ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಹೊಂದಾಣಿಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು: ಆರ್‌.ಅಶೋಕ

Published 10 ಮಾರ್ಚ್ 2024, 15:07 IST
Last Updated 10 ಮಾರ್ಚ್ 2024, 15:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಜಲ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್‌ ಸರ್ಕಾರ ಡಿಎಂಕೆ ಜತೆಗೆ ಚುನಾವಣಾ ಹೊಂದಾಣಿಕೆಗಾಗಿ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ರಾಜ್ಯದಲ್ಲಿ ಕುಡಿಯಲು ನೀರಿಲ್ಲದೇ ಜನ ತತ್ತರಿಸಿದ್ದಾರೆ. ಜನಸಾಮ್ಯಾನರು ಖಾಲಿ ಬಿಂದಿಗೆ ಹಿಡಿದು ಬೀದಿಗೆ ಇಳಿದಿದ್ದಾರೆ. ಬೆಂಗಳೂರು ಮಹಾನಗರದ ಜನ ಕುಡಿಯುವ ನೀರಿನ ಅಭಾವದಿಂದ ಕಂಗಾಲಾಗಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂತಹ ನಾಚಿಕೆಗೆಟ್ಟ ಸರ್ಕಾರ ಹಿಂದೆಂದೂ ಇರಲಿಲ್ಲ. ಒಂದು ಕಡೆ ವೋಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದ್ದು, ಮತ್ತೊಂದು ಕಡೆ ಚುನಾವಣೆ ಹೊಂದಾಣಿಕೆಗಾಗಿ ನೀರು ಬಿಟ್ಟು ಕಾಂಗ್ರೆಸ್‌ ಸರ್ಕಾರ ಕನ್ನಡ ನಾಡಿಗೆ ದ್ರೋಹ ಎಸಗಿದೆ ಎಂದರು.

‘ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ ಎಂದು ಹೋರಾಟ ಮಾಡಿ, ಈಗ ಕೇಂದ್ರ ಸರ್ಕಾರ ಮಾಡಬೇಕು ಎನ್ನುತ್ತಿದ್ದಾರೆ. ಆಯವ್ಯಯದಲ್ಲಿ ಮೇಕೆದಾಟು ಯೋಜನೆಗೆ ನಯಾಪೈಸೆ ನೀಡಿಲ್ಲ. ಇವರಿಗೆ ಮಾನ ಮರ್ಯಾದೆ ಇದ್ದರೆ ಈ ಯೋಜನೆಗೆ ₹10 ಸಾವಿರ ಕೋಟಿ ಮೀಸಲಿಡಬೇಕಿತ್ತು. ಜನರಿಗೆ ಕಲುಷಿತ ನೀರು ಪೂರೈಕೆ ಮಾಡುವ ಮೂಲಕ ಬೆಂಗಳೂರಿನ ಮಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಸರ್ಕಾರದ ಪ್ರತಿಯೊಬ್ಬರೂ ಖಜಾನೆ ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆ’ ಎಂದು ಅಶೋಕ ಹರಿಹಾಯ್ದರು.

‘ಈಗಿನ ಸರ್ಕಾರ ಪಾಪರ್‌ ಆಗಿದ್ದು,  ಕುಡಿಯುವ ನೀರು ಪೂರೈಕೆ ಮಾಡಲೂ ಸರ್ಕಾರದ ಬಳಿ ಹಣವಿಲ್ಲ. ಕುಡಿಯುವ ನೀರು ಪೂರೈಕೆ ಮಾಡಲು ಯೋಗ್ಯತೆ ಇಲ್ಲವಾದರೆ ಕುರ್ಚಿ ಬಿಟ್ಟು ತೊಲಗಲಿ. ನಾವು ಸರ್ಕಾರ ನಡೆಸುವ ಸಂದರ್ಭದಲ್ಲಿ ಕೇಂದ್ರದ ಕಡೆ ನೋಡದೇ ರೈತರಿಗೆ ಅಧಿಕ ಮೊತ್ತದಲ್ಲಿ ಪರಿಹಾರ ವಿತರಣೆ ಮಾಡಿದ್ದೆವು. ಪಾಪರ್‌ ಸರ್ಕಾರದಲ್ಲಿ ರೈತರಿಗೆ ಕೊಡಲು ಹಣವಿಲ್ಲ’ ಎಂದು ಅಶೋಕ ಹೇಳಿದರು.

‘ಬರ ಪರಿಹಾರಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಎಸ್‌ಡಿಆರ್‌ಎಫ್‌ ಹಣ ಈಗಾಗಲೇ ರಾಜ್ಯ ಸರ್ಕಾರಕ್ಕೆ ತಲುಪಿದೆ. ಎನ್‌ಡಿಆರ್‌ಎಫ್‌ ಹಣವನ್ನು ಕೇಂದ್ರ ಸರ್ಕಾರ ಒಟ್ಟಿಗೆ ತೀರ್ಮಾನ ಮಾಡಿ ಎಲ್ಲ ರಾಜ್ಯಗಳಿಗೂ ನೀಡುತ್ತದೆ. ಹಿಂದೆ ಮನಮೋಹನ್‌ ಸಿಂಗ್‌ ಸರ್ಕಾರ ಇದ್ದಾಗ ಇದೇ ರೀತಿ ತಡವಾಗಿ ಪರಿಹಾರ ನೀಡಲಾಗಿತ್ತು. ಆಗ ಬಾಯಿ ಬಡಿದುಕೊಳ್ಳದ ಕಾಂಗ್ರೆಸ್‌ ಈಗ ಮಾತ್ರ ಬಾಯಿ ಬಡಿದುಕೊಳ್ಳುತ್ತಿದೆ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಕೇಂದ್ರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳದೇ ರಾಜಕೀಯ ಮಾಡುತ್ತಿದ್ದಾರೆ. ಆದರೆ, ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಪ್ರಧಾನಿಯವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಕರ್ನಾಟಕದ ನಾಯಕರು ಅವರಿಂದ ಪಾಠ ಹೇಳಿಸಿಕೊಳ್ಳಲಿ’ ಎಂದರು.

‘ಟ್ಯಾಂಕರ್‌ ಮಾಫಿಯಾಗೆ ಸರ್ಕಾರದ ಬೆಂಬಲ’

ಕಾಂಗ್ರೆಸ್‌ ಸರ್ಕಾರ ನೀರಿನ ಟ್ಯಾಂಕರ್ ಮಾಫಿಯಾಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ‘ಟ್ಯಾಂಕರ್‌ ನೀರಿಗೆ ಸರ್ಕಾರ ವಿಧಿಸಿದ್ದ ಷರತ್ತುಗಳೆಲ್ಲವೂ ಕಣ್ಕಟ್ಟಿಗೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದು ನಿದ್ರಾವಸ್ಥೆಯಲ್ಲಿರುವ ಸರ್ಕಾರ. ಷರತ್ತುಗಳೇ ಇಲ್ಲದ ಆದೇಶ ಹೊರಡಿಸಿರುವ ಸರ್ಕಾರ ಟ್ಯಾಂಕರ್ ಮಾಲೀಕರ ಜತೆ ಕೈಜೋಡಿಸಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ’ ಎಂದು ‘ಎಕ್ಸ್‌’ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ. ‘ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ಮೊದಲು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು’ ಎಂದೂ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT