ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಗನ ಮೂಲಕ ಸರ ಕಳ್ಳತನ: ತಾಯಿ ಬಂಧನ

ಕದ್ದ ಬೈಕ್‌ನಲ್ಲಿ ಸುತ್ತಾಡಿ ಕೃತ್ಯ * ಅನ್ನಪೂರ್ಣೇಶ್ವರಿನಗರ ಪೊಲೀಸರ ತನಿಖೆ
Published 6 ಏಪ್ರಿಲ್ 2024, 13:55 IST
Last Updated 6 ಏಪ್ರಿಲ್ 2024, 13:55 IST
ಅಕ್ಷರ ಗಾತ್ರ

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರನ್ನು ಮಾತನಾಡಿಸಿ ಸರ ಕಳ್ಳತನ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿ ರೋಜಾ (32) ಎಂಬುವವರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚಿಂತಾಮಣಿಯ ರೋಜಾ, ಉಲ್ಲಾಳದಲ್ಲಿ ವಾಸವಿದ್ದರು. ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆತನ ಸ್ನೇಹಿತನ ಮೂಲಕ ಕಳ್ಳತನ ಮಾಡಿಸುತ್ತಿದ್ದರು. ಇತ್ತೀಚೆಗೆ ನಡೆದಿದ್ದ ಕಳ್ಳತನದ ಬಗ್ಗೆ ತನಿಖೆ ಕೈಗೊಂಡಾಗ, ಸುಳಿವು ಸಿಕ್ಕಿತ್ತು. ರೋಜಾ ಅವರನ್ನು ಸೆರೆ ಹಿಡಿದು, ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸರು ಹೇಳಿದರು.

‘ಕೂಲಿ ಕೆಲಸ ಮಾಡುತ್ತಿದ್ದ ರೋಜಾ, ಬಿಡುವು ಸಿಕ್ಕಾಗೆಲ್ಲ ನಗರದ ಹಲವು ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದರು. ಯಾವ ರಸ್ತೆಯಲ್ಲಿ ಯಾವ ಮಹಿಳೆ ನಿತ್ಯವೂ ಓಡಾಡುತ್ತಾರೆ? ಅವರ ಬಳಿ ಚಿನ್ನದ ಸರವಿದೆಯಾ? ಸರ ಕಿತ್ತುಕೊಂಡ ನಂತರ ಯಾವ ರಸ್ತೆಯಲ್ಲಿ ಪರಾರಿಯಾಗಬೇಕು? ಎಂಬ ಮಾಹಿತಿ ತಿಳಿದುಕೊಳ್ಳುತ್ತಿದ್ದರು’ ಎಂದು ತಿಳಿಸಿದರು.

‘ಮಹಿಳೆಯರ ಚಿನ್ನದ ಸರ ಕದ್ದು ಮಾರಿದರೆ, ಹೆಚ್ಚು ಹಣ ಬರುತ್ತದೆ. ಅದರಿಂದ ಜೀವನ ನಡೆಸಬಹುದೆಂದು ಮಗನಿಗೆ ರೋಜಾ ಹೇಳುತ್ತಿದ್ದರು. ತಾಯಿ ಮಾತಿಗೆ ಒಪ್ಪಿದ್ದ ಮಗ, ಕಳ್ಳತನಕ್ಕೆ ಸಜ್ಜಾಗುತ್ತಿದ್ದ. ಸ್ನೇಹಿತನೊಬ್ಬನ ಸಹಾಯವನ್ನೂ ಪಡೆದಿದ್ದ’ ಎಂದು ಹೇಳಿದರು.

ಮೈಸೂರಿನಲ್ಲಿ ಬೈಕ್ ಕಳ್ಳತನ:

‘ಮಹಿಳೆಯರನ್ನು ಹಿಂಬಾಲಿಸಿ ಸರ ಕಳ್ಳತನ ಮಾಡಲು ಬೈಕ್ ಅಗತ್ಯವಿರುವುದಾಗಿ ಆರೋಪಿ ರೋಜಾ ಹೇಳಿದ್ದರು. ಮೈಸೂರಿಗೆ ಹೋಗಿದ್ದ ಮಗ ಹಾಗೂ ಸ್ನೇಹಿತ, ಬೈಕ್‌ವೊಂದನ್ನು ಕಳ್ಳತನ ಮಾಡಿಕೊಂಡು ನಗರಕ್ಕೆ ತಂದಿದ್ದರು. ಅದೇ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಯರು ಒಂಟಿಯಾಗಿ ಓಡಾಡುವ ರಸ್ತೆಗಳ ಬಗ್ಗೆ ತಾಯಿ ಮಾಹಿತಿ ನೀಡುತ್ತಿದ್ದರು. ಅದೇ ರಸ್ತೆಗೆ ಹೋಗುತ್ತಿದ್ದ ಮಗ– ಸ್ನೇಹಿತ, ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಸರ ಕಳ್ಳತನವನ್ನೇ ಆರೋಪಿಗಳು ವೃತ್ತಿ ಮಾಡಿಕೊಂಡಿದ್ದರು. ಮಗ ಕದ್ದು ತರುತ್ತಿದ್ದ ಚಿನ್ನದ ಸರಗಳನ್ನು ತಾಯಿ ಮಾರುತ್ತಿದ್ದರು. ಕೆಲ ಸರಗಳನ್ನು ಅಡವಿಡುತ್ತಿದ್ದರು’ ಎಂದು ಹೇಳಿದರು.

12 ಅಪರಾಧ ಪ್ರಕರಣಗಳಲ್ಲಿ ಭಾಗಿ

‘55 ವರ್ಷದ ದೂರುದಾರ ಮಹಿಳೆ ಮುದ್ದಿನಪಾಳ್ಯದ ದೊಡ್ಡಣ್ಣ ವೃತ್ತದ ಬಳಿ ಮಾರ್ಚ್ 15ರಂದು ನಡೆದುಕೊಂಡು ಹೊರಟಿದ್ದರು. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯನ್ನು ಮಾತನಾಡಿಸಿದ್ದರು. ಬಳಿಕ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು. ‘ಕೃತ್ಯ ನಡೆದಿದ್ದ ಸ್ಥಳದಲ್ಲಿ ಹಲವು ಬಾರಿ ಆರೋಪಿ ರೋಜಾ ಓಡಾಡಿದ್ದರು. ಅನುಮಾನದ ಮೇರೆಗೆ ಅವರನ್ನು ವಶಕ್ಕೆ ಪಡೆದಾಗ ಅವರ ಮಗ ಹಾಗೂ ಆತನ ಸ್ನೇಹಿತನೇ ಕೃತ್ಯ ಎಸಗಿರುವುದು ಗೊತ್ತಾಯಿತು. ಕೃತ್ಯಕ್ಕೆ ರೋಜಾ ಸಹಕಾರ ನೀಡಿದ್ದ ಸಂಗತಿ ತಿಳಿಯಿತು’ ಎಂದರು. ‘ರೋಜಾ ಮಗ ಹಾಗೂ ಈತನ ಸ್ನೇಹಿತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 12 ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಜರಾಜೇಶ್ವರಿನಗರ ಕೆಂಗೇರಿ ಹಾಗೂ ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಸರ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿ ರೋಜಾ ಅವರಿಂದ ₹ 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ರೋಜಾ ಮಗ ಹಾಗೂ ಆತನ ಸ್ನೇಹಿತನ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT