ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಲೋಕಾಯುಕ್ತ ಅಧಿಕಾರಿ’ ಸೋಗಿನಲ್ಲಿ ಕರೆ ಮಾಡುತ್ತಿದ್ದ ಆರೋಪಿ ಸಿಸಿಬಿ ಬಲೆಗೆ

Published 2 ಜನವರಿ 2024, 16:09 IST
Last Updated 2 ಜನವರಿ 2024, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಾಯುಕ್ತ ಅಧಿಕಾರಿ’ ಎಂದು ಹೇಳಿಕೊಂಡು ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಶ್ರೀಧರ್ ರೆಡ್ಡಿ (31) ಬಂಧಿತ ಆರೋಪಿ.

ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ ಸಂಬಂಧ ಸರ್ಕಾರಿ ಅಧಿಕಾರಿ ರಾಮದಾಸ್‌ ಎಂಬುವವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ, 2019ರಿಂದ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸುಮಾರು 60ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

‘ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಿದ್ದಾನೆ. ಟಾಲಿವುಡ್ ನಟ ಸೂರ್ಯ ನಟನೆಯ ‘ಗ್ಯಾಂಗ್’ ಸಿನಿಮಾದಿಂದ ಪ್ರೇರಣೆಗೊಂಡು, ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಶ್ರೀಧರ್ ರೆಡ್ಡಿ, ವಿವಾಹಿತನಾಗಿದ್ದು ಮಕ್ಕಳು ಇದ್ದಾರೆ. ಬಾಗೇಪಲ್ಲಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಊರಿನಲ್ಲೇ ಕೆಲಸ ಮಾಡಿಕೊಂಡಿದ್ದ. ಜತೆಗೆ, ಮನೆಗಳಲ್ಲಿ ಚಿನ್ನಾಭರಣ ಕಳವು ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. 2019ರಲ್ಲಿ ‘ಗ್ಯಾಂಗ್’ ಸಿನಿಮಾ ವೀಕ್ಷಿಸಿದ್ದ ಆರೋಪಿ, ಸಿನಿಮಾದಲ್ಲಿ ನಾಯಕ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ, ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡುವ ಮಾದರಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದ. ಬಾಗೇಪಲ್ಲಿಯಿಂದಲೇ ಮೊದಲು ಸುಲಿಗೆ ಆರಂಭಿಸಿದ್ದ. ಬೆದರಿದ ಅಧಿಕಾರಿಗಳು ಲಕ್ಷಾಂತರ ರೂಪಾಯಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಸರ್ಕಾರಿ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಪಡೆದು, ಕರೆ ಮಾಡಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಚಂದ್ರಶೇಖರ್‌ ಎಂದು ಪರಿಚಯಿಸಿಕೊಳ್ಳುತ್ತಿದ್ದ. ನಿಮ್ಮ ವಿರುದ್ಧ ಲೋಕಾಯುಕ್ತಕ್ಕೆ ದೂರುಗಳು ಬಂದಿವೆ. ಈ ಬಗ್ಗೆ ಎಡಿಜಿಪಿ ಮಾತನಾಡುತ್ತಾರೆ ಎಂದು ಹೇಳಿ ಬೆದರಿಕೆ ಹಾಕುತ್ತಿದ್ದ. ಈ ದೂರನ್ನು ವಿಚಾರಣೆ ನಡೆಸದೇ ಮುಕ್ತಾಯಗೊಳಿಸಲು ಹಣ ನೀಡಬೇಕಾಗುತ್ತದೆ. ಕೇಳಿದಷ್ಟು ಹಣ ನೀಡಿದರೆ, ಟೆಕ್ನಿಕಲ್‌ ತಂಡದಿಂದ ವಿಚಾರಣೆ ನಡೆಸಿ ‘ಬಿ’ ವರದಿ ಹಾಕಲಾಗುವುದೆಂದು ಹೇಳುತ್ತಿದ್ದ’ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

36 ಪ್ರಕರಣ ದಾಖಲು

‘ಆರೋಪಿ 60 ಮಂದಿ ಸರ್ಕಾರಿ ಅಧಿಕಾರಿಗಳಿಗೆ ವಂಚಿಸಿದ್ದಾನೆ. ಆರೋಪಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಈತನ ವಿರುದ್ಧ ಕರ್ನಾಟಕ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲೇ ಹಾರಾಟ: ‘ಶ್ರೀಧರ್ ರೆಡ್ಡಿ ಇದುವರೆಗೂ ₹ 3 ಕೋಟಿ ಅಧಿಕ ಹಣ ವಸೂಲಿ ಮಾಡಿದ್ದಾನೆ. ಈ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಗೋವಾದ ಕ್ಯಾಸಿನೊದಲ್ಲಿ ಜೂಜಾಟದಲ್ಲಿ ಹಣ ಹೂಡಿಕೆ ಮಾಡಿದ್ದಾನೆ. ಜತೆಗೆ ಕೆಲ ಪ್ರವಾಸಿ ಸ್ಥಳಗಳಿಗೆ ವಿಮಾನದಲ್ಲೇ ಸಂಚರಿಸಿ ಹಣ ವ್ಯಯಿಸಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT