ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದಲ್ಲಿ ಮೋದಿ ಭಾಷಣ: ಚಂದ್ರಯಾನ–3ಕ್ಕಾಗಿ ದುಡಿದ ಎಲ್ಲರಿಗೂ ಸಲ್ಯೂಟ್‌

Published 26 ಆಗಸ್ಟ್ 2023, 2:57 IST
Last Updated 26 ಆಗಸ್ಟ್ 2023, 2:57 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ಮೇಲೆ ಪ್ರಜ್ಞಾನ್​ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ. ಇದಕ್ಕೆ ಕಾರಣ ನೀವು (ವಿಜ್ಞಾನಿಗಳು), ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ಗ್ರಿಸ್‌ ರಾಷ್ಟ್ರದ ಪ್ರವಾಸದಿಂದ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಚಂದರಯಾನ-3ರ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳನ್ನು ಅಭಿನಂದಿಸಿ ಪೀಣ್ಯದಲ್ಲಿರುವ ಇಸ್ರೊ ಕಚೇರಿಯಲ್ಲಿ ಮಾತನಾಡಿದರು. 

ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು. 

ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ಅವರು ಪ್ರಧಾನಿಯವರಿಗೆ ಚಂದ್ರಯಾನ-3ರ ಪ್ರತಿಕೃತಿಯನ್ನು ನೀಡಿ ಗೌರವಿಸಿದರು. ಸೋಮನಾಥ್‌ ಸೇರಿದಂತೆ ಚಂದ್ರಯಾನ-3ರ ನೇತೃತ್ವ ವಹಿಸಿದ್ದ ವಿಜ್ಞಾನಿಗಳಷ ಬೆನ್ನುತಟ್ಟಿ ಪ್ರಧಾನಿ ಅಭಿನಂದಿಸಿದರು.

ತಿರಂಗಾ ಈಗ ಚಂದ್ರನನ್ನು ತಲುಪಿದೆ. ಈ ಸಾಧನೆಯನ್ನು ತಮ್ಮದೇ ಎಂಬಂತೆ ದೇಶದ ಜನರು ಸಂಭ್ರಮಿಸಿದ್ದಾರೆ. ಇಂತಹ ಕ್ಷಣಗಳನ್ನು ನಿರ್ಮಿಸಿದ ಇಸ್ರೊ ವಿಜ್ಞಾನಿಗಳು, ತಂತ್ರಜ್ಞರು, ಎಂಜಿನಿಯರ್‌ಗಳು ಸೇರಿದಂತೆ ಚಂದ್ರಯಾನ-3ಕ್ಕಾಗಿ ದುಡಿದ ಎಲ್ಲರಿಗೂ ಸಲ್ಯೂಟ್‌ ಮಾಡಲು ಬಯಸುತ್ತೇನೆ ಎಂದರು.

ಈ ಯಶಸ್ಸಿನ ನೆನಪಿಗಾಗಿ ಕೇಂದ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್‌ 1ರಿಂದ ಸ್ಪರ್ಧೆ ಆರಂಭವಾಗಲಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

ಈ ಸಾಧನೆಯ ನೆನಪಿನಲ್ಲಿ ಇಸ್ರೊ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜೀವನಮಟ್ಟ ಸುಧಾರಣೆ ಹಾಗೂ ಸುಲಲಿತ ಆಡಳಿತದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆ ಕುರಿತು ರಾಷ್ಟ್ರ ಮಟ್ಟದ ಹ್ಯಾಕಥಾನ್‌ ಆಯೋಜಿಸಬೇಕು. ಆರೋಗ್ಯ, ಶಿಕ್ಷಣ, ಟೆಲಿ ಮೆಡಿಸಿನ್‌, ಹವಾಮಾನ ಮುನ್ಸೂಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆಗೆ ಇರುವ ಅವಕಾಶಗಳ ಕುರಿತು ಸಂಶೋಧನೆಗೆ ಯುವಜನರಿಗೆ ಪ್ರೇರಣೆ ನೀಡಲು ಈ ಹ್ಯಾಕಥಾನ್‌ ವೇದಿಕೆ ಆಗಬೇಕು ಎಂದು ಸಲಹೆ ನೀಡಿದರು.

ಆಗಸ್ಟ್​ 23 ಚಂದ್ರಯಾನ-3 ಯಶಸ್ವಿಯಾದ ದಿನ. ಈ ದಿನವನ್ನು ಇನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ‘ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯೋಣ. ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್​ ಎಂದು ಕರೆದರು. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ ಎಂದು ಮೋದಿ ಹೇಳಿದರು.

ದೇಶದ ಜನರ ಆಶೀರ್ವಾದ ನಮ್ಮ ಮೇಲಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗುವ ಗುರಿಗೆ ಇದು ಪೂರಕವಾಗಲಿದೆ ಎಂದು ಮೋದಿ ಹೇಳಿದರು.

ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ 2,500 ನವೋದ್ಯಮಗಳು ಭಾರತದಲ್ಲಿವೆ. ಈ ಕ್ಷೇತ್ರದಚ ವಹಿವಾಟು 16 ಬಿಲಿಯನ್‌ ಡಾಲರ್‌ ತಲುಪಿದೆ. ಈ ಸಾಧನೆಯು 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಾಣುವ ಗುರಿ ತಲುಪಲು ಕಾರಣವಾಗಲಿದೆ ಎಂದರು.

ಚಂದ್ರಯಾನ-3ರ ಲ್ಯಾಂಡರ್‌ ಚಂದ್ರನ ಮೇಲೆ ಇಳಿದಾಗ ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ಅಲ್ಲಿಂದ ಗ್ರೀಸ್‌ ಪ್ರವಾಸಕ್ಕೆ ತೆರಳಿದೆ. ಆದರೆ, ನನ್ನ ಮನಸ್ಸೆಲ್ಲವೂ ಇಲ್ಲಿಯೇ ಇತ್ತು. ದೂರ ಉಳಿದು ನಿಮಗೆ ಅನ್ಯಾಯ ಮಾಡುತ್ತಿದ್ದೀನೇನೋ ಎಂಬ ಭಾವನೆ ಮೂಡಿತ್ತು. ಅದಕ್ಕಾಗಿ ಗ್ರೀಸ್‌ನಿಂದ ನೇರ ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಅಭಿನಂದಿಸಿದ ಬಳಿಕ ಸಮಾಧಾನವಾಗಿದೆ ಎಂದು ಮೋದಿ ಹೇಳಿದರು.

ಈ ಸಾಧನೆಯ ಮೂಲಕ ಚಂದ್ರನ ಮೇಲೆ ಭಾರತದ ಶಂಖನಾದವನ್ನು ಮೊಳಗಿಸಿದೀರಿ. ವಿಕ್ರಮ್‌ನ ವಿಶ್ವಾಸ ಮತ್ತು ಪ್ರಗ್ಯಾನ್‌ನ ಪರಾಕ್ರಮವು ಇಡೀಷ ಜಗತ್ತು ಭಾರತದತ್ತ ನೋಡುವಂತೆ ಮಾಡಿದೆ. ಚಂದ್ರನ ಮೇಲೆ ಭಾರತದ ಚಂದ್ರಯಾನ-3ರ ಲ್ಯಾಂಡರ್‌ನ ಸ್ಪರ್ಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಹೊಸ ಮಾರ್ಗವೊಂದನ್ನು ತೋರಿಸಿದೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT