ಭಾನುವಾರ, ಜನವರಿ 19, 2020
28 °C
ಪ್ರತಿಭಟನೆ ಸಹಿಸದವರಿಂದ ಹೇಡಿತನದ ಕೃತ್ಯ ಎಂದ ಪ್ರತಿಭಟನಾಕಾರರು

ಬೆಂಗಳೂರು: ಜೆಎನ್‌ಯು ದಾಳಿ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನವದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಂಗಣವನ್ನು ಪ್ರವೇಶಿಸಿದ ಮುಸುಕುಧಾರಿಗಳ ಗುಂಪು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ ಘಟನೆಗೆ ನಗರದಲ್ಲೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಕೃತ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ವಿವಿಧೆಡೆ ಸೋಮವಾರ ಪ್ರತಿಭಟನೆಗಳು ನಡೆದವು.

ಎಸ್‌ಎಫ್‌ಐ, ಎಐಎಸ್‌ಎಫ್‌, ಎಐಡಿಎಸ್‌ಒ, ಕೆವಿಎಸ್‌, ಎಐಎಸ್‌ಎ ಸಂಘಟನೆಗಳ ಕಾರ್ಯಕರ್ತರು ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್, ಪ್ರಾಧ್ಯಾಪಕಿ ಸುಚರಿತಾ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಗೂಂಡಾ ಪಡೆ ಹಲ್ಲೆ ನಡೆಸಿದೆ. ಶುಲ್ಕ ಹೆಚ್ಚಳ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಭಾರಿ ಪ್ರತಿಭಟನೆಯನ್ನು ಸಹಿಸದ ಬಿಜೆಪಿ ಹಾಗೂ ಆರೆಸ್ಸೆಸ್ ಈ  ದಾಳಿಗೆ ಕುಮ್ಮಕ್ಕು ನೀಡಿವೆ. ವಿಶ್ವವಿದ್ಯಾಲಯದ ಎಬಿವಿಪಿ ಕಾರ್ಯಕರ್ತರೇ ಈ ಕೃತ್ಯ ನಡೆಸಿದ್ದಾರೆ. ಈ ಸಂಬಂಧ ಹಲವು ಪುರಾವೆಗಳಿವೆ’ ಎಂದು ‍ಪ‍್ರತಿಭಟನಕಾರರು ಹೇಳಿದರು.

‘ಗೂಂಡಾ ಪಡೆ ಮಾರಕಾಸ್ತ್ರಗಳ ಸಮೇತ ವಿಶ್ವವಿದ್ಯಾಲಯದ ಪ್ರಾಂಗಣದೊಳಗೆ ಪ್ರವೇಶಿಸಿದೆ. ವಿಶ್ವವಿದ್ಯಾಲಯದ ಹೊರಗಡೆಯಿದ್ದ ಪೊಲೀಸರು ಇದನ್ನು ನೋಡಿಯೂ, ನೋಡದಂತೆ ಇದ್ದರು. ಎಲ್ಲವನ್ನೂ ಪೂರ್ವನಿಯೋಜಿತವಾಗಿ ನಡೆಸಿದ್ದು, ಕ್ಯಾಂಪಸ್ ಪ್ರವೇಶಿಸಿದ ಕೂಡಲೇ ಹಾಸ್ಟೆಲ್‍ಗಳಿಗೆ ನುಗ್ಗಿ ಮನಬಂದಂತೆ ಹೊಡೆದಿದ್ದಾರೆ. ಇದು ಅತ್ಯಂತ ಅಮಾನವೀಯ ಕೃತ್ಯ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. 


ಪುರಭವನದ ಬಳಿ ಪ್ರತಿಭಟನೆ

ಎಸ್‌ಎಫ್‌ಐ ರಾಜ್ಯಘಟಕದ ಅಧ್ಯಕ್ಷ ವಿ.ಅಂಬರೀಷ್, ‘ಜೆಎನ್‌ಯುನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗುತ್ತಿದೆ. ಆದರೂ, ಕೇಂದ್ರ ಸರ್ಕಾರ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸುತ್ತಿದೆ. ಎರಡು ವರ್ಷಗಳ ಹಿಂದೆ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಪಟ್ಟ ಕಟ್ಟುವ ವಿಫಲ ಯತ್ನ ನಡೆದಿತ್ತು. ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎಬಿವಿಪಿ ಸೋತಿತ್ತು. ಹೀಗಾಗಿ, ಈಗ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ’ ಎಂದು ದೂರಿದರು.

‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ದೇಶದ ಜನರ ಮೇಲೆ ಬಲವಂತವಾಗಿ ತನ್ನ ನೀತಿಗಳನ್ನು ಹೇರಿಕೆ ಮಾಡುತ್ತಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದು ಬೀದಿಗೆ ಇಳಿದಿದ್ದಾರೆ. ಇದನ್ನು ಸಹಿಸದೇ ವಿದ್ಯಾರ್ಥಿಗಳ ಮೇಲೆ ದಾಳಿಗೆ ಮುಂದಾಗಿದೆ. ಮೊನ್ನೆ ಜಾಮಿಯಾ ವಿಶ್ವವಿದ್ಯಾಲಯ, ಇಂದು ಜೆಎನ್‍ಯು, ನಾಳೆ ಎಲ್ಲಿ ಬೇಕಾದರೂ ಇಂತಹ ಕೃತ್ಯ ಮರುಕಳಿಸಬಹುದು. ಇದು ಅತ್ಯಂತ ಹೇಯ ಕೆಲಸ’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. 

ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಲೇಖಕ ಯೋಗೇಶ್ ಮಾಸ್ಟರ್, ಚಿಂತಕ ಶ್ರೀಪಾದ ಭಟ್, ಲೇಖಕಿ ಡಾ.ವಿಜಯಮ್ಮ, ಮಹಿಳಾ ಸಂಘಟನೆಯ ಜ್ಯೋತಿ, ಗೌರಮ್ಮ, ಎಸ್‌ಎಫ್‌ಐನ ಗುರುರಾಜ್ ದೇಸಾಯಿ, ಕೆವಿಎಸ್‍ನ ಸರೋವರ ಬೆಂಕಿಕೆರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ಕೃತ್ಯವನ್ನು ಖಂಡಿಸಿ ನಗರದ ಮೌರ್ಯ ವೃತ್ತದ ಬಳಿ ಎನ್‌ಎಸ್‌ಯುಐ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ದಾಳಿ ಫ್ಯಾಸಿಸಮ್‍ನ ಪ್ರತೀಕ: ಎಸ್. ರಘುನಂದನ

‘ಫ್ಯಾಸಿಸ್ಟರು ಮೊತ್ತಮೊದಲು ದಾಳಿ ನಡೆಸುವುದು ವಿಶ್ವವಿದ್ಯಾಲಯಗಳ ಮೇಲೆ. ಹಾಗಾಗಿಯೇ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಫ್ಯಾಸಿಸ್ಟ್‌ ಗುಂಪು ದಾಳಿ ಮಾಡಿದೆ’ ಎಂದು ಕವಿ, ರಂಗನಿರ್ದೇಶಕ ಎಸ್. ರಘುನಂದನ ಹೇಳಿದ್ದಾರೆ. 

‘ಜೆಎನ್‌ಯು ಮೇಲೆ ದಾಳಿಯಾದ ದಿನವನ್ನು (ಜ.5) ಭಾರತಕ್ಕೆ ಫ್ಯಾಸಿಸಮ್ ಅನ್ನುವುದು ಪ್ರವೇಶಿಸಿದ ದಿನ ಎಂದು ಅಧಿಕೃತವಾಗಿ ಘೋಷಿಸಬಹುದು’ ಎಂದೂ ಅವರು ಟೀಕಿಸಿದ್ದಾರೆ.

 ‘1920 ಮತ್ತು 30ರ ದಶಕದ ಜರ್ಮನಿಯಲ್ಲಿ ಹಿಟ್ಲರ್‌ನ ನಾಜಿ ಕೇಡಿಗರ ಪಡೆಗಳು, ಮತ್ತು 1971ರಲ್ಲಿ ಆಗಿನ ಪೂರ್ವ ಪಾಕಿಸ್ತಾನದ ರಾಜಧಾನಿಯಾಗಿದ್ದ  ಢಾಕಾದಲ್ಲಿ ಯಾಹ್ಯಾ ಖಾನ್‌ನ ಸೇನಾಪಡೆಗಳು ಏನನ್ನು ಮಾಡಿದವೋ, ಅಂಥದನ್ನು ನೆನಪಿಸುವಂಥದು ಈವತ್ತು ಜೆಎನ್‍ಯುವಿನಲ್ಲಿ ಆಗಿದೆ. 1971ರಲ್ಲಿ ಖಾನ್‌ನ ಸೇನೆಯು ಢಾಕಾ ವಿಶ್ವವಿದ್ಯಾಲಯದ ನೂರಾರು ಜನ ಪ್ರೊಫೆಸರ್‌ಗಳು ಹಾಗೂ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಂದುಹಾಕಿತು. ಹೀಗೆ, ಫ್ಯಾಸಿಸ್ಟ್‌ ಶಕ್ತಿಗಳು ಯಾವಾಗಲೂ ಮೊದಲು ವಿಶ್ವವಿದ್ಯಾಲಯಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತವೆ’ ಎಂದು ಅವರು ಹೇಳಿದ್ದಾರೆ.

ಐಐಎಸ್‌ಸಿಯಲ್ಲಿಯೂ ಪ್ರತಿಭಟನೆ 

ಜೆಎನ್‌ಯು ವಿದ್ಯಾರ್ಥಿಗಳು–ಅಧ್ಯಾಪಕರ ಮೇಲೆ ನಡೆದ ಹಲ್ಲೆ ಖಂಡಿಸಿ, ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿಯೂ (ಐಐಎಸ್‌ಸಿ) ವಿದ್ಯಾರ್ಥಿಗಳು ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾ ಧರಣಿ ನಡೆಸಿದ ವಿದ್ಯಾರ್ಥಿಗಳು ಜೆಎನ್‌ಯು ದಾಳಿ ನಡೆಸಿದವರ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆಯು, ಸಂವಿಧಾನ ವಿರೋಧಿ ಎಂದೂ ದೂರಿದರು. 

***

ಕೇಂದ್ರ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂತಹ ಹೇಯ ಕೃತ್ಯಕ್ಕೆ ಕೈ ಹಾಕಿದೆ. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಬೇಕಾದ ಸರ್ಕಾರವೇ ಅವರನ್ನು ಪೋಷಿಸುತ್ತಿದೆ.

–ಯೋಗೇಶ್ ಮಾಸ್ಟರ್, ಲೇಖಕ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು