ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣದಿಂದ ಮಾತ್ರ ಮಕ್ಕಳಿಗೆ ಉತ್ತಮ ಭವಿಷ್ಯ: ಸಚಿವ ಕೃಷ್ಣ ಬೈರೇಗೌಡ

Published 23 ಜೂನ್ 2024, 15:10 IST
Last Updated 23 ಜೂನ್ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಗೊಳ್ಳಲು ಹಾಗೂ ಅವರು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.‌

ಕುವೆಂಪು ವಾರ್ಡ್‌ನಲ್ಲಿ ಸುಜನಾ ಕಾನ್ವೆಂಟ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ‘ನಮ್ಮೂರ ಹೆಮ್ಮೆ-2024’ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಿ ಮಾತನಾಡಿದರು.

‘ಶಿಕ್ಷಣವಿದ್ದರೆ, ನಮ್ಮ ಮಕ್ಕಳು ಜೀವನದಲ್ಲಿ ಗೆಲುವು ಸಾಧಿಸುವುದು ಗ್ಯಾರಂಟಿ. ಹೀಗಾಗಿ ಎಲ್ಲಾ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.

‘ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿರುತ್ತಾರೆ. ಅವರ ಶ್ರಮವನ್ನು ಗೌರವಿಸುವುದಕ್ಕಾಗಿ ಹೀಗೆ ಸಾರ್ವಜನಿಕರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡಿ ಸನ್ಮಾನಿಸಲಾಗುತ್ತಿದೆ’ ಎಂದು ಹೇಳಿದರು.

‘ಉತ್ತಮ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು, ಇಂಥವರಿಂದ ಬೇರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸಿಗಲಿ ಎಂಬುದು ನಮ್ಮೂರ ಹೆಮ್ಮೆ ಕಾರ್ಯಕ್ರಮದ ಉದ್ದೇಶ. ಐದು ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ‘ ಎಂದರು.

‘ಉತ್ತಮ ಅಂಕ ಪಡೆಯುವ ಮಕ್ಕಳು ಮನೆಗಷ್ಟೇ ಅಲ್ಲ ಸಮಾಜಕ್ಕೆ ಹೆಮ್ಮೆಯ ವಿಚಾರ. ಅದೇ ಕಾರಣಕ್ಕಾಗಿ ಈ ಕಾರ್ಯಕ್ರಮಕ್ಕೆ ‘ನಮ್ಮೂರ ಹೆಮ್ಮೆ’ ಎಂದು ಹೆಸರಿಟ್ಟಿದ್ದೇವೆ‘ ಎಂದರು.

ಮೀನಾಕ್ಷಿ ಕೃಷ್ಣ ಬೈರೇಗೌಡ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಕ್ಷೇತ್ರ ಕುವೆಂಪು ನಗರ ವಾರ್ಡ್‌ನ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT