ಶುಕ್ರವಾರ, ಜೂನ್ 25, 2021
29 °C

‘ನಾರಿ’ಗೂ ಪತಿಗೂ ಸಂಬಂಧವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ನಾರಿ ಫೌಂಡೇಷನ್‍ಗೂ ನನ್ನ ಪತಿ ಸಮಿವುದ್ದೀನ್‍ಗೂ ಯಾವುದೇ ಸಂಬಂಧವಿಲ್ಲ' ಎಂದು ಆರೋಪಿ ಸಮಿವುದ್ದೀನ್‍ ಪತ್ನಿ ಹಾಗೂ ನಾರಿ ಫೌಂಡೇಷನ್ ಅಧ್ಯಕ್ಷೆ ಫಾತಿಮಾ ತಬಸುಮ್ ತಿಳಿಸಿದರು.

ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆರೋಪಿ ಸಮಿವುದ್ದೀನ್‍ನನ್ನು ಬಂಧಿಸಿದ್ದರು. ಆರೋಪಿಯು ನಾರಿ ಫೌಂಡೇಷನ್ ಜೊತೆ ನಂಟು ಹೊಂದಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಫಾತಿಮಾ ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.

'ಸಮೀವುದ್ದೀನ್‍ನನ್ನು ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದೇನೆ. ಆದರೆ, ಪತಿಗೂ ನಾರಿ ಫೌಂಡೇಷನ್‍ಗೂ ಯಾವುದೇ ಸಂಬಂಧವಿಲ್ಲ. ಅವರು ಸಂಸ್ಥೆಯ ಸದಸ್ಯರೂ ಅಲ್ಲ' ಎಂದು ಸ್ಪಷ್ಟಪಡಿಸಿದರು. 'ಫೌಂಡೇಷನ್‍ಗೆ ವಿದೇಶದಿಂದ ಭಾರಿ ಪ್ರಮಾಣದಲ್ಲಿ ಹಣ ಹರಿದುಬಂದಿದ್ದು, ಮಂಗಳೂರು ಗಲಭೆ, ಎನ್‍ಆರ್‌ಸಿ, ಸಿಎಎ ವಿರುದ್ಧದ ಪ್ರತಿಭಟನೆಗಳಿಗೆ ಖರ್ಚು ಮಾಡಲಾಗಿದೆ' ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸಂಸ್ಥೆಗೆ ವಿದೇಶದಿಂದ ಯಾವುದೇ ಹಣ ಬಂದಿಲ್ಲ. ಯಾವ ಸಂಘಟನೆಯೊಂದಿಗೂ ಸಂಬಂಧವಿಲ್ಲ. ನಮ್ಮ ಕುಟುಂಬ ಹಾಗೂ ಸ್ನೇಹಿತರ ಹಣದಿಂದ ಸಂಸ್ಥೆ ನಡೆಯುತ್ತಿದೆ' ಎಂದು ತಿಳಿಸಿದರು.

ಪತಿ ನಾಪತ್ತೆ: 'ಸಿಸಿಬಿ ಅಧಿಕಾರಿ ಗಳೊಂದಿಗೆ ವಿಚಾರಣೆಗೆ ತೆರಳಿದ ಪತಿ, ಈವರೆಗೆ ಮನೆಗೆ ಮರಳಿಲ್ಲ. ಅವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಸಿಬಿಯಿಂದಲೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದೇನೆ. ಪತಿಯನ್ನು ಹುಡುಕಿಕೊಡುವಂತೆ ನಗರ ಪೊಲೀಸ್ ಕಮಿಷನರ್‌ ಅವರಿಗೂ ದೂರು ನೀಡಿದ್ದೇನೆ' ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ,'ಆರೋಪಿ ಸಮಿವು ದ್ದೀನ್‍ನನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ನಡೆಯುತ್ತಿದೆ’ ಎಂದರು.

ಅರುಣ್ 5 ದಿನ ಕಸ್ಟಡಿಗೆ
ಗಲಭೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದ ಅರುಣ್‍ನನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಪಾಲಿಕೆ ಸದಸ್ಯ ಆರ್. ಸಂಪತ್ ರಾಜ್ ಆಪ್ತನಾಗಿರುವ ಅರುಣ್‍ನನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಯನ್ನು 11ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಸಂಬಂಧ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲು ರಾಷ್ಟ್ರೀಯ ತನಿಖಾ ದಳದ (ಎನ್‍ಐಎ) ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಆರೋಪಿಗಳನ್ನು ಈ ಕಾಯ್ದೆಯಡಿ ಪ್ರಕರಣ ದಾಖಲಿಸುವ ಸಂಬಂಧ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಯುಎಪಿಎ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಿ, ತನಿಖೆ ಮುಂದುವರಿಸಲು ಕೋರ್ಟ್ ಅನುಮತಿ ನೀಡಿದೆ. 61 ಆರೋಪಿಗಳ ವಿರುದ್ಧ ಈ ಕಾಯ್ದೆಯಡಿ ಪ್ರಕರಣ ದಾಖಲಿಸಲು ಮುಂದಾಗಿದೆ.

ಎನ್‍ಐಎ ತನಿಖೆ ಪ್ರಸ್ತಾವ ಇಲ್ಲ: ‘ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಎನ್‍ಐಎಗೆ ನೀಡುವ ಪ್ರಸ್ತಾವ ಇಲ್ಲ. ತನಿಖೆ ಪ್ರಗತಿ ಹಂತದಲ್ಲಿದ್ದು, ತನಿಖಾಧಿಕಾರಿಗಳು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‌‘ಪ್ರಜಾವಾಣಿ’ಗೆ ತಿಳಿಸಿದರು.

ಸತ್ಯಶೋಧನೆಗೆ ಸಾಮಾಜಿಕ ಕಾರ್ಯಕರ್ತರ ಸಮಿತಿ
ಡಿ.ಜೆ. ಹಳ್ಳಿ ಘಟನೆ ಸಂಬಂಧ ಸತ್ಯಶೋಧನೆಗೆ ಸಾಮಾಜಿಕ ಕಾರ್ಯಕರ್ತರು, ವಕೀಲರು, ದಲಿತ ಸಂಘಟನೆಗಳ ಮುಖಂಡರು, ಪರಿಸರ ಹೋರಾಟಗಾರರ ತಂಡ ಮುಂದಾಗಿದೆ.

23 ಸದಸ್ಯರನ್ನು ಒಳಗೊಂಡ ‘ಬೆಂಗಳೂರು ನಾಗರಿಕ ಸಂಘಟನೆಗಳ ಸತ್ಯಶೋಧನಾ ಸಮಿತಿ’ ರಚನೆಯಾಗಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷೆ ನೀನಾ ನಾಯಕ್, ಪತ್ರಕರ್ತರಾದ ಸಿಂಥಿಯಾ ಸ್ಟೀಫನ್, ದಲಿತ ಸಂಘರ್ಷ ಸಮಿತಿಯ ವಿ. ನಾಗರಾಜ್, ಆರ್. ಮೋಹನ್‌ರಾಜ್, ವಕೀಲ ನಿಯಾಸ್ ಮೂಸ, ಪರಿಸರ ಹೋರಾಟಗಾರ ಲಿಯೊ ಸಲ್ಡಾನಾ, ಸ್ತ್ರೀ ಜಾಗೃತಿ ಸಮಿತಿಯ ಗೀತಾ ಮೆನನ್, ಪಿಯುಸಿಎಲ್ ರಾಜ್ಯ ಘಟಕದ ಅಧ್ಯಕ್ಷ ವೈ.ಜೆ. ರಾಜೇಂದ್ರ, ಮೂವ್‌ಮೆಂಟ್ ಫಾರ್ ಜಸ್ಟೀಸ್‌ನ ಇರ್ಷಾದ್ ಅಹಮದ್, ಗಮನ ಮಹಿಳಾ ಸಮೂಹದ ಮಧುಸೂಧನ್ ಸಮಿತಿಯಲ್ಲಿದ್ದಾರೆ.

‘ಸಂವಿಧಾನದ ಆಶಯಗಳನ್ನು ಜನರಿಗೆ ಖಾತರಿಪಡಿಸುವ ಮತ್ತು ಶಾಂತಿ ಸೌಹಾರ್ದವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಈ ಪ್ರಯತ್ನ ಆರಂಭಿಸಲಾಗಿದೆ. ಗಲಭೆ ಪ್ರದೇಶದ ಎಲ್ಲಾ ಸಮುದಾಯದ ನಿವಾಸಿಗಳು, ತೊಂದರೆಗೆ ಒಳಗಾದ ಕುಟುಂಬ ಸದಸ್ಯರು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಗಲಭೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಿದೆ. ಮಾಹಿತಿ ಹಂಚಿಕೊಳ್ಳಲು ಬಯಸುವವರು 8277288204 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಬಹುದು. fftblore@protonmail.com ಗೆ ಇ–ಮೇಲ್‌ ಕಳುಹಿಸಬಹುದು’ ಎಂದು ಸಮಿತಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು