ಮಂಗಳವಾರ, ಜೂನ್ 22, 2021
22 °C
ಅಪಹರಣ ಪ್ರಕರಣ ಸುಖಾಂತ್ಯ * ಪೊಲೀಸರಿಗೆ ತಂದೊಪ್ಪಿಸಿದ ಮಹಿಳೆಯರು

ಮಗು ಸುರಕ್ಷಿತ; ಅಂಧ ದಂಪತಿ ಮುಖದಲ್ಲಿ ಖುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮೆಜೆಸ್ಟಿಕ್‌ ನಿಲ್ದಾಣದಿಂದ ಏಪ್ರಿಲ್ 27ರಂದು ಅಪಹರಣಕ್ಕೀಡಾಗಿದ್ದ ಎಂಟು ತಿಂಗಳ ಮಗು ಸುರಕ್ಷಿತವಾಗಿ ಅಂಧ ದಂಪತಿಯ ಮಡಿಲು ಸೇರಿದೆ.

ಬೆಂಗಳೂರಿನಲ್ಲಿ ವಾಸವಿರುವ ಸಂಬಂಧಿ ಚನ್ನಬಸು ಎಂಬುವರನ್ನು ಭೇಟಿಯಾಗಲು ರಾಯಚೂರಿನಿಂದ ನಗರಕ್ಕೆ ಬಂದಿದ್ದ ಬಸವರಾಜು 
ಹಾಗೂ ಬಿ.ಕೆ. ಚಿನ್ನು ದಂಪತಿಯ ಮಗುವನ್ನು ಅಪರಿಚಿತ ಮಹಿಳೆಯೊಬ್ಬರು ಅಪಹರಿಸಿಕೊಂಡು ಹೋಗಿದ್ದರು.

ಇದನ್ನೂ ಓದಿ: ಅಂಧ ದಂಪತಿ ಮಗು ಅಪಹರಿಸಿದ ಮಹಿಳೆ​

ಕಂಗಾಲಾಗಿದ್ದ ದಂಪತಿ, ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ, ತನಿಖೆಗೆ ಚಿಕ್ಕಪೇಟೆ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಮಗು ತಂದೊಪ್ಪಿಸಿದ ಮಹಿಳೆಯರು: ‘ಅಪಹರಣ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ನೋಡಿದ್ದ ಕೆಂಗೇರಿಯ ಲಕ್ಷ್ಮಿದೇವಿ ಹಾಗೂ ಪಾರ್ವತಮ್ಮ ಎಂಬುವರು ಮಗುವನ್ನು ಸುರಕ್ಷಿತವಾಗಿ ಠಾಣೆಗೆ ತಂದು ಒಪ್ಪಿಸಿದ್ದಾರೆ’ ಎಂದು ಡಿಸಿಪಿ ಚನ್ನಣ್ಣನವರ ತಿಳಿಸಿದರು.

‘ಏಪ್ರಿಲ್ 27ರಂದು ಬೆಳಿಗ್ಗೆ ಬಿಎಂಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋಗಿ ಹೊರಗೆ ಬಂದು ನಿಂತಿದ್ದೆ. ಅಲ್ಲಿಗೆ ಬಂದಿದ್ದ ಮಹಿಳೆಯೊಬ್ಬಳು, ನನ್ನ ಕೈಗೆ ಮಗು ಕೊಟ್ಟು ಶೌಚಾಲಯದ ಒಳಗೆ ಹೋಗಿದ್ದಳು. ನಂತರ, ನಾಪತ್ತೆಯಾದಳು. ಮಗು ವಿಪರೀತವಾಗಿ ಅಳುತ್ತಿತ್ತು. ಹೀಗಾಗಿ, ನಾನೇ ಮನೆಗೆ ತೆಗೆದುಕೊಂಡು ಹೋಗಿದ್ದೆ’ ಎಂದು ಪಾರ್ವತಮ್ಮ ಹೇಳಿಕೆ ನೀಡಿದ್ದಾಳೆ’ ಎಂದು ವಿವರಿಸಿದರು.

‘ಅಂಧ ದಂಪತಿಯ ಮಗು ಎಂಬುದು ಗೊತ್ತಾಗುತ್ತಿದ್ದಂತೆ ಠಾಣೆಗೆ ಕರೆ ಮಾಡಿ, ಮಗು ನಮ್ಮ ಬಳಿ ಇರುವುದಾಗಿ ಹೇಳಿದ್ದೆ. ಪೊಲೀಸರ ಸೂಚನೆಯಂತೆ ಮಗುವನ್ನು ಠಾಣೆಗೆ ತಂದು ಒಪ್ಪಿಸಿದ್ದೇನೆ’ ಎಂಬುದಾಗಿ ಪಾರ್ವತಮ್ಮ ತಿಳಿಸಿದ್ದಾಳೆ. ಇಬ್ಬರೂ ಮಹಿಳೆಯರ ಪೂರ್ವಾಪರ ತಿಳಿದುಕೊಳ್ಳುತ್ತಿದ್ದೇವೆ. ಅವರಿಬ್ಬರೂ ಅಮಾಯಕರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಚನ್ನಣ್ಣನವರ ಹೇಳಿದರು.

‘ನೀರು ಕುಡಿಸುವ ನೆಪದಲ್ಲಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಮಹಿಳೆ ಯಾರು ಎಂಬುದು ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಲು ಚಿಕ್ಕಪೇಟೆ ಉಪವಿಭಾಗದ ಎಸಿಪಿ ನೇತೃತ್ವದ ತಂಡವು ತನಿಖೆ ಮುಂದುವರಿಸಿದೆ. ಎಲ್ಲ ಆಯಾಮಗಳಲ್ಲೂ ಪರಿಶೀಲನೆ ನಡೆಸುತ್ತಿದೆ’ ಎಂದು ವಿವರಿಸಿದರು. 

ರಾಯಚೂರಿನಿಂದ ಬಂದ ದಂಪತಿ: ಮಗು ಅಪಹರಣದಿಂದ ನೊಂದಿದ್ದ ಅಂಧ ದಂಪತಿ, ‘ಮಗುವನ್ನು ಹುಡುಕಿಕೊಡಿ’ ಎಂದು ಪೊಲೀಸರ ಎದುರು ಮನವಿ ಮಾಡಿ ರಾಯಚೂರಿಗೆ ವಾಪಸು ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಮಗು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ನಗರಕ್ಕೆ ವಾಪಸ್‌ ಬಂದರು.

ಡಿಸಿಪಿ ಕಚೇರಿಯಲ್ಲೇ ಮಗುವನ್ನು ದಂಪತಿಗೆ ಒಪ್ಪಿಸಲಾಯಿತು. ‘ಮಗುವನ್ನು ಕಳೆದುಕೊಂಡು ಜೀವವೇ ಹೋದಂತಾಗಿತ್ತು. ಈಗ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಿದ ಪೊಲೀಸರಿಗೆ ಧನ್ಯವಾದಗಳು’ ಎಂದು ದಂಪತಿ ಕೃತಜ್ಞತೆ ಅರ್ಪಿಸಿದರು.

***

ಮಹಿಳೆಯರ ಪೂರ್ವಾಪರ ತಿಳಿದುಕೊಳ್ಳುತ್ತಿದ್ದೇವೆ. ಅವರಿಬ್ಬರೂ ಅಮಾಯಕರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ.

– ರವಿ ಚನ್ನಣ್ಣನವರ, ಪಶ್ಚಿಮ ವಿಭಾಗದ ಡಿಸಿಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು