ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಪೇಟೆಯ ಈದ್ಗಾ ಮೈದಾನ ಕ್ರೀಡೆಗಷ್ಟೇ ಸೀಮಿತ: ಹೈಕೋರ್ಟ್

ಚಾಮರಾಜಪೇಟೆ: ಈದ್ಗಾ ಮೈದಾನ ವಿವಾದ
Last Updated 25 ಆಗಸ್ಟ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಚಾಮರಾಜಪೇಟೆ ಮೈದಾನವು ಕ್ರೀಡೆಗಳಿಗೆ ಮಾತ್ರವೇ ಸೀಮಿತವಾಗಿರಬೇಕು’ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

‘ಮೈದಾನದ ಮಾಲೀಕತ್ವ ಕಂದಾಯ ಇಲಾಖೆಗೆ ಸೇರಿದೆ’ ಎಂಬ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ಬೆಂಗಳೂರು ಜಿಲ್ಲೆ ವಕ್ಫ್‌ ಸಲಹಾ ಸಮಿತಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಮುಸ್ಲಿಂ ಸಮುದಾಯದವರು ರಂಜಾನ್ ಮತ್ತು ಬಕ್ರೀದ್ ವೇಳೆ ಮಾತ್ರವೇ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು. ಬೇರೆ ಸಂದರ್ಭಗಳಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲ’ ಎಂದು ನ್ಯಾಯಪೀಠ ಹೇಳಿದೆ.

ವಿಚಾರಣೆ ವೇಳೆ ವಕ್ಫ್ ಮಂಡಳಿ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ, ‘ಇದು ವಕ್ಫ್ ಮಂಡಳಿಗೆ ಸೇರಿದ ಜಾಗ ಎಂಬುದನ್ನು ಈ ಹಿಂದೆಯೇ ನಿರ್ಧರಿಸಿ, 1965ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಬಿಬಿಎಂಪಿ ಜಂಟಿ ಆಯುಕ್ತರು ತಮ್ಮ ಅಧಿಕಾರ ಮೀರಿ ಆದೇಶ ಹೊರಡಿಸಿದ್ದಾರೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಮೈಸೂರು ಭೂ ಕಂದಾಯ ಕಾಯ್ದೆಯ ಕಲಂ 36ರ ಪ್ರಕಾರ ಮೈದಾನವು ರಾಜ್ಯ ಸರ್ಕಾರದ ಸ್ವತ್ತು. 1965ರಲ್ಲಿ ಸರ್ಕಾರ ಜಮೀನಿನ ಸರ್ವೇ ನಡೆಸಿದಾಗ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಕಳೆದ 57 ವರ್ಷಗಳಿಂದಲೂ ಈ ಸ್ಥಿರಾಸ್ತಿ ಸರ್ಕಾರದ ಹೆಸರಿನಲ್ಲಿದೆ. ಹಾಗಾಗಿ, ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಆದೇಶ ಕಾನೂನುಬದ್ಧವಾಗಿಯೇ ಇದೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ನ್ಯಾಯಪೀಠ, ‘ಇದನ್ನೂ ಮತ್ತೊಂದು ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದಂತೆ ಮಾಡಬೇಡಿ’ ಎಂದು ಮೌಖಿಕವಾಗಿ ಕುಟುಕಿತಲ್ಲದೆ, ‘ಪ್ರತಿ ಶುಕ್ರವಾರದ ಪ್ರಾರ್ಥನೆಗೆ ಇಲ್ಲಿ ಅವಕಾಶ ಇರುವುದಿಲ್ಲ. ಪ್ರಕರಣ ಇತ್ಯರ್ಥ ಆಗುವವರೆಗೆ ಮೈದಾನವನ್ನು ಕ್ರೀಡೆಗಳ ಉಪಯೋಗಕ್ಕೆ ಮಾತ್ರ ಸೀಮಿತಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಅದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT