ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪ್ರಕರಣ: ಮಾಜಿ ಸಚಿವ ಲಮಾಣಿ ಪುತ್ರ ಸಿಸಿಬಿ ಕಸ್ಟಡಿಗೆ

ಸ್ನೇಹಿತರ ಜೊತೆ ದಂಧೆ ನಡೆಸುತ್ತಿದ್ದ ಆರೋಪ
Last Updated 13 ನವೆಂಬರ್ 2020, 14:38 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಮಾರಾಟ ಪ್ರಕರಣ ಸಂಬಂಧ ಬಂಧಿಸಲಾಗಿರುವ ಮಾಜಿ ಸಚಿವರೂ ಆದ ಕಾಂಗ್ರೆಸ್ ಮುಖಂಡ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಹಾಗೂ ಆತನ ಸ್ನೇಹಿತರನ್ನು ವಿಚಾರಣೆಗಾಗಿ ನಗರದ ಸಿಸಿಬಿ ಪೊಲೀಸರು 9 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ವಿದೇಶದಿಂದ ಅಂಚೆ ಕಚೇರಿಗೆ ಪಾರ್ಸೆಲ್‌ನಲ್ಲಿ ಬಂದಿದ್ದ 500 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದ ಕೆಂಪೇಗೌಡ ಠಾಣೆ ಪೊಲೀಸರು, ಸುಜಯ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ್ದ ಮಾಹಿತಿಯಂತೆ ಸ್ನೇಹಿತರಾದ ಹೇಮಂತ್ ಹಾಗೂ ಸುನೇಶ್‌ನನ್ನು ಗೋವಾದಲ್ಲಿ ಸೆರೆಹಿಡಿಯಲಾಗಿತ್ತು.

ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಬಂಧಿಸಿ, ವಿಚಾರಣೆಗಾಗಿ ಕೆಂಪೇಗೌಡ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದರು.

ಇದರ ನಡುವೆಯೇ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ, ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ಪರಿಷ್ಕರಿಸಿದ ನ್ಯಾಯಾಲಯ, ನಾಲ್ವರು ಆರೋಪಿಗಳನ್ನು ಮುಂದಿನ 9 ದಿನಗಳವರೆಗೆ ಸಿಸಿಬಿ ಕಸ್ಟಡಿಗೆ ನೀಡಿದೆ.

ದರ್ಶನ್ ಭಾಗಿ ಪುರಾವೆ ಸಂಗ್ರಹ; ‘ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ಆರೋಪದಡಿ ಸದಾಶಿವನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಎಂಬಾತನನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ದರ್ಶನ್ ಭಾಗಿ ಬಗ್ಗೆ ಪುರಾವೆ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ದರ್ಶನ್ ಹಾಗೂ ಇತರೆ ಆರೋಪಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದ ನಂತರವೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT