ಮಂಗಳವಾರ, ಜನವರಿ 19, 2021
27 °C
ಕರ್ನಾಟಕ ರಾಜ್ಯ ಕರಕುಶಲ ನಿಗಮ ಮಂಡಳಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮಾಹಿತಿ

‘ಕಾವೇರಿ ಎಂಪೋರಿಯಂನಲ್ಲಿ ಕಲ್ಲಿನ ಕೆತ್ತನೆಗಳ ಮಾರಾಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಾವೇರಿ ಎಂಪೋರಿಯಂ ಮಳಿಗೆಗಳಲ್ಲಿ ಇನ್ನುಮುಂದೆ ಮರದ ಕೆತ್ತನೆಗಳ ಜತೆಗೆ ಕಲ್ಲಿನ ಕೆತ್ತನೆಗಳಿಗೂ ಮಾರಾಟ ಮಾಡಲು ಅವಕಾಶ ನೀಡಲಾಗುವುದು’ ಎಂದು ಕರ್ನಾಟಕ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಪ್ರಮುಖ ಪಾರಂಪರಿಕ ಕ್ಷೇತ್ರಗಳ ಕೆತ್ತನೆಗಳ ಮಾದರಿಗಳನ್ನು ತಯಾರಿಸಿ, ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಇಲ್ಲಿನ ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಹಂಪಿ, ಐಹೋಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಬಾದಾಮಿ ಸೇರಿದಂತೆ ವಿವಿಧ ಪಾರಂಪರಿಕ ಸ್ಥಳಗಳಲ್ಲಿನ ವಾಸ್ತುಶಿಲ್ಪದ  ಕಲಾಕೃತಿಗಳನ್ನು ಕಾವೇರಿ ಎಂಪೋರಿಯಂನಲ್ಲಿ ಇಡಲಾಗುತ್ತದೆ. ಈ ಮೂಲಕ ವಾಸ್ತುಶಿಲ್ಪ ಕಲಾಕೃತಿಗಳ ಮಾರಾಟಕ್ಕೆ ಬೃಹತ್ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ’ ಎಂದು ವಿವರಿಸಿದರು. 

ವಿಗ್ರಹಗಳ ನಿರ್ಮಾಣ: ‘ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶಿಲ್ಪಿಗಳಿಗೆ ನೆರವಾಗುತ್ತಿದ್ದೇವೆ. ದೊಡ್ಡ ಕಲ್ಲಿನಲ್ಲಿ ದೇವಸ್ಥಾನಗಳನ್ನು ಕಟ್ಟಲು ಹಾಗೂ ಗೋಪುರಗಳನ್ನು ನಿರ್ಮಿಸಲು ಕೂಡ ಸಹಕಾರ ನೀಡಲಾಗುತ್ತಿದೆ. ಕೃಷ್ಣ ಶಿಲೆಯಿಂದ ಸಿದ್ಧಗೊಳಿಸಿದ ಈಶ್ವರ ಲಿಂಗ, ಕೃಷ್ಣ, ಭದ್ರಕಾಳಿ, ಶ್ರೀದೇವಿ, ಮಹಾದೇವಿ, ಸರಸ್ವತಿ ಸೇರಿದಂತೆ ವಿವಿಧ ದೇವರ ವಿಗ್ರಹಗಳ ಜತೆಗೆ ಕರಾವಳಿ ಭಾಗದಲ್ಲಿ ತಯಾರಾಗುವ ದೈವಗಳ ರೂಪದ ಕಲ್ಲಿನ ಕೆತ್ತನೆಗಳನ್ನೂ ಶಿಲ್ಪಿಗಳು ಕಾವೇರಿ ಎಂಪೋರಿಯಂಗೆ ಒದಗಿಸಲಿದ್ದಾರೆ’ ಎಂದರು.

‘ಇಷ್ಟು ವರ್ಷ ಕೇವಲ ಮರದ ಕೆತ್ತನೆಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಇದರಿಂದ ಕಲ್ಲಿನ ಕೆತ್ತನೆಗಾರರಿಗೆ ಅವಕಾಶವಿರಲಿಲ್ಲ. ಈಗ ಶಿಲ್ಪಿಗಳಿಗೆ ಕೂಡ ಉತ್ತಮ ವೇದಿಕೆ ಒದಗಿಸಿದ್ದೇವೆ. ಕಲ್ಲಿನ ಕಚ್ಚಾವಸ್ತುಗಳು ಹಾಗೂ ಕೆತ್ತನೆ ಕೆಲಸಕ್ಕೆ ಬೇಕಾದ ಪರಿಕರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೆತ್ತನೆಗಾರರಿಗೆ ತರಬೇತಿಗೂ ವ್ಯವಸ್ಥೆ ಮಾಡಲಾಗುವುದು. ಕಲ್ಲಿನ ಕೆತ್ತನೆಗಳನ್ನು ಪ್ರವಾಸಿ ತಾಣಗಳಲ್ಲಿ ಮಾರಾಟ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜತೆಗೆ ಚರ್ಚಿಸಿ, ಕಾರ್ಯಯೋಜನೆಯನ್ನು ರೂಪಿಸಲಾಗುವುದು’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು