ಸೋಮವಾರ, ನವೆಂಬರ್ 30, 2020
20 °C

ಚರ್ಚ್‌ಸ್ಟ್ರೀಟ್‌: ವಾರಾಂತ್ಯದಲ್ಲಿ ‘ಶುದ್ಧ ಗಾಳಿಯ ಬೀದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚರ್ಚ್‌ಸ್ಟ್ರೀಟ್‌ನಲ್ಲಿ 2021ರ ಫೆಬ್ರುವರಿವರೆಗೆ ಎಲ್ಲ ವಾರಾಂತ್ಯಗಳಲ್ಲಿ ಹೊಗೆ ಉಗುಳುವ ಮೋಟಾರು ವಾಹನಗಳ ಸಂಚಾರ ನಿಷೇಧಿಸುವ 'ಶುದ್ಧ ಗಾಳಿಯ ಬೀದಿ’ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 'ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಯು.ಕೆ ಕ್ಯಾಟಪಲ್ಟ್ ಸಂಸ್ಥೆಯ ಸಹಯೋಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ' ಎಂದರು.

'ಶುದ್ಧಗಾಳಿ ಮತ್ತು ನೀರು ಪ್ರತಿ ನಾಗರೀಕನ ಹಕ್ಕು. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಪ್ರತಿ ವರ್ಷ ಶೇ 10ರಷ್ಟು ಏರುತ್ತಿದೆ. ಈ ಮಧ್ಯೆಯೂ ಸೈಕಲ್ ಬಳಕೆ, ನಡಿಗೆಗೆ ಯುವಜನ ಆದ್ಯತೆ ನೀಡಿರುವುದು ಆಶಾದಾಯಕ' ಎಂದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, 'ವಾಣಿಜ್ಯ ಚಟುವಟಿಕೆಗಳಿಗೆ ಹೆಸರಾದ ಚರ್ಚ್‍ಸ್ಟ್ರೀಟ್‌ನಲ್ಲಿ ಜನಸಂದಣಿಯೂ ಹೆಚ್ಚು. ಈ ಯೋಜನೆಯಿಂದ ವಾರಾಂತ್ಯದಲ್ಲಿ ಪರಿಸರಸ್ನೇಹಿ ಸೈಕಲ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಮಾತ್ರ ಇರಲಿದೆ. ಮಾಲಿನ್ಯರಹಿತ ಶುದ್ಧಗಾಳಿ ಬೀಸಲಿದೆ. ತುರ್ತು ಸೇವೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು' ಎಂದು  ಹೇಳಿದರು.

'ಈ ಯೋಜನೆಯು ಬೆಂಗಳೂರನ್ನು ಭವಿಷ್ಯದಲ್ಲಿ ದೆಹಲಿ, ಮುಂಬೈನಂತೆ ಸಂಚಾರ ದಟ್ಟಣೆ, ವಾಯುಮಾಲಿನ್ಯ ತುಂಬಿಕೊಂಡ ನಗರ ಎಂದು ಕರೆಯು ವುದನ್ನು ತಡೆಯಲಿದೆ' ಎಂದು ಶಾಸಕ ಎನ್.ಎ.ಹ್ಯಾರಿಸ್ ಅಭಿಪ್ರಾಯಪಟ್ಟರು.

ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, 'ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯರಾತ್ರಿ 12ರವರೆಗೆ ಈ ಬೀದಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಯೋಜನೆಯ ಅವಧಿಯಲ್ಲಿ ಚರ್ಚ್‍ಸ್ಟ್ರೀಟ್‍ನ ವಾಯುಮಾಲಿನ್ಯ ಎಷ್ಟು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಪರೀಕ್ಷಿಸಲಾಗುವುದು. ಇದು ಯಶಸ್ವಿಯಾದರೆ ನಗರದ ಬೇರೆ ಸ್ಥಳಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು' ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು