ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎರಡು ಬಡಾವಣೆಗಳಲ್ಲಿ ನೀರಿನ ಸಮಸ್ಯೆ

Published 24 ಜೂನ್ 2024, 20:33 IST
Last Updated 24 ಜೂನ್ 2024, 20:33 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ಕೆರೆ ಹಿಂಭಾಗದ ಬೈರವೇಶ್ವರ ನಗರ, ಅಂದಾನಪ್ಪ ಲೇಔಟ್ ನಿವಾಸಿಗಳಿಗೆ ಸಿಎಂಸಿ ನೀರೂ ಇಲ್ಲ. ಇತ್ತ ಕಾವೇರಿ ನೀರೂ ಕೈಕೊಟ್ಟಿದೆ. ಇದರಿಂದಾಗಿ 50ಕ್ಕೂ ಅಧಿಕ ಮನೆಗಳು ಮಳೆಗಾಲದಲ್ಲೂ ನೀರಿನ ಸಮಸ್ಯೆ ಎದುರಿಸುತ್ತಿವೆ.‌

ಈ ಎರಡು ಲೇಔಟ್‌ಗಳಲ್ಲಿ ಬೋರ್‌ವೆಲ್‌ ಸೌಲಭ್ಯವಿಲ್ಲ. 8ನೇ ಮೈಲಿ ಸಮೀಪದಲ್ಲಿ ಉಂಟಾಗಿರುವ ಪೈಪ್‌ಲೈನ್‌ ಸಮಸ್ಯೆಯಿಂದ ಕಾವೇರಿ ನೀರು ಪೂರೈಕೆಯೂ ಸ್ಥಗಿತಗೊಂಡಿದೆ. ಹೀಗಾಗಿ ನೀರಿನ ಸಮಸ್ಯೆ ತಲೆದೋರಿದೆ.  

‘ನೀರಿನ ಕೊರತೆಯಿಂದಾಗಿ ಟ್ಯಾಂಕರ್‌ ನೀರನ್ನು ಆಶ್ರಯಿಸಬೇಕಿದೆ. ಆದರೆ, ದುಬಾರಿ ದರ ನೀಡಿ ನೀರು ತರಿಸಲು ಆಗದೇ ಜನರು ತತ್ತರಿಸುತ್ತಿದ್ದಾರೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

‘ಮನೆ ಬಾಡಿಗೆ ಕಟ್ಟಬೇಕು. ಜೊತೆಗೆ ಟ್ಯಾಂಕರ್ ನೀರಿಗಾಗಿ ತಿಂಗಳಿಗೆ ₹2,000 ಎತ್ತಿಡಬೇಕು. ಸಾಮಾನ್ಯ ಜನರಿಗೆ ಇದು ದುಬಾರಿ. ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆಗೆ ಬೇಗ ಪರಿಹಾರ ಒದಗಿಸಬೇಕು’ ಎಂದು ಖಾಸಗಿ ಸಂಸ್ಥೆಯ ಕಾರ್ಮಿಕ ಬಾಣಗೆರೆ ವಿಶ್ವನಾಥ್ ನಾಯಕ ಆಗ್ರಹಿಸಿದರು.

‘ಸುಮಾರು ನಾಲ್ಕು ತಿಂಗಳಿನಿಂದ ಈ ಪ್ರದೇಶದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಳ್ಳವರು ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದಾರೆ. ಇಲ್ಲದವರು ಉಚಿತ ನೀರಿಗಾಗಿ ಕಾಯುತ್ತ ಕುಳಿತುಕೊಳ್ಳುವಂತಾಗಿದೆ. ಕಾವೇರಿ ನೀರನ್ನಾದರೂ ಸರಿಯಾಗಿ ಬಿಟ್ಟಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು’ ಎಂದು ಗೃಹಿಣಿ ಪವಿತ್ರಾ ಹೇಳಿದರು.

‘ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಜಲಮಂಡಳಿ ವಿಫಲವಾಗಿದೆ. ಮಳೆಗಾಲ ಆರಂಭವಾಗಿದ್ದು ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಬಿ.ಎಂ. ಜಗದೀಶ್ ಎಚ್ಚರಿಕೆ ನೀಡಿದರು.

‘ನೀರಿನ ಸಮಸ್ಯೆಯ ಕಾರಣದಿಂದಾಗಿ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ– ಕಾಲೇಜಿನ ತರಗತಿಗಳಿಗೆ, ಪರೀಕ್ಷೆ ಹೋಗಲು ಸಾಧ್ಯವಾಗುತ್ತಿಲ್ಲ‘ ಎಂದು ವಿದ್ಯಾರ್ಥಿ ಗಣೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT