ಶುಕ್ರವಾರ, ಜುಲೈ 1, 2022
21 °C
ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ

ಕ್ಷೇತ್ರದ ಫಲಾನುಭವಿಗಳಿಗೆ ಶೇ 50 ಮನೆ ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Home

ಬೆಂಗಳೂರು: ’ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಯಲ್ಲಿ ಶೇ 50ರಷ್ಟು ಮನೆಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ವಸತಿ ಇಲಾಖೆ ನಿರ್ಧರಿಸಿದೆ.

ಉಳಿದ ಶೇ 50 ಮನೆಗಳನ್ನು ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಹಾಗೂ ಕ್ಷೇತ್ರದಲ್ಲಿ ಶೇ 50ರಷ್ಟು ಫಲಾನುಭವಿಗಳು ಲಭ್ಯ ಇಲ್ಲದಿದ್ದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಇತರ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಇಲಾಖೆ ತೀರ್ಮಾನಿಸಿದೆ. 

ವಸತಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಫಲಾನುಭವಿಗಳಿಗೆ ಆದ್ಯತೆ ನೀಡಬೇಕು ಎಂದು ನಗರದ ಶಾಸಕರು ಹಾಗೂ ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಪ್ರಸ್ತಾಪವಾದ ಹಲವು ಅಂಶಗಳನ್ನು ಪರಿಗಣಿಸಿ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ. ಮುಂದಿನ ಮೂರು ತಿಂಗಳವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಲು ನಿರ್ಧರಿಸಿದೆ.

ಬಡವರಿಗೆ ಸೂರು ಒದಗಿಸುವ ಯೋಜನೆಯನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2017–18ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಮೂಲಕ ಮಹತ್ವಾಕಾಂಕ್ಷಿ ಯೋಜನೆಗೆ 2018ರ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ನಗರದ 54 ಸ್ಥಳಗಳಲ್ಲಿ ಮೊದಲ ಹಂತದಲ್ಲಿ 46,499 ಮನೆಗಳ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ.

ಆರಂಭದಲ್ಲಿ ಜಿ+ 3 ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಚೆನ್ನೈ, ಹೈದರಾಬಾದ್‌ನಲ್ಲಿ ಸ್ಥಳೀಯ ಸರ್ಕಾರಗಳೇ ಹತ್ತು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಿ ಯಶಸ್ಸು ಸಾಧಿಸಿವೆ. ಅಲ್ಲಿನ ಮಾದರಿಗಳನ್ನು ಅಧ್ಯಯನ ಮಾಡಿದ ಬಳಿಕ ಯೋಜನೆಯ ವಿನ್ಯಾಸ ಬದಲಿಸಲು ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ತೀರ್ಮಾನಿಸಿತ್ತು. ಜಿ +14 ಅಂತಸ್ತಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿತ್ತು. 46,499 ಮನೆಗಳು ಜಿ+14 ಅಂತಸ್ತಿನ ಮಾದರಿಯಲ್ಲಿ ನಿರ್ಮಾಣಗೊಳ್ಳಲಿವೆ. ಉಳಿದ 53,501 ಮನೆಗಳನ್ನು ನೆಲಮಹಡಿ + ಮೂರು ಮಹಡಿಗಳ (ಜಿ +3) ವಿನ್ಯಾಸದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. 

ಐದು ವರ್ಷಗಳಲ್ಲಿ ನಗರ ಜಿಲ್ಲಾಡಳಿತ ಸುಮಾರು 16 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಲಕ್ಷ ಸೂರುಗಳ ನಿರ್ಮಾಣಕ್ಕೆ 1,130 ಎಕರೆ ಬೇಕಿದೆ ಎಂದು ಅಂದಾಜಿಸಲಾಗಿತ್ತು. ಜಿಲ್ಲಾಡಳಿತವು ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ 582.39 ಎಕರೆ ಗೋಮಾಳ ಹಾಗೂ ಖರಾಬು ಭೂಮಿಯನ್ನು ಶುರುವಿನಲ್ಲೇ ಹಸ್ತಾಂತರಿಸಿತ್ತು. ಬಳಿಕ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಇಲ್ಲಿಯವರೆಗೆ 1,040 ಎಕರೆ ಜಾಗವನ್ನು ನೀಡಿದೆ.

ವಸತಿ ಯೋಜನೆ ವಿಶೇಷಗಳು

320 ಚದರ ಅಡಿ - ಒಂದು ಬಿಎಚ್‌ಕೆ ಮನೆಯ ವಿಸ್ತೀರ್ಣ

₹6 ಲಕ್ಷ - ಮನೆ ನಿರ್ಮಾಣಕ್ಕೆ ತಗಲುವ ವೆಚ್ಚ

520 ಚದರ ಅಡಿ - ಎರಡು ಬಿಎಚ್‌ಕೆ ಮನೆಯ ವಿಸ್ತೀರ್ಣ

12 ಲಕ್ಷ - ಮನೆ ನಿರ್ಮಾಣಕ್ಕೆ ತಗಲುವ ವೆಚ್ಚ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು