ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಭಕ್ತಿ ಚಳವಳಿಯ ತೌಲನಿಕ ಅಧ್ಯಯನ ಅಗತ್ಯ: ತಜ್ಞರ ಅಭಿಪ್ರಾಯ

ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಅಭಿಪ್ರಾಯ ಸಂಗ್ರಹ
Published 31 ಆಗಸ್ಟ್ 2024, 16:01 IST
Last Updated 31 ಆಗಸ್ಟ್ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಭಾಷಾ ಚಳವಳಿಯ ವಿವಿಧ ಹಂತಗಳೊಂದಿಗೆ ಕರ್ನಾಟಕ ಭಕ್ತಿ ಚಳವಳಿಯನ್ನು ಹೋಲಿಸಿ, ತೌಲನಿಕ ಅಧ್ಯಯನ ನಡೆಸಬೇಕು’ ಎಂಬುದು ಸೇರಿದಂತೆ ವಿವಿಧ ಅಭಿಪ್ರಾಯಗಳು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಯಿತು. 

ಕೇಂದ್ರವು ‘ಕನಕದಾಸ ಮತ್ತು ತತ್ವಪದ ಅಧ್ಯಯನ–ಮುನ್ನೋಟ’ ಎಂಬ ಶೀರ್ಷಿಕೆಯಡಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಸಂಶೋಧನೆ ಮತ್ತು ಅಧ್ಯಯನದ ರೂಪುರೇಷೆಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿತು.

ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಮನು ಬಳಿಗಾರ್, ಎಲ್.ಎನ್. ಮುಕುಂದರಾಜ್, ರಮೇಶ್, ಎಸ್.ಆರ್. ವಿಜಯಶಂಕರ್, ಆರ್.ಜಿ. ಹಳ್ಳಿ ನಾಗರಾಜ್, ಎಚ್.ಎಲ್. ಪುಷ್ಟ, ಎ.ಆರ್. ಗೋವಿಂದಸ್ವಾಮಿ, ಕೆ.ಆರ್. ಸಂಧ್ಯಾರೆಡ್ಡಿ, ಜಾಣಗೆರೆ ವೆಂಟಕರಾಮಯ್ಯ, ಕೆ.ವೈ. ನಾರಾಯಣಸ್ವಾಮಿ, ಬಿ.ಎಂ. ಹನೀಫ್, ಬಂಜಗೆರೆ ಜಯಪ್ರಕಾಶ್, ಡಾ. ವಸುಂಧರಾ ಭೂಪತಿ, ಲಕ್ಷ್ಮಣ ಕೊಡಸೆ ಸೇರಿ 50ಕ್ಕೂ ಅಧಿಕ ಮಂದಿ ವಿಷಯ ತಜ್ಞರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಕರ್ನಾಟಕದಲ್ಲಿರುವ ಸಹ ಭಾಷೆಗಳಲ್ಲಿನ ತತ್ವಪದಗಳು, ಭಜನೆಗಳು ಹಾಗೂ ಅಲಕ್ಷ್ಯಕ್ಕೊಳಗಾದ ಕೀರ್ತನಕಾರರ ಪದಗಳನ್ನು ಸಂಗ್ರಹಿಸಿ, ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಬೇಕು. ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಪರಭಾಷಿಕರಿಗೆ ತತ್ವಪದಗಳನ್ನು, ಕೀರ್ತನೆಗಳನ್ನು ತಲುಪಿಸಬೇಕಾದರೆ ಅದಕ್ಕೆ ಸಂಗೀತದ ಸಹಚರ್ಯದ ಜತೆಗೆ ನಾಟಕ, ಬಯಲಾಟ, ತಾಳಮದ್ದಲೆ ಮುಂತಾದ ಕಲಾ ಪ್ರಕಾರಗಳನ್ನು ಬಳಸಿಕೊಳ್ಳಬೇಕು’ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಅಧ್ಯಯನ ಕೇಂದ್ರವು ರೂಪಿಸಿರುವ ಕನಕದಾಸ ಸಾಹಿತ್ಯವೂ ಸೇರಿದಂತೆ ತತ್ವಪದ ಸಾಹಿತ್ಯ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿಯ ವಿಷಯವನ್ನು ಒಳಗೊಂಡು ಸಾಹಿತ್ಯ ಸಂಗ್ರಹ, ಸಮೀಕ್ಷೆ, ಅಧ್ಯಯನ, ಪ್ರಕಟಣೆ, ಪ್ರದರ್ಶನ ಮತ್ತು ಪ್ರಸಾರ ಕಾರ್ಯಗಳನ್ನು ನಡೆಸಬೇಕು’ ಎಂದು ತಿಳಿಸಿದರು. 

ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ‘ಸ್ಥಳೀಯ ಸಾಂಸ್ಕೃತಿಕ ಹಿರಿಮೆಯನ್ನು ಪರಿಚಯಿಸುವ ನೆಲೆನಿಷ್ಠ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು, ಕಾರ್ಯಕ್ರಮಗಳನ್ನು ನಡೆಸಲಾಗುವುದು. ಆ ಮೂಲಕ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ, ಬೆಳೆಸುವುದರ ಕಡೆಗೆ ಗಮನ ಹರಿಸಲಾಗುವುದು’ ಎಂದು ಹೇಳಿದರು. 

ಸದಸ್ಯ ಸಂಚಾಲಕ ಎಚ್. ದಂಡಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT