ಮಂಗಳವಾರ, ಅಕ್ಟೋಬರ್ 26, 2021
23 °C

‘ಮೆಟ್ರೊ ಸಂಪೂರ್ಣ ಗಣಕೀಕರಣವಾದರೆ ಅತ್ಯುತ್ತಮ ಸೇವೆ ಸಾಧ್ಯ’: ಎನ್.ಆರ್. ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಯಾಣಿಕರ ಅಗತ್ಯಗಳನ್ನು ತ್ವರಿತಗತಿಯಲ್ಲಿ ಪೂರೈಸಲು ಹಾಗೂ ಅತ್ಯುತ್ತಮ ರೀತಿಯ ಮೆಟ್ರೊ ರೈಲು ವ್ಯವಸ್ಥೆ ಲಭ್ಯವಾಗಬೇಕಾದರೆ ಎಲ್ಲ ಹಂತಗಳಲ್ಲೂ ಗಣಕೀಕರಣವಾಗಬೇಕು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಹೇಳಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ (ಎಐಸಿಟಿಇ) ಹಾಗೂ ತರಬೇತಿ ಮತ್ತು ಕಲಿಕಾ ಅಕಾಡೆಮಿ (ಅಟಲ್) ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ‘ಭಾರತದ ಮಹಾನಗರಗಳಿಗೆ ಚುರುಕಾದ ಮೆಟ್ರೊ ರೈಲು ವ್ಯವಸ್ಥೆ’ ಕುರಿತಾದ ಪ್ರಾಧ್ಯಾಪಕರ ಕೌಶಲ ಅಭಿವೃದ್ಧಿ ಕುರಿತ ಐದು-ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಪೂರ್ಣ ಗಣಕೀಕರಣ ವ್ಯವಸ್ಥೆಯಿಂದ ಮಹಾ ನಗರಗಳಲ್ಲಿನ ಜನರಿಗೆ ಅತ್ಯುತ್ತಮ ಸೇವೆ ಹಾಗೂ ಸುರಕ್ಷತೆಯ ಪ್ರಯಾಣ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸಿಂಗಪುರದ ಔರೆಕಾನ್ ಕನ್ಸ್‌ಲ್ಟಂಟ್ಸ್‌ನ ಮುಖ್ಯ ಸ್ಟ್ರಕ್ಚರಲ್ ಎಂಜಿನಿಯರ್ ಡಾ. ಸುನಿಲ್ ಮಾತನಾಡಿ, ‘ಗಣಕೀಕೃತ ಸಂಚಾರ ವ್ಯವಸ್ಥೆಯಿಂದ ಪ್ರಯಾಣಿಕರ ಅತ್ಯಮೂಲ್ಯ ಸಮಯ ವ್ಯರ್ಥವಾಗುವುದನ್ನು ನಿಯಂತ್ರಿಸಬಹುದು’ ಎಂದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅವರು, ‘ಅತ್ಯುತ್ತಮ ಕೇಂದ್ರೀಕೃತ ಸಾರಿಗೆ ನಿಯಂತ್ರಣ ವ್ಯವಸ್ಥೆಯಿಂದ ಅಪರಾಧಗಳ ಮೇಲೂ ಹದ್ದಿನಕಣ್ಣು ಇರಿಸಲು ಸಾಧ್ಯವಾಗುತ್ತದೆ’ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಡಿ.ಆರ್. ರವಿ, ರಾಜ್ಯ ಸರ್ಕಾರದ ಸಂಚಾರ ಹಾಗೂ ಸಾರಿಗೆ ಸಲಹೆಗಾರ ಪ್ರೊ. ಎಂ.ಎನ್. ಶ್ರೀಹರಿ, ರೈಲು ಮತ್ತು ಮೆಟ್ರೊ ನಿರ್ವಹಣೆ ಸಲಹೆಗಾರ ಹರೀಶ್ ಡಿಂಗ್ರಾ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಗಣೇಶ್ ಇದ್ದರು.

ದೇಶದಾದ್ಯಂತ ಮಹಾನಗರಗಳ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು