ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳ ನಂತರ ಸಿಕ್ಕಿಬಿದ್ದ ಹ್ಯಾಕರ್ ಶ್ರೀಕೃಷ್ಣ

ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಮೂರನೇ ಆರೋಪಿ; ಡ್ರಗ್ಸ್ ಪ್ರಕರಣದಲ್ಲಿ ಸೆರೆ
Last Updated 18 ನವೆಂಬರ್ 2020, 16:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾರಣಿ, ಉದ್ಯಮಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ಮಕ್ಕಳು ನಡೆಸುತ್ತಿದ್ದ ಡ್ರಗ್ಸ್ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಜಾಲದಲ್ಲಿ ಸಕ್ರಿಯನಾಗಿದ್ದ ಎನ್ನಲಾದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (25) ಎಂಬಾತನನ್ನು ಬಂಧಿಸಿದ್ದಾರೆ.

‘ಜಯನಗರದ ಶ್ರೀಕೃಷ್ಣ, ನೆದರ್‌ಲ್ಯಾಂಡ್‌ನಲ್ಲಿ ಬಿಎಸ್ಸಿ (ಕಂಪ್ಯೂಟರ್ ಸೈನ್ಸ್) ಮುಗಿಸಿದ್ದ. ವಿದ್ಯಾಭ್ಯಾಸದ ಬಳಿಕ ಬೆಂಗಳೂರಿಗೆ ವಾಪಸು ಬಂದು ಕಂಪ್ಯೂಟರ್‌ಗೆ ಸಂಬಂಧಪಟ್ಟ ಕೆಲಸ ಮಾಡಿಕೊಂಡಿದ್ದ. ಅದರ ಜೊತೆಗೆ, ಜಾಲತಾಣ ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್‌ ಮಾಡಲಾರಂಭಿಸಿದ್ದ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭಾರತ ಸೇರಿದಂತೆ ಹಲವು ದೇಶಗಳ ಜಾಲತಾಣಗಳನ್ನು ಆರೋಪಿ ಹ್ಯಾಕ್‌ ಮಾಡುತ್ತಿದ್ದ. ದತ್ತಾಂಶಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಅಕ್ರಮವಾಗಿ ಹಣ ಸಂಪಾದನೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮಾದಕ ವ್ಯಸನಿಯಾಗಿದ್ದ ಆತ, ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಜಾಲದಲ್ಲೂ ಸಕ್ರಿಯನಾಗಿದ್ದ’ ಎಂದೂ ಹೇಳಿದರು.

‘ಚಾಮರಾಜಪೇಟೆಯಲ್ಲಿರುವ ಅಂತರರಾಷ್ಟ್ರೀಯ ಅಂಚೆ ಕಚೇರಿಗೆ ಡ್ರಗ್ಸ್ ಪಾರ್ಸೆಲ್ ಬಂದಿತ್ತು. ಅದರಲ್ಲಿದ್ದ 500 ಗ್ರಾ ಹೈಡ್ರೊ ಗಾಂಜಾ ಜಪ್ತಿ ಮಾಡಿ, ಆರೋಪಿ ಎಂ. ಸುಜಯ್ ಎಂಬಾತನನ್ನು ಬಂಧಿಸಲಾಗಿತ್ತು. ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದ ಸಂಗತಿಯನ್ನು ಆತ ಬಾಯಿಬಿಟ್ಟಿದ್ದ. ಜಾಲದಲ್ಲಿದ್ದ ಹೇಮಂತ್ ಮುದ್ದಪ್ಪ, ಸುನೀಷ್ ಹೆಗ್ಡೆ, ಪ್ರಸಿದ್‌ ಶೆಟ್ಟಿ ಸೇರಿ 6 ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳು ತಲೆಮರೆಸಿಕೊಳ್ಳಲು ನೆರವಾಗಿದ್ದ ಆರೋಪದಡಿ ಕಾಂಗ್ರೆಸ್ ಮುಖಂಡ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಅವರನ್ನೂ ಸೆರೆ ಹಿಡಿಯಲಾಗಿತ್ತು. ಇದೇ ಪ್ರಕರಣದಲ್ಲೇ ಶ್ರೀಕೃಷ್ಣ ಸಹ ಆರೋಪಿ’ ಎಂದೂ ತಿಳಿಸಿದರು.

ಬಿಟ್ ಕಾಯಿನ್ ನೀಡುತ್ತಿದ್ದ: ‘ಸೋದರ ಸಂಬಂಧಿಗಳಾದ ಸುನೀಷ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿ, ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಖರೀದಿ ಮಾಡುತ್ತಿದ್ದರು. ಅದಕ್ಕೆ ಅಗತ್ಯವಾದ ಬಿಟ್‌ ಕಾಯಿನ್‌ಗಳನ್ನು ಆರೋಪಿ ಶ್ರೀಕೃಷ್ಣ ನೀಡುತ್ತಿದ್ದ. ಅಂಚೆ ಮೂಲಕ ಡ್ರಗ್ಸ್ ತರಿಸಿಕೊಂಡು ನಗರದಲ್ಲಿ ಸ್ನೇಹಿತರು ಹಾಗೂ ಅವರ ಪರಿಚಯಸ್ಥರಿಗೆ ಮಾರಲಾಗುತ್ತಿತ್ತು’ ಎಂದೂ ಕಮಲ್ ಪಂತ್ ಮಾಹಿತಿ ನೀಡಿದರು.

‘ಹ್ಯಾಕ್‌ ಮಾಡಿ ದತ್ತಾಂಶ ಕದ್ದು ಜಾಲತಾಣ ನಿಷ್ಕ್ರಿಯಗೊಳಿಸುತ್ತಿದ್ದ ಶ್ರೀಕೃಷ್ಣ, ಬಿಟ್‌ ಕಾಯಿನ್ ಮೂಲಕ ಹಣ ನೀಡಿದರೆ ಮಾತ್ರ ದತ್ತಾಂಶ ವಾಪಸು ನೀಡುವುದಾಗಿ ಕಂಪನಿಯವರನ್ನು ಬೆದರಿಸುತ್ತಿದ್ದ. ಕೆಲ ಕಂಪನಿಯವರು, ಆರೋಪಿ ಕೇಳಿದಷ್ಟು ಹಣ ವರ್ಗಾವಣೆ ಮಾಡಿದ್ದಾರೆ. ಅದೇ ಹಣವನ್ನೇ ಆರೋಪಿ, ಡ್ರಗ್ಸ್ ಖರೀದಿ ಹಾಗೂ ಇತರೆ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದ.’

‘ಜೂಜಾಟ ಸಂಬಂಧಿತ ಆ್ಯಪ್ ಹಾಗೂ ಜಾಲತಾಣಗಳಲ್ಲೂ ಆರೋಪಿ ಹ್ಯಾಕ್ ಮಾಡುತ್ತಿದ್ದ. ಎದುರಾಳಿ ಸ್ಪರ್ಧಿಗಳ ಮಾಹಿತಿಯನ್ನು ತಿಳಿದುಕೊಂಡು ಆಟ ಗೆದ್ದು ಹಣ ಸಂಪಾದನೆ ಮಾಡುತ್ತಿದ್ದ’ ಎಂದೂ ಅವರು ವಿವರಿಸಿದರು.

‘ಬೆಂಗಳೂರಿನ ದೇವನಹಳ್ಳಿ, ಸಂಜಯನಗರ, ಚಿಕ್ಕಮಗಳೂರು ಹಾಗೂ ಕಬಿನಿ ಬಳಿಯ ಫಾರ್ಮ್‌ಹೌಸ್ ಹಾಗೂ ಫ್ಲ್ಯಾಟ್‌ಗಳಲ್ಲಿ ಆರೋಪಿಗಳು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು’ ಎಂದೂ ತಿಳಿಸಿದರು.

ವಿದ್ವತ್‌ ಕೊಲೆ ಯತ್ನ ಪ್ರಕರಣದ ಆರೋಪಿ: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ 2018ರಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಶ್ರೀಕೃಷ್ಣ ಮೂರನೇ ಆರೋಪಿ. ಮೊದಲ ಆರೋಪಿ ಮೊಹಮ್ಮದ್ ನಲಪಾಡ್.

ಮೊಬೈಲ್ ಬಳಸದ ಶ್ರೀಕೃಷ್ಣ, ಎರಡು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕೊಲೆ ಯತ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಆತನಿಗಾಗಿ ಹೊರ ರಾಜ್ಯ ಹಾಗೂ ವಿದೇಶದಲ್ಲೂ ಹುಡುಕಾಟ ನಡೆಸಿದ್ದರು. ಆದರೆ, ಆತನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಇದೀಗ, ಡ್ರಗ್ಸ್ ಪ್ರಕರಣದಲ್ಲಿ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

'ವಿದ್ವತ್ ಕೊಲೆ‌ ಪ್ರಕರಣ ಸಂಬಂಧ ಶ್ರೀಕೃಷ್ಣನನ್ನು ವಿಚಾರಣೆ ಮಾಡಿಲ್ಲ. ಆ ಪ್ರಕರಣದ ತನಿಖಾಧಿಕಾರಿಗೆ ಮಾಹಿತಿ ನೀಡಲಾಗುವುದು. ಅವರೇ ನ್ಯಾಯಾಲಯದ ಮೂಲಕ ಕಸ್ಟಡಿಗೆ ಪಡೆಯಬಹುದು' ಎಂದೂ ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT