ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರಿಗೆ ಮನವಿ

ಚಿನ್ನಪ್ಪನಹಳ್ಳಿ ಗ್ರಾಮಸ್ಥರಿಂದ ಸ್ಮಶಾನಕ್ಕೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕ ಸ್ಮಶಾನಕ್ಕೆ ಅಗತ್ಯ ಜಮೀನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್‌. ಪುರ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಆಗಸ್ಟ್‌ 24ರಂದು ಮನವಿ ಸಲ್ಲಿಸಿರುವ ಚಿನ್ನಪ್ಪನಹಳ್ಳಿ ಗ್ರಾಮಸ್ಥರು, ಸಾರ್ವಜನಿಕ ಸ್ಮಶಾನಕ್ಕೆ ಜಮೀನು ಕಾಯ್ದಿರಿಸಿ ಆದೇಶ ಹೊರಡಿಸುವಂತೆ ಒತ್ತಾಯಿಸಿದ್ದಾರೆ. 30ಕ್ಕೂ ಹೆಚ್ಚು ಜನರು ಸಹಿ ಮಾಡಿದ್ದಾರೆ.

‘ನಗರ ಮಧ್ಯ ಭಾಗದಲ್ಲೇ ಇರುವ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸ್ಮಶಾನ ಒದಗಿಸಿಲ್ಲ. ಯಾರಾದರೂ ಮೃತಪಟ್ಟರೆ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದ ಸ್ಥಿತಿ ಇದೆ. ಗ್ರಾಮದ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದ ಸರ್ಕಾರಿ ಜಮೀನು ಲಭ್ಯವಿದ್ದರೂ ಸ್ಮಶಾನಕ್ಕೆ ಜಮೀನು ಕಾಯ್ದಿರಿಸಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಎಲ್ಲ ಗ್ರಾಮಗಳಲ್ಲೂ ಸಾರ್ವಜನಿಕ ಸ್ಮಶಾನಕ್ಕೆ ಜಮೀನು ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸಿ 2014 ಮತ್ತು 2019ರಲ್ಲಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಆ ಬಳಿಕ ತಮ್ಮ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ಹೇಳಿದ್ದಾರೆ.

ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 20ರಲ್ಲಿ 19 ಎಕರೆ 19 ಗುಂಟೆ ಜಮೀನು ಲಭ್ಯವಿದೆ. ಅದರಲ್ಲಿ 10 ಎಕರೆ 20 ಗುಂಟೆ ಸರ್ಕಾರಿ ‘ಎ’ ಖರಾಬು ಮತ್ತು 3 ಎಕರೆ 27 ಗುಂಟೆ ಸರ್ಕಾರಿ ‘ಬಿ’ ಖರಾಬು ಜಮೀನು ಇದೆ. ಅಲ್ಲಿ, 3 ಎಕರೆ 27 ಗುಂಟೆ ಸರ್ಕಾರಿ ‘ಬಿ’ ಖರಾಬು ಜಮೀನು ಸಂಪೂರ್ಣ ಖಾಲಿ ಇದೆ. ಅದನ್ನು ಚಿನ್ನಪ್ಪನಹಳ್ಳಿ ಗ್ರಾಮದ ಜನರ ಬಳಕೆಗಾಗಿ ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು