ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ

ಜಾಹೀರಾತು ನಿಯಮ ಮರುಪರಿಶೀಲನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸುವ ‘ಬಿಬಿಎಂಪಿ ಜಾಹೀರಾತು ನಿಯಮಗಳು–2019’ರ ಜಾರಿ ಕುರಿತು ಮರು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಯವರು ಈ ನಿರ್ದೇಶನ ನೀಡಿದ್ದಾರೆ. ತರಾತುರಿಯಲ್ಲಿ ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ನೀಡದಂತೆ ತಾಕೀತು ಮಾಡಿದ್ದು, ಹೊಸ ನಿಯಮಗಳ ಅನುಷ್ಠಾನದ ಕುರಿತು ಮರು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹೈಕೋರ್ಟ್‌ ಸೂಚನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಅಳವಡಿಕೆ ನಿಷೇಧಿಸಿ 2018ರಲ್ಲಿ ಆದೇಶ ಹೊರಡಿಸಲಾಗಿತ್ತು. ನಿರ್ಬಂಧ ತೆರವುಗೊಳಿಸಿ, ಹೋರ್ಡಿಂಗ್‌ ಅಳವಡಿಸಲು ಅವಕಾಶ ನೀಡುವಂತೆ ಜಾಹೀರಾತು ಏಜೆನ್ಸಿಗಳು ಪಾಲಿಕೆ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ತರಾತುರಿಯಲ್ಲಿ ‘ಬಿಬಿಎಂಪಿ ಜಾಹೀರಾತು ನಿಯಮ’ಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡುವ ಕಡತಕ್ಕೆ ಸಹಿ ಮಾಡಿದ್ದರು. ವರ್ಷಗಳಿಂದ ಬಾಕಿ ಇದ್ದ ಕಡತಕ್ಕೆ ಅಧಿಕಾರದಿಂದ ನಿರ್ಗಮಿಸುವ ಮುನ್ನ ಅನುಮೋದನೆ ನೀಡಿದ್ದ ಅವರು, ನಗರದಲ್ಲಿ ಮತ್ತೆ ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸಿದ್ದರು.

ಹೋರ್ಡಿಂಗ್‌ಗಳನ್ನು ಅಳವಡಿಸಲು ಇದ್ದ ನಿರ್ಬಂಧ ತೆರವಿನ ಹಿಂದಿನ ಲೆಕ್ಕಾಚಾರ, ಅದರಿಂದ ಆಗುವ ತೊಂದರೆ, ಜಾಹೀರಾತು ಏಜೆನ್ಸಿಗಳ ಒತ್ತಡ ಕುರಿತಂತೆ ‘ಪ್ರಜಾವಾಣಿ’ ಸರದಿ ವರದಿಗಳನ್ನು ಪ್ರಕಟಿಸಿತ್ತು. ಈ ಕುರಿತು ಮಂಗಳವಾರದ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಚರ್ಚೆ ನಡೆದಿದೆ. ಆ ಬಳಿಕ, ಜಾಹೀರಾತು ನಿಯಮ ಜಾರಿಗೆ ಸಂಬಂಧಿಸಿದಂತೆ ಮರುಪರುಶೀಲನೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

‘ಸಭೆಯಲ್ಲಿ ಪಾಲ್ಗೊಂಡಿದ್ದ ಏಳು ಸಚಿವರು ಜಾಹೀರಾತು ನಿಯಮಗಳ ಜಾರಿಯನ್ನು ವಿರೋಧಿಸಿದರು. ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿಯುವ ಮುನ್ನ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ತರಾತುರಿಯಲ್ಲಿ ಅನುಷ್ಠಾನಕ್ಕೆ ಅವಕಾಶ ನೀಡಕೂಡದು ಎಂದು ಸಚಿವರು ಆಗ್ರಹಿಸಿದರು’ ಎಂದು ಮೂಲಗಳು ತಿಳಿಸಿವೆ.

ಹೋರ್ಡಿಂಗ್‌ ಅಳವಡಿಸಲು ಅವಕಾಶ ಕಲ್ಪಿಸುವುದನ್ನು ಬಿಜೆಪಿ ಪಾಲಿಕೆಯ ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿತ್ತು. ಈಗ ಜಾಹೀರಾತು ಏಜೆನ್ಸಿಗಳ ಪರವಾಗಿ ತೀರ್ಮಾನ ಕೈಗೊಂಡರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಕೆಲವು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು