ಶನಿವಾರ, ಏಪ್ರಿಲ್ 1, 2023
23 °C
ಎಂಟೂ ವಲಯಗಳಲ್ಲಿ ಆದೇಶಕ್ಕೆ ಕಾಯುತ್ತಿರುವ ಬಿಬಿಎಂಪಿ ಅಧಿಕಾರಿಗಳು

‌ರಾಜಕಾಲುವೆ ಒತ್ತುವರಿ ತೆರವು: ತಹಶೀಲ್ದಾರ್‌ರಿಂದ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ತಹಶೀಲ್ದಾರ್‌ಗಳು ಆದೇಶ ನೀಡದಿರುವುದರಿಂದ ಹಿನ್ನಡೆ ಉಂಟಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದರು.

ರಾಜಕಾಲುವೆ ಒತ್ತುವರಿ ಪ್ರದೇಶಗಳ ಬಗ್ಗೆ ನೋಟಿಸ್‌ ಜಾರಿ ಮಾಡಿ, ತೆರವು ಆದೇಶ ನೀಡಲು ತಹಶೀಲ್ದಾರ್‌ ಅವರಿಗೆ ಫೆ.10 ಮತ್ತು 15ರ ಗಡುವು ನೀಡಲಾಗಿದೆ. ಆದೇಶ ಬಂದ ಕೂಡಲೇ ಎಲ್ಲ ಒತ್ತುವರಿಯನ್ನೂ ತೆರವು ಮಾಡಲಾಗುತ್ತದೆ ಎಂದರು.

ತಗ್ಗು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಮಳೆಯಿಂದ ಪ್ರವಾಹವನ್ನು ತಡೆಗಟ್ಟಬೇಕಾಗಿರುವ ಸ್ಥಳಗಳಲ್ಲಿ ಒತ್ತುವರಿ ಕಂಡುಬಂದಲ್ಲಿ ಭೂ ಮಾಪಕರು ಆದ್ಯತೆಯ ಮೇರೆಗೆ ಸರ್ವೆ ಕಾರ್ಯ ಕೈಗೊಳ್ಳಬೇಕು. ‌ಅಂತಹ ಪ್ರಕರಣಗಳಲ್ಲಿ ತಹಶೀಲ್ದಾರ್ ತುರ್ತಾಗಿ ಒತ್ತುವರಿ ತೆರವು ಆದೇಶವನ್ನು ಹೊರಡಿಸಬೇಕು ಎಂದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಪರಿಶೀಲನಾ ಸಭೆಯಲ್ಲಿ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಭೂ ಮಾಪನ ಕಾರ್ಯವನ್ನು ಶಿಸ್ತು ಹಾಗೂ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸ ಮಾಡದೆ ಸಂಬಂಧಪಟ್ಟ ಭೂ ಮಾಪಕರು ನಕ್ಷೆಯನ್ನು ಸಿದ್ಧಪಡಿಸಬೇಕು. ತಹಶೀಲ್ದಾರ್ ಆದೇಶ ಜಾರಿಮಾಡಿ ಆರ್.ಪಿ.ಎ.ಡಿ ಅಂಚೆಯ ಮುಖಾಂತರ ಸಹ ಸ್ವೀಕೃತಿಯನ್ನು ಪಡೆಯಲು ನಿರ್ದೇಶನ ನೀಡಿದರು.

ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗೀಲ್‌, ಬಿಬಿಎಂಪಿ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಪಿ.ಎನ್.ರವೀಂದ್ರ, ರೆಡ್ಡಿ ಶಂಕರ ಬಾಬು, ಡಾ. ಹರೀಶ್ ಕುಮಾರ್, ಪ್ರೀತಿ ಗೆಹ್ಲೋಟ್, ಉಪ ಆಯುಕ್ತರಾದ ರಾಹುಲ್ ಶರಣಪ್ಪ ಸಂಕನೂರ್‌ ಇದ್ದರು.‌

ಮಹದೇವಪುರದಲ್ಲಿ ಒತ್ತುವರಿ ಹೆಚ್ಚಳ: ಮಹದೇವಪುರ ವಲಯದಲ್ಲಿ ಹಾಲಿ 130 ಸರ್ವೆ ನಂಬರ್‌ಗಳಲ್ಲಿ ಒತ್ತುವರಿ ಇದೆ. ಹೊಸದಾಗಿ 159 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಗಳನ್ನು ಗುರುತಿಸಲಾಗಿದೆ. ತಹಶೀಲ್ದಾರ್‌ರವರು 131 ಸರ್ವೆ ನಂಬರ್‌ಗಳಿಗೆ ಒತ್ತುವರಿ ತೆರವು ಆದೇಶ ಹೊರಡಿಸಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ನೋಟೀಸ್ ಜಾರಿಮಾಡಿದ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಲು ಸೂಚಿಸಿದರು. ಉಳಿದ 146 ಸರ್ವೆ ನಂಬರ್‌ಗಳ ಒತ್ತುವರಿ ಆದೇಶಗಳನ್ನು ಸಂಬಂಧಪಟ್ಟ ತಹಶೀಲ್ದಾರ್ ರವರು ಆದ್ಯತೆಯ ಮೇರೆಗೆ ಆದೇಶವನ್ನು ಹೊರಡಿಸಬೇಕು. 62 ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. ಪಶ್ಚಿಮ ಹಾಗೂ ಆರ್‌.ಆರ್. ನಗರ ವಲಯದಲ್ಲಿ ಹೆಚ್ಚುವರಿಯಾಗಿ ತಲಾ ಒಂದು ಒತ್ತುವರಿ ಪ್ರಕರಣ ಗುರುತಿಸಲಾಗಿದೆ.

‌ಆರ್.ಆರ್. ನಗರ, ದಾಸರಹಳ್ಳಿಯಲ್ಲಿ ತೆರವಿಲ್ಲ
ಬಿಬಿಎಂಪಿ ಆರ್‌.ಆರ್‌. ನಗರ ಹಾಗೂ ದಾಸರಹಳ್ಳಿ ವಲಯದಲ್ಲಿ ಕ್ರಮವಾಗಿ 33 ಹಾಗೂ 124 ಒತ್ತುವರಿ ಪ್ರಕರಣಗಳಿದ್ದು, ಕಳೆದ ನವೆಂಬರ್‌ನಿಂದ ಯಾವುದೇ ತೆರವು ಕಾರ್ಯಾಚರಣೆ ನಡೆದಿಲ್ಲ.

ಬಿಡಿಎ ಒತ್ತುವರಿ ಸಕ್ರಮ!
‘ಬಿಬಿಎಂಪಿ ಪೂರ್ವ ವಲಯದಲ್ಲಿ 15 ಪ್ರಕರಣಗಳಲ್ಲಿ ಬಿಡಿಎ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಒತ್ತುವರಿ ಪ್ರದೇಶದಲ್ಲಿ ಬಿಡಿಎ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಇಲ್ಲಿ ಪ್ರವಾಹ ಉಂಟಾಗುತ್ತಿಲ್ಲ. ಹೀಗಾಗಿ, ಈ ಒತ್ತುವರಿ ಪ್ರಕರಣಗಳ ತೆರವು ಪ್ರಕ್ರಿಯೆಯನ್ನು ಕೈಬಿಡ‌ಲಾಗುತ್ತದೆ’ ಎಂದು ಬಿಬಿಎಂಪಿ ರಾಜಕಾಲುವೆ ಒತ್ತುವರಿಯ ವಿವರಗಳುಳ್ಳ ವರದಿಯಲ್ಲಿ ತಿಳಿಸಿದೆ.

ದಕ್ಷಿಣ ವಲಯದ ಕೋರಮಂಗಲ ಕಣಿವೆ ಪ್ರದೇಶದಲ್ಲಿ ಮೂರು ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದು, ಈ ಮೂರೂ ಪ್ರಕರಣಗಳಲ್ಲಿರುವ ಪ್ರದೇಶವನ್ನು ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ನೀಡಿದೆ. ಹೀಗಾಗಿ ಇದನ್ನು ತೆರವುಗೊಳಿಸಿಲ್ಲ.

ಯಲಹಂಕ ವಲಯದಲ್ಲಿ 12 ಪ್ರಕರಣಗಳಲ್ಲಿರುವ ಒತ್ತುವರಿಯನ್ನು ತೆರವುಗಳಿಸಲು ಯಲಹಂಕದ ವಲಯ ಆಯುಕ್ತರಿಗೆ ಡಿ.13ರಂದು ಸೂಚಿಸಲಾಗಿದೆ. ಆ ಕಾರ್ಯ ಇನ್ನೂ ಬಾಕಿ ಇದೆ.

ಬೊಮ್ಮನಹಳ್ಳಿ ವಲಯದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 56 ಪ್ರಕರಣಗಳಲ್ಲಿ ಭೂ ಕಬಳಿಕೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ. ಇನ್ನು ಒಂದು ಪ್ರಕರಣ ನ್ಯಾಯಾಲಯದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು