ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸುರಕ್ಷತೆಗೆ ಪೊಲೀಸ್ ಕಮಾಂಡ್ ಕೇಂದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

Published 24 ನವೆಂಬರ್ 2023, 15:27 IST
Last Updated 24 ನವೆಂಬರ್ 2023, 15:27 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್ ಕಮಾಂಡ್ ಕೇಂದ್ರವನ್ನು ಸುಸಜ್ಜಿತ ರೀತಿಯಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು ಜನರಿಗೆ ಸುರಕ್ಷತೆ ಒದಗಿಸುವ ಕೇಂದ್ರವಾಗಿ ಕೆಲಸ ಮಾಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಅಲಿ ಅಸ್ಕರ್ ರಸ್ತೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಬಹುಮಹಡಿ ಕಟ್ಟಡದ ಕಮಾಂಡ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರ್ಭಯಾ ನಿಧಿಯಡಿ ರೂಪಿಸಲಾದ ‘ಸುರಕ್ಷಿತ ನಗರ ಯೋಜನೆ’ಯಡಿ ಕಮಾಂಡ್ ಕೇಂದ್ರ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರ ಶೇ 40ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 60 ಅನುದಾನ ಒದಗಿಸಿದೆ’ ಎಂದರು.

‘ವಿಶೇಷವಾಗಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವುದು ಕೇಂದ್ರದ ಉದ್ದೇಶ. ಮಹಿಳೆಯರು ಅಪಾಯದಲ್ಲಿದ್ದ ಸಂದರ್ಭದಲ್ಲಿ ಕರೆ ಮಾಡಿದರೆ, ಹೊಯ್ಸಳ ಗಸ್ತು ವಾಹನ 7 ನಿಮಿಷದಲ್ಲಿ ಸ್ಥಳದಲ್ಲಿ ಇರಲಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಗೃಹ ಸಚಿವ ಜಿ. ಪರಮೇಶ್ವರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಮಿಷನರ್ ಬಿ. ದಯಾನಂದ್ ಇದ್ದರು.

ಸುರಕ್ಷಿತ ನಗರ ಯೋಜನೆಯಡಿ ಕ್ರಮಗಳು(ಮೊದಲ ಹಂತ)

  • 4100 ‘ನೇತ್ರಾ’ ಸಿ.ಸಿ.ಟಿ.ವಿ ಕ್ಯಾಮೆರಾ

  • 96 ವೀಕ್ಷಣೆ ಕೇಂದ್ರ * 30 ಐಲ್ಯಾಂಡ್

  • 8 ಡ್ರೋನ್ ಕ್ಯಾಮೆರಾ * 400 ಬಾಡಿವೋರ್ನ್‌ ಕ್ಯಾಮೆರಾ

  • ಮೊಬೈಲ್ ಮಿನಿ ಕಮಾಂಡ್ ಕೇಂದ್ರ

  • ಸುಸಜ್ಜಿತ ಕಮಾಂಡ್ ಕೇಂದ್ರ

ಕಮಾಂಡ್ ಕೇಂದ್ರದ ಕೆಲಸ

‘ಮಹಿಳೆಯರಿಗೆ ತುರ್ತು ಸಹಾಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಯೂ ಕಮಾಂಡ್ ಕೇಂದ್ರ ಕೆಲಸ ಮಾಡಲಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ‘ಕೇಂದ್ರದಲ್ಲಿ ನುರಿತ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಕರೆಗಳನ್ನು ಸ್ಥಳದ ಮಾಹಿತಿ ಸಮೇತ ದಾಖಲಿಸಿಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಹೊಯ್ಸಳ ಗಸ್ತು ವಾಹನಕ್ಕೆ ಸಂದೇಶ ರವಾನಿಸಿ ಸ್ಥಳಕ್ಕೆ ಕಳುಹಿಸಲಿದ್ದಾರೆ. ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳ ಮೇಲೆಯೂ ಕೇಂದ್ರದ ಸಿಬ್ಬಂದಿ ನಿಗಾ ವಹಿಸಲಿದ್ದಾರೆ’ ಎಂದು ಹೇಳಿದರು. ‘ಕ್ಯಾಮೆರಾ ಹಾಗೂ ಧ್ವನಿ ಗ್ರಹಿಕೆ ಸಲಕರಣೆ ಸಮೇತ ಸಾರ್ವಜನಿಕ ಸ್ಥಳಗಳಲ್ಲಿ ಐಲ್ಯಾಂಡ್ ನಿರ್ಮಿಸಲಾಗಿದೆ. ಇದರ ನಿರ್ವಹಣೆಯನ್ನು ಕಮಾಂಡೊ ಸಿಬ್ಬಂದಿ ಮಾಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT