುರಿತು ಸಮುದಾಯದ ಸಚಿವರು ಮುಖ್ಯಮಂತ್ರಿ ಅವರ ಗಮನ ಸೆಳೆಯಲಿದ್ದಾರೆ’ ಎಂದರು.

‘ಜಾತಿ ಜನಗಣತಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೇವೆ. ಸಂಪೂರ್ಣ ದತ್ತಾಂಶ ಹೊರಬಂದರೆ ಒಂದಷ್ಟು ಸ್ಪಷ್ಟತೆ ಸಿಗಬಹುದು. ಆ ಬಳಿಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ನೆಪದರ ನೀತಿಗೆ ಪ್ರವರ್ಗ 1 ಒಕ್ಕೂಟ ವಿರೋಧ

ಆಯೋಗದ ವರದಿಯಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಗುಣಲಕ್ಷಣ ಹೊಂದಿರುವ ಅತ್ಯಂತ ಹಿಂದುಳಿದ 147 ಜಾತಿಗಳಿಗೆ ಕೆನೆ ಪದರ ನೀತಿಯಡಿ ಆದಾಯ ಮಿತಿಯನ್ನು ಅಳವಡಿಸುವಂತೆ ಶಿಫಾರಸು ಮಾಡಿರುವುದನ್ನು ಕರ್ನಾಟಕ ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟ ವಿರೋಧಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷರೂ ಆಗಿರುವ, ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಡಿ.ಟಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ್ಪ, ‘ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೆನೆ ಪದರ ನೀತಿ ಅಳವಡಿಸುವಂತೆ ಶಿಫಾರಸು ಮಾಡಿದೆ. ಇದರಿಂದ ಪ್ರವರ್ಗ–1 ಎ ಅಡಿಯಲ್ಲಿರುವ ಜಾತಿಯ ಜನರಿಗೆ ಅನ್ಯಾಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪರಿಶೀಲಿಸಿ, ಅತ್ಯಂತ ಹಿಂದುಳಿದ ಜಾತಿಗಳಿಗೆ ಕೆನೆ ಪದರ ನೀತಿಯನ್ನು ಅಳವಡಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅತ್ಯಂತ ಹಿಂದುಳಿದವರ ಪಟ್ಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮುಸ್ಲಿಂ ಜಾತಿಗಳನ್ನು ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ಸಮುದಾಯದವರನ್ನು ಸೇರಿಸಲಾಗಿದೆ. ಇವರನ್ನು ಹಿಂದುಳಿದವರ ಪಟ್ಟಿಯಿಂದ ತೆಗೆದು ಹಾಕುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಕುರ್ಚಿ ದುರಾಸೆಗೆ ಒಕ್ಕಲಿಗರಿಗೆ ಮರಣಶಾಸನ: ಎಚ್ಡಿಕೆ

ಮುಖ್ಯಮಂತ್ರಿ ಕುರ್ಚಿ ಹತ್ತಲು ‘ಒಂದ್ ಸಲ ನಂಗೂ ಪೆನ್ನು-ಪೇಪರ್ ಕೊಡಿ’ ಎಂದಿದ್ದ ವ್ಯಕ್ತಿಗೆ ಅಧಿಕಾರ ಕೊಟ್ಟ ಒಕ್ಕಲಿಗ ಸಮಾಜ ಬೆಲೆ ತೆರುತ್ತಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಟೀಕೆ ಮಾಡಿದ್ದಾರೆ.

‘ಎಕ್ಸ್’ ವೇದಿಕೆಯಲ್ಲಿ ಹೇಳಿಕೆ ನೀಡಿರುವ ಅವರು, ‘ಕುರ್ಚಿ ದುರಾಸೆಗೆ ಈ ವ್ಯಕ್ತಿ ಅದೇ ಪೆನ್ನಿನಲ್ಲಿ ಸಮಾಜದ ಮರಣಶಾಸನ ಬರೆಯುತ್ತಿದ್ದಾರೆ. ಹಿಂದೆ ಕ್ಷೀಣ ದನಿಯಲ್ಲಿ ಗಣತಿ ವರದಿ ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ. ಸಿದ್ದರಾಮಯ್ಯ ಸೃಷ್ಟಿಸಿದ ಜಾತಿ ಗಣತಿಗೆ ಶಿರಬಾಗಿ ಸಮ್ಮತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಸ್ವೀಕರಿಸಿದ ವರದಿ ದ್ವೇಷದ ಗಣತಿಯಾಗಿದೆ. ವರದಿಯ ಅಂಕಿಅಂಶಗಳನ್ನು ಯಾರೋ ವ್ಯವಸ್ಥಿತವಾಗಿ ಹರಿಬಿಟ್ಟಿದ್ದಾರೆ. ಆ ಪ್ರಕಾರ ಒಕ್ಕಲಿಗ, ವೀರಶೈವ ಲಿಂಗಾಯತ ಹಾಗೂ ಇನ್ನಿತರೆ ಸಮಾಜಗಳ ಸಂಖ್ಯೆಯೂ ಅಚ್ಚರಿ ಮೂಡಿಸಿದೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಸೇರಿ ಹಳೇ ಮೈಸೂರು ಜಿಲ್ಲೆಗಳಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕವಾಗಿ ಹಗೆತನ ಸಾಧಿಸಲು ಹೊರಟಿದೆ. ವರದಿ ವಿರುದ್ಧ ಹೋರಾಟ ನಡೆಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.