ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್ ಬಂಧನ

Last Updated 22 ನವೆಂಬರ್ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಆರ್‌.ರೋಷನ್ ಬೇಗ್ಅವರನ್ನು ಸಿಬಿಐಅಧಿಕಾರಿಗಳು ಭಾನುವಾರ ಬಂಧಿಸಿದರು.

ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ನಿರಂತರ ವಿಚಾರಣೆ ಬಳಿಕ ರೋಷನ್ ಬೇಗ್‌ ಅವರನ್ನು ವಶಕ್ಕೆ ಪಡೆದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಆನಂತರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು. ‘ರೋಷನ್ ಬೇಗ್ ತನ್ನಿಂದ ಹಣ ಪಡೆದುಕೊಂಡಿದ್ದರು. ಹಣ ವಾಪಸ್ ಕೇಳಿದಾಗ ರೌಡಿಗಳಿಂದ ಜೀವಬೆದರಿಕೆ ಹಾಕಿಸಿದ್ದಾರೆ’ ಎಂದು ಆರೋಪಿಸಿ ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟಿದ್ದರು.

ಇದೇ ಪ್ರಕರಣದಲ್ಲಿ ಹಿಂದೆ ತನಿಖೆ ನಡೆಸಿದ್ದ ಎಸ್‍ಐಟಿ ಸಹ ಬೇಗ್‌ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಆರೋಪಿ ಮನ್ಸೂರ್ ಖಾನ್‍ ಅವರಿಂದ ಬೇಗ್‌ ಅವರು ಅಂದಾಜು ₹200 ಕೋಟಿ ಪಡೆದಿದ್ದಾರೆ ಎಂಬ ಆರೋಪವೂ ಇದೆ.

‘ಮನ್ಸೂರ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದರಿಂದ ಸಿಬಿಐ ಅಧಿಕಾರಿಗಳು ರೋಷನ್ ಬೇಗ್‌ ಅವರನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಮನ್ಸೂರ್ ಖಾನ್‍ಗೆ ಹೈಕೋರ್ಟ್ ಅಕ್ಟೋಬರ್‌ನಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಐಎಂಎ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ಪತ್ರದಲ್ಲಿ ತಿಳಿಸಿತ್ತು. ಅದನ್ನು ಪರಿಶೀಲಿಸಿ, ಸಿಐಡಿ ಡಿವೈಎಸ್ಪಿ ಇ.ಬಿ.ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್‍ಸ್ಪೆಕ್ಟರ್ ಆಗಿದ್ದ ಎಂ.ರಮೇಶ್ ಹಾಗೂ ಪಿಎಸ್‍ಐ ಗೌರಿಶಂಕರ ಅವರನ್ನು ಅಮಾನತು ಮಾಡಲಾಗಿದೆ.

ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಸಹ ಪ್ರಮುಖ ಆರೋಪಿಗಳಾಗಿದ್ದು, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಬಿಐ ಅಸಮಾಧಾನ ವ್ಯಕ್ತಪಡಿಸಿತ್ತು.

‘ಐಎಂಎ ವಿರುದ್ಧ ಆರಂಭಿಕ ಹಂತದಲ್ಲಿ ವಿಚಾರಣೆ ನಡೆಸಿದ್ದ ನಿಂಬಾಳ್ಕರ್‌, ಕಂಪನಿಯ ಪರವಾದ ವರದಿ ಸಿದ್ಧಪಡಿಸಿದ್ದರು. ಇನ್‌ಸ್ಪೆಕ್ಟರ್‌ ರಮೇಶ ನೀಡಿದ್ದ ವರದಿಯನ್ನು ಮುಚ್ಚಿಹಾಕಲು ಹಿಲೋರಿ ಯತ್ನಿಸಿದ್ದರು. ಇದಕ್ಕಾಗಿ ಐಎಂಎ ಕಂಪನಿಯಿಂದ ಹಲವು ಬಾರಿ ಹಣ, ಪೀಠೋಪಕರಣ ಬಿಲ್‌ ಪಾವತಿಯಂತಹ ಲಾಭ ಪಡೆದಿದ್ದರು. ಅಕ್ರಮಕ್ಕೆ ನೆರವಾದ ಪೊಲೀಸರು, ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್‌ ಖಾನ್‌ನಿಂದ ಅನೇಕ ಬಾರಿ ಹಣ ಪಡೆದಿದ್ದರು’ ಎಂದೂ ಸಿಬಿಐ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT