ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ನಾಪತ್ತೆ; ತನಿಖೆಗೆ ಹೊಸ ಮಾರ್ಗಸೂಚಿ

‘ಬಾಲ್ಯವಿವಾಹ ಮತ್ತು ಮಕ್ಕಳ ಕಳ್ಳಸಾಗಣೆ ತಡೆ’ ಕುರಿತು ರಾಜ್ಯಮಟ್ಟದ ಸಮಾಲೋಚನೆ
Last Updated 30 ಸೆಪ್ಟೆಂಬರ್ 2020, 19:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳ ನಾಪತ್ತೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈಚೆಗೆ ಹೊಸದಾಗಿ ಮಾರ್ಗಸೂಚಿ ಹೊರಡಿಸಲಾಗಿದೆ. ಅದರಂತೆ ಇಂಥ ಪ್ರಕರಣಗಳನ್ನು ಅಪಹರಣ ಎಂದು ಪರಿಗಣಿಸಿಯೇ ತನಿಖೆ ಆರಂಭಿಸಲಾಗುತ್ತದೆ’ ಎಂದು ಮಕ್ಕಳ ಸಾಗಣೆ ವಿರೋಧಿ ಘಟಕ (ಎಎಚ್‌ಟಿಯು) ಪ್ರಭಾರ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಬುಧವಾರ ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್ ಮತ್ತು ಚೈಲ್ಡ್‌‌ ರೈಟ್ಸ್‌‌ ಟ್ರಸ್ಟ್‌‌ ನಗರದಲ್ಲಿ ಏರ್ಪಡಿಸಿದ್ದ ‘ಕೋವಿಡ್ ಸಂದರ್ಭದಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಕಳ್ಳಸಾಗಾಣೆ ತಡೆ’ ಕುರಿತ ರಾಜ್ಯಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳು ಕಾಣೆಯಾದ ಬಗ್ಗೆ ಚೈಲ್ಡ್‌‌ ಟ್ರ್ಯಾಕ್ ಪೋರ್ಟಲ್‌ಗೆ ತಕ್ಷಣ ಅಪ್‌ಲೋಡ್ ಮಾಡಬೇಕು. ಪೋಷಕರ ಅನುಮತಿ ಪಡೆದು, ಮಗುವಿನ ಭಾವಚಿತ್ರ ಪ್ರಕಟಿಸಬೇಕು ಎನ್ನುವುದು ಸೇರಿದಂತೆ ಹಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ’ ಎಂದೂ ಅವರು ತಿಳಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ‘ಮಕ್ಕಳ ಹಕ್ಕುಗಳ ರಕ್ಷಣೆ, ಮಾನವ ಕಳ್ಳ ಸಾಗಣೆ ತಡೆಗೆ ಕಠಿಣ ಕಾನೂನುಗಳಿವೆ. ಅವುಗಳನ್ನು ಗಂಭೀರ ವಾಗಿ ಪರಿಗಣಿಸುತ್ತಿಲ್ಲ. ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಲಾಪರಾಧಿ ನ್ಯಾಯ ಕಾಯ್ದೆ ಅಡಿ ಯಾವುದೇ ಮಗುವಿನ ವಿರುದ್ಧ ದಾಖಲಾಗಿರುವ ಸಣ್ಣ-ಪುಟ್ಟ ಪ್ರಕರಣಗಳನ್ನು (3 ವರ್ಷಕ್ಕಿಂತ ಕಡಿಮೆ ಶಿಕ್ಷೆ) ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂಬ ನಿಯಮ ಇದೆ. ಆದರೆ, ರಾಜ್ಯದಲ್ಲಿ ಆರು ತಿಂಗಳು ಮೀರಿದ 803 ಪ್ರಕರಣಗಳು ಬಾಕಿ ಇವೆ’ ಎಂದರು.

‘ಗಂಭೀರ ಪ್ರಕರಣ ದಾಖಲಾದ ಎರಡು ತಿಂಗಳಲ್ಲಿ ತನಿಖೆ ನಡೆಸಬೇಕು. ಆದರೆ, 1,250 ಪ್ರಕರಣಗಳು ನಿಗದಿತ ಅವಧಿಯಲ್ಲಿ ತನಿಖೆ ಕೂಡ ಕೈಗೆತ್ತಿಕೊಂಡಿಲ್ಲ. ಈ ಬಗ್ಗೆ ಯಾರೂ ದನಿ ಎತ್ತುವುದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕಾನೂನಿನಲ್ಲಿ ಬಾಲಾಪರಾಧಿ ಮಕ್ಕಳ ಸುಧಾರಣೆಗೆ ಒತ್ತು ಕೊಡಲಾಗಿದೆ. ಮಕ್ಕಳನ್ನು ಬೇರೆ ಅಪರಾಧಿಗಳಂತೆ ನಡೆಸಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಆದರೆ, ವಸ್ತುಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಸುಧಾರಣೆಗಿಂತ ಬಾಲಕ ಅಥವಾ ಬಾಲಕಿಯರು ಎಸಗಿದ ಅಪರಾಧಕ್ಕೆ ಒತ್ತು ನೀಡಲಾಗುತ್ತಿದೆ’ ಎಂದು ಕಳವಳ ಅವರು ವ್ಯಕ್ತಪಡಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆಂತೋನಿ ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆ. ಹಲೀಮಾ, ಚೈಲ್ಡ್‌ ರೈಟ್ಸ್ ಟ್ರಸ್ಟ್‌ನ‌ ಕಾರ್ಯಕಾರಿ ನಿರ್ದೇಶಕ ಎನ್.ವಿ. ವಾಸುದೇವ ಶರ್ಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT