ಶುಕ್ರವಾರ, ಜೂನ್ 5, 2020
27 °C
ಇಂದಿನಿಂದ ಡಿಜಿಟಲ್‌ನಲ್ಲಿ ಎರಡನೇ ಸರಣಿ

ಮಕ್ಕಳ ಕತೆಗಳ ಹಬ್ಬ‘ಆಹಾ! ಲಿಟ್ಲ್‌ ಕ್ಲೌಡ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೊದಲ ಸರಣಿಯಲ್ಲಿ ಮಕ್ಕಳಿಗೆ ಸ್ವಾರಸ್ಯಕರ ಕತೆಗಳನ್ನು ಉಣಬಡಿಸುವ ಮೂಲಕ ಗಮನ ಸೆಳೆದಿದ್ದ ರಂಗ ಶಂಕರ ಮತ್ತೆ ‘ಆಹಾ! ಲಿಟ್ಲ್ ಕ್ಲೌಡ್’ ಕಥಾಸಮಯದ ಎರಡನೇ ಸರಣಿಯೊಂದಿಗೆ ಮರಳಿ ಬಂದಿದೆ.

ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುವ ಈ ಸರಣಿಯಲ್ಲಿ ಕನ್ನಡ ಮತ್ತು ಸಂಜ್ಞಾ ಭಾಷೆ ಸೇರಿದಂತೆ ಆರು ಭಾಷೆಗಳಲ್ಲಿ ಒಟ್ಟು 20 ಕತೆ ಹೇಳಲಾಗುತ್ತದೆ. ಮೇ 22ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 11 ಮತ್ತು 11.30ಕ್ಕೆ ಎರಡು ಕತೆಗಳು ಪ್ರಸಾರವಾಗಲಿವೆ. 

ದೇಶ, ವಿದೇಶಗಳ 17 ನುರಿತ ಕಲಾವಿದರು ಈ ಕತೆಗಳನ್ನು ರಸವತ್ತಾಗಿ ಕಟ್ಟಿಕೊಡಲಿದ್ದಾರೆ. ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್ಲೆಂಡ್‌ ಮತ್ತು ಅಮೆರಿಕದ ಕಲಾವಿದರ ಧ್ವನಿಯಲ್ಲಿ ಐದು ಕತೆಗಳು ಭಿನ್ನವಾಗಿ ಮೂಡಿ ಬರಲಿವೆ. 

ಈ ಸರಣಿಯಲ್ಲಿ ಭಾರತೀಯ ರಂಗ ಪ್ರಕಾರಗಳಾದ ಯಕ್ಷಗಾನ, ಕುಟಿಯಾಟ್ಟಂ ಮತ್ತು ಗೋಂಧಲ್ ಪ್ರಕಾರದ ಕತೆಗಳಿರುವುದು ಮತ್ತೊಂದು ವಿಶೇಷ. ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳ ಜತೆ ಹಿರಿಯರೂ ಈ ಕತೆಗಳನ್ನು ಆಲಿಸಬಹುದು.

‘ಸಂಕೀರ್ಣವಾದ ಭಾರತೀಯ ಕಲಾ ಪ್ರಕಾರಗಳನ್ನು ಈ ಕಲಾವಿದರು, ಮಕ್ಕಳಿಗೂ ತಿಳಿಯುವಷ್ಟು ಸರಳವಾಗಿ ವಿವರಿಸಿದ್ದಾರೆ. ಸಂಜ್ಞಾ ಭಾಷೆಯಲ್ಲಿರುವ ಕತೆ ಎಲ್ಲರಿಗೂ ಇಷ್ಟವಾಗುವ ಹೊಸ ಪ್ರಯೋಗ. ಐದು ಹೊರದೇಶದ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ಕ್ರಮೇಣ ‘ಆಹಾ!ಲಿಟ್ಲ್ ಕ್ಲೌಡ್’ ಕಥಾ ಸರಣಿ ಜಾಗತಿಕ ಮಕ್ಕಳ ಕತೆಗಳ ಭಂಡಾರವಾಗುವುದರಲ್ಲಿ ಸಂಶಯವಿಲ್ಲ’ ಎನ್ನುವುದು ರಂಗ ಶಂಕರದ ಅರುಂಧತಿ ನಾಗ್‌ ಅವರ ವಿಶ್ವಾಸ. 

ಮೊದಲ ಕಥಾಸಮಯ ಸರಣಿಯಲ್ಲಿ ದೇಶದ ಹೆಸರಾಂತ ಕಲಾವಿದರು 22 ಕತೆಗಳನ್ನು ಮಕ್ಕಳಿಗೆ ಹೇಳಿದ್ದರು. ಈ ಕತೆಗಳು ರಂಗ ಶಂಕರದ ಫೇಸ್‌ಬುಕ್‌ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿವೆ. ಈ ಕತೆಗಳು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಮತ್ತು ಪ್ರಾಥಮಿಕ ಮತ್ತು ದ್ವಿತೀಯ ವಿದ್ಯಾಭ್ಯಾಸದ ವೆಬ್‌ತಾಣಗಳಲ್ಲೂ ನೋಡಲು ಸಿಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು