ಮಂಗಳವಾರ, ಮಾರ್ಚ್ 2, 2021
19 °C
ಹೆಚ್ಚುವರಿ ಶುಲ್ಕ ಅಧಿಸೂಚನೆಯಲ್ಲಿ ಸ್ಪಷ್ಟತೆ ಇಲ್ಲ l ಗೊಂದಲ ನಿವಾರಿಸದ ಸರ್ಕಾರ l ನಿರ್ಮಾಣ ಚಟುವಟಿಕೆಯ ಮೇಲೆ ಕರಿಛಾಯೆ

ಕ‌‌ಟ್ಟಡ ನಕ್ಷೆ ಶುಲ್ಕ ಹೆಚ್ಚಳ– ಗೊಂದಲದ ಗೂಡು

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಅಭಿವೃದ್ಧಿಯಲ್ಲಿ ಕಟ್ಟಡ ನಿರ್ಮಾಣ ವಲಯದ ಪಾತ್ರವೂ ಮಹತ್ತರವಾದುದು. ಅದು ವಸತಿ ಕಟ್ಟಡಗಳಿರಲಿ, ವಾಣಿಜ್ಯ ಕಟ್ಟಡಗಳೇ ಇರಲಿ ನಗರ ಅಭಿವೃದ್ಧಿಗೊಂಡಂತೆ ಕಟ್ಟಡಗಳ ಬೇಡಿಕೆಯೂ ಹೆಚ್ಚುತ್ತಲೇ ಸಾಗುತ್ತದೆ. ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನು, ನೀತಿ ನಿಯಮಗಳನ್ನು ರೂಪಿಸಿ ಜಾರಿಗೆ ತರುವ ಮೂಲಕ ಕಟ್ಟಡ ನಿರ್ಮಾಣವು ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಆದರೆ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಸಲುವಾಗಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯೊಂದು ಕಟ್ಟಡ ನಿರ್ಮಿಸಲು ಮುಂದಾದವರನ್ನು ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಗೊಂದಲಕ್ಕೆ ದೂಡಿದೆ.

ಕಟ್ಟಡ ಶುಲ್ಕ ಮಂಜೂರಾತಿ ವೇಳೆ ಹೆಚ್ಚುವರಿ ಶುಲ್ಕ ಕಟ್ಟಿಸಿಕೊಳ್ಳುವ ಕುರಿತು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಉಂಟಾಗಿರುವ ಕೆಲವು ಗೊಂದಲಗಳಿಗೆ ಸ್ಪಷ್ಟನೆ ನೀಡುವಂತೆ ಕೋರಿ ಬಿಬಿಎಂಪಿಯು ಸರ್ಕಾರಕ್ಕೆ ಪತ್ರ ಬರೆದಿದೆ. ಇದಾಗಿ ಮೂರು ತಿಂಗಳು ಕಳೆದರೂ ಸರ್ಕಾರ ಗೊಂದಲ ನಿವಾರಿಸುವ ಗೋಜಿಗೇ ಹೋಗಿಲ್ಲ.

ಪಾಲಿಕೆಯ ನಗರ ಯೋಜನೆ ವಿಭಾಗವು ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ (ಸಿ.ಸಿ), ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡುವಾಗ ಸರ್ಕಾರದ 2015ರ ಸೆ. 4ರ ಸುತ್ತೋಲೆಯನ್ವಯ ಶುಲ್ಕ ಪಡೆಯುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಸೂಚನೆ ಪ್ರಕಾರ 1961ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಪರಿಚ್ಛೇದ 18 ಮತ್ತು 18 ಎ ಅನ್ವಯ ರೂಪಿಸಿರುವ ‘ಕರ್ನಾಟಕ ಯೋಜನಾ ಪ್ರಾಧಿಕಾರ ನಿಮಯ 2019’ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ನಿಯಮ  37–ಎ (1) (ಎ) ಮತ್ತು (ಬಿ) ತಿದ್ದುಪಡಿ ಪ್ರಕಾರ ನಿವೇಶನಕ್ಕೆ ಮತ್ತು ಕಟ್ಟಡಕ್ಕೆ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಅಭಿವೃದ್ಧಿ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಹೆಚ್ಚುವರಿ ಶುಲ್ಕ ವಿಧಿಸಲು ನಿಯಮ 37– ಸಿ ರೂಪಿಸಲಾಗಿದ್ದು, ಇದರಡಿ  ಸ್ಥಳೀಯ ಯೋಜನಾ ಪ್ರಾಧಿಕಾರಗಳು ಅಭಿವೃದ್ಧಿ ಶುಲ್ಕದ ಜೊತೆ ನಿವೇಶನದ ಅಥವಾ ಜಮೀನಿನ ಮಾರುಕಟ್ಟೆ ಮೌಲ್ಯದ ಮೇಲೆ ಶೇ 0. 2ರಷ್ಟು ಮೇಲ್ತೆರಿಗೆ (ಸರ್ಚಾರ್ಜ್‌) ಕೂಡಾ ಸಂಗ್ರಹಿಸಬೇಕಿದೆ. ಈ ಕುರಿತು ಸರ್ಕಾರ 2020ರ ಫೆ 25ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕೋವಿಡ್‌ ಲಾಕ್‌ಡೌನ್‌ ಜಾರಿಯಾಯಿತು. ಲಾಕ್‌ಡೌನ್‌ ವೇಳೆ ನಿರ್ಮಾಣ ಚಟುವಟಿಕೆಗಳು ಅಷ್ಟಾಗಿ ನಡೆಯುತ್ತಿರಲಿಲ್ಲ. ಆಗ ಯಾರೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ನಿರ್ಮಾಣ ಚಟುವಟಿಕೆ ಮತ್ತೆ ಚುರುಕು ಪಡೆದ ಬಳಿಕ ಈ ಅಧಿಸೂಚನೆಯಿಂದ ‌ಉದ್ಭವಿಸಿರುವ ಗೊಂದಲಗಳು ಒಂದೊಂದಾಗಿ ಬೆಳಕಿಗೆ ಬರಲಾರಂಭಿಸಿದವು.

ಈ ಅಧಿಸೂಚನೆಯ ಪ್ರಕಾರ ಅಭಿವೃದ್ಧಿ ಶುಲ್ಕವನ್ನು ಕೆಟಿಸಿಪಿ ಕಾಯ್ದೆಯ ನಿಯಮ 14 ಎ ಮತ್ತು 17ರ ಅನ್ವಯ ಅಭಿವೃದ್ಧಿಗೆ ಅನುಮತಿ ನೀಡುವಾಗ ವಿಧಿಸಬೇಕು. ಆದರೆ, ಪಾಲಿಕೆಯಿಂದ ಖಾತಾ ನೋಂದಣಿ ಆಗಿದ್ದರೆ ಅಂತಹ ಪ್ರಕರಣಗಳನ್ನು ನಿವೇಶನ ಎಂದೇ ಪರಿಗಣಿಸಿ ಕೆಟಿಸಿಪಿ ಕಾಯ್ದೆಯ ಸೆಕ್ಷನ್‌ 15ರಂತೆ ಅಭಿವೃದ್ಧಿಗೆ ಅನುಮತಿ ನೀಡಲಾಗುತ್ತಿದೆ. ಇನ್ನು ಮುಂದೆ ಹೊಸ ಅಧಿಸೂಚನೆಯ ಉಲ್ಲೇಖ (2)ರಲ್ಲಿ ಹೇಳಿದಂತೆ ನಿಯಮ 37– ಎ (1) (ಎ) ಪ್ರಕಾರ ನಿವೇಶನದ ಅಭಿವೃದ್ಧಿ ಶುಲ್ಕ ವಿಧಿಸಬೇಕಾಗುತ್ತದೆ. ಇದು ಅಧಿಕಾರಿಗಳಲ್ಲಿ ಗೊಂದಲ ಹುಟ್ಟುಹಾಕಿದೆ.

ನಿಯಮ 37– ಎ (1) (ಎ) ಪ್ರಕಾರ ಕೃಷಿಯೇತರ ಜಮೀನಿನ ಮಾರುಕಟ್ಟೆಯ ಮೌಲ್ಯವನ್ನು ಪ್ರತಿ ಚದರ ಮೀಟರ್‌ಗೆ ಅನುಗುಣವಾಗಿ ಲೆಕ್ಕ ಹಾಕುವಂತೆ  ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅನುಮತಿ ಕೋರುವ ಸ್ವತ್ತುಗಳಿಗೆ ಈಗಾಗಲೇ ಖಾತಾ ನೋಂದಣಿ ಆಗಿದ್ದರೆ, ಅದನ್ನು ಕೂಡಾ ನಿವೇಶನ ಎಂದೇ ಪರಿಗಣಿಸಿ, ಅದರ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳ ಆಧಾರದಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಈ ಕ್ರಮವನ್ನೇ ಮುಂದುವರಿಸಬೇಕೇ ಅಥವಾ ಹೊಸ ವಿಧಾನ ಅನುಸರಿಸಬೇಕಾಗುತ್ತದೆಯೇ ಎಂಬ ಗೊಂದಲವೂ ಅಧಿಕಾರಿಗಳನ್ನು ಕಾಡುತ್ತಿದೆ.  

ಅಧಿಸೂಚನೆಯಿಂದ ಉದ್ಭವಿಸಿರುವ ಇಂತಹ ಕೆಲವು ಗೊಂದಗಳನ್ನು ಬಗೆಹರಿಸುವಂತೆ ಕೋರಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು 2020ರ ಅ.29ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು.

 ‘ಕೆಲವೊಂದು ಗೊಂದಲಗಳನ್ನು ನೀಗಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದೆವು. ಅದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರ ಇನ್ನೂ ಸ್ಪಷ್ಟ ನೀಡದ ಕಾರಣ, ಕಟ್ಟಡ ನಿರ್ಮಾಣಕ್ಕೆ ಅಥವಾ ಅಭಿವೃದ್ಧಿಗೆ ಮುಂದಾಗಿರುವವರಲ್ಲಿ ಹಾಗೂ ಅಧಿಕಾರಿಗಳಲ್ಲಿ ಗೊಂದಲ ಮುಂದುವರಿದಿದೆ. ನಿರ್ಮಾಣ ಚಟುವಟಿಕೆಯ ಮೇಲೂ ಇದರ ಕರಿಛಾಯೆ ಬಿದ್ದಿದೆ.

ಎದುರಾಗಿರುವ ಗೊಂದಲಗಳು

l ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆದ ವಸತಿ/ವಸತಿಯೇತರ ನಿವೇಶನಗಳಿಗೂ ಕರ್ನಾಟಕ ಯೋಜನಾ ಪ್ರಾಧಿಕಾರ (ತಿದ್ದುಪಡಿ) ನಿಯಮ 37–ಎ (1) (ಎ) ಮತ್ತು 37 ಸಿ ಅನ್ವಯಿಸಬೇಕೇ?

l ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಭೂ–ಬದಲಾವಣೆ ಆದೇಶ ಆದ ನಿವೇಶನಗಳ ಅಭಿವೃದ್ಧಿಗೆ ಬಿಬಿಎಂಪಿ ಅನುಮತಿ ನೀಡುವಾಗ ಯಾವ ನಿಯಮ ಅನ್ವಯಿಸಬೇಕು?

l ಬಿಡಿಎ ಅನುಮೋದನೆ ನೀಡಿರುವ ವಸತಿ/ ವಸತಿಯೇತರ ಅಭಿವೃದ್ಧಿ ನಕ್ಷೆಯನ್ವಯ ಬಿಬಿಎಂಪಿಯು ಅಭಿವೃದ್ಧಿಗೆ ಅನುಮತಿ ನೀಡುವಾಗ ಯಾವ ನಿಯಮ ಅನ್ವಯಿಸಬೇಕು?

l ಬಿಬಿಎಂಪಿ ವ್ಯಾಪ್ತಿಯ ಭಾರಿ ನಿವೇಶನದಲ್ಲಿ ಹಲವಾರು ಕಟ್ಟಡಗಳಿದ್ದು ಭಾಗಶಃ ಕಟ್ಟಡವನ್ನು ವಿಸ್ತರಿಸಲು ಅನುಮತಿ ಕೋರಿದರೆ ಯಾವ ನಿಯಮ ಅನ್ವಯಿಸಬೇಕು?

l ಪಾಲಿಕೆಯ ಕೇಂದ್ರ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ಇರುವ ಕಟ್ಟಡದಲ್ಲಿ ಭಾಗಶಃ ವಿಸ್ತರಣೆಗೂ ನಿಯಮ 37–ಎ (1) (ಎ) ಮತ್ತು 37 ಸಿ ಅನ್ವಯಿಸಬೇಕೇ?

l ಪಾಲಿಕೆಯ ಕೇಂದ್ರ ಪ್ರದೇಶದ ಅನುಮೋದಿತ ವಸತಿ/ ವಸತಿಯೇತರ ವಿನ್ಯಾಸದ ಕಟ್ಟಡಕ್ಕೆ ಪಾಲಿಕೆಯಲ್ಲಿ ಖಾತಾ ನೋಂದಾಯಿಸಿದ್ದರೆ ಹೊಸ ನಿಯಮ ಅನ್ವಯಿಸಬೇಕೇ ಬೇಡವೇ?

l ಅಧಿಸೂಚನೆ ಹೊರಡಿಸುವುದಕ್ಕೆ ಮುನ್ನವೇ ನಕ್ಷೆ ಮಂಜೂರಾತಿಗೆ ಸಲ್ಲಿಸಿದ್ದ ಪ್ರಸ್ತಾವನೆಗಳಿಗೂ ನಿಯಮ 37–ಎ (1) (ಎ) ಮತ್ತು 37 ಸಿ ಅನ್ವಯಿಸಬೇಕೇ?

l ಅಧಿಸೂಚನೆ ಹೊರಡಿಸುವುದಕ್ಕೆ ಮುನ್ನವೇ ಕೆಲವು ದಾಖಲಾತಿ ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಸಲ್ಲಿಸುವ ಷರತ್ತುಗಳೊಂದಿಗೆ ಬಿಬಿಎಂಪಿಯು ಶುಲ್ಕ ಕಟ್ಟಿಸಿಕೊಂಡಿದ್ದು, ಈಗ ನಕ್ಷೆ ಮಂಜೂರಾತಿ ನೀಡುವ ಪ್ರಮೇಯ ಎದುರಾದರೆ ಅವುಗಳಿಗೂ ಹೊಸ ನಿಯಮ ಅನ್ವಯವಾಗುತ್ತದೆಯೇ?

l ಅಧಿಸೂಚನೆ ಹೊರಡಿಸುವುದಕ್ಕೆ ಮುನ್ನವೇ ಶುಲ್ಕ ಕಟ್ಟಿಸಿಕೊಂಡು ನಕ್ಷೆ ಮಂಜೂರಾತಿ ನೀಡಿದ್ದು, ಆಂತರಿಕ ಬದಲಾವಣೆಗೆ ಪ್ರಮೇಯ ಎದುರಾದರೆ ಅವುಗಳಿಗೂ ಹೊಸ ನಿಯಮ ಅನ್ವಯವಾಗುತ್ತದೆಯೇ?

l ಅಧಿಸೂಚನೆ ಹೊರಡಿಸುವುದಕ್ಕೆ ಮುನ್ನವೇ ಶುಲ್ಕ ಪಾವತಿಸಿ ಕಟ್ಟಡ ನಕ್ಷೆ ಅನುಮೋದನೆ ಪಡೆದಿದ್ದು, ನಿವೇಶನದ ವಿಸ್ತೀರ್ಣಕ್ಕೆ ಸಂಬಂಧಿಸಿದ ಮಾರ್ಪಾಡುಗಳಿದ್ದರೆ ಅವುಗಳಿಗೂ ಹೊಸ ನಿಯಮ ಅನ್ವಯವಾಗುತ್ತದೆಯೇ?

l ನಕ್ಷೆ ಮಂಜೂರಾತಿ ಪಡೆದ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ ನೀಡುವಾಗ ಅದಕ್ಕೂ ಹೊಸ ನಿಯಮ ಪ್ರಕಾರ ಹೆಚ್ಚುವರಿ ಶುಲ್ಕ ಕಟ್ಟಿಸಿಕೊಳ್ಳಬೇಕೇ?

ನಿಯಮಗಳು 

l ಹೆಚ್ಚುವರಿ ನಿಯಮ 37ರ ಉಪನಿಯಮ ಎ 1 (ಎ) ಮತ್ತು ಬಿ ಪ್ರಕಾರ ಸಂಗ್ರಹಿಸುವ ಶುಲ್ಕವನ್ನು ಪ್ರತ್ಯೇಕ ಯೋಜನಾ ಪ್ರಾಧಿಕಾರದ ಖಾತೆಯಲ್ಲಿ ಠೇವಣಿ ಇಡಬೇಕು.

l ಈ ಮೊತ್ತದ ಮೂರನೇ ಒಂದರಷ್ಟನ್ನು ನಗರ ಮಹಾಯೋಜನೆಯಡಿ ಗೊತ್ತುಪಡಿಸಿದ ಉದ್ಯಾನ ಮತ್ತು ಆಟದ ಮೈದಾನ ಹಾಗೂ ರಸ್ತೆ ನಿರ್ಮಾಣಕ್ಕೆ ಜಾಗದ ಖರೀದಿಗೆ ಬಳಸಬೇಕು.

l ಒಟ್ಟು ಮೊತ್ತದ ಮೂರನೇ ಒಂದರಷ್ಟನ್ನು ಸಾಮಾನ್ಯ ಆಡಳಿತದ ವೆಚ್ಚಕ್ಕೆ ಸಾಮರ್ಥ್ಯ ವರ್ಧನೆಗೆ, ಕಚೇರಿಗೆ ನಿವೇಶನ ಖರೀದಿಸಲು, ಕಚೇರಿಯ ಕಟ್ಟಡ ನಿರ್ಮಿಸಲು, ನಗರ ಮಹಾಯೋಜನೆ ತಯಾರಿಗೆ ಮತ್ತು ಅದರ ಪರಿಶೀಲನೆಗೆ, ಅಧ್ಯಯನ ಕೈಗೊಳ್ಳಲು ಮತ್ತು ಸಮೀಕ್ಷೆಗಳನ್ನು ನಡೆಸಲು ಬಳಸಬಹುದು.

l ಮೂರನೇ ಒಂದರಷ್ಟು ಮೊತ್ತವನ್ನು ನಗರ ಯೋಜನಾ ಕಾರ್ಯಕ್ರಮಗಳೂ ಸೇರಿದಂತೆ ಯಾವುದಾದರೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಉಪಯೋಗಿಸಬಹುದು.

ಕೆರೆ ಅಭಿವೃದ್ಧಿಗಾಗಿ ಹೆಚ್ಚುವರಿ ಶುಲ್ಕ

ಕೆಟಿಸಿಪಿ ಕಾಯ್ದೆಯ ಸೆಕ್ಷನ್‌ 18 (1–ಎ)ಪ್ರಕಾರ ಬಡಾವಣೆ ಅಥವಾ ಕಟ್ಟಡ ನಿರ್ಮಾಣ ಮತ್ತು ಇತರ ಅಭಿವೃದ್ಧಿಯ ಮಂಜೂರಾತಿಗೆ ಶುಲ್ಕ ಪಡೆಯುವಾಗ ಕೆರೆಗಳ ಅಭಿವೃದ್ಧಿಗಾಗಿ ಪ್ರತಿ ಚದರ ಮೀಟರ್‌ ಭೂಮಿ/ ನಿವೇಶನಕ್ಕೆ ₹ 25 ‌ಹೆಚ್ಚುವರಿ ಶುಲ್ಕ ಹಾಕಲಾಗುತ್ತದೆ. ಈ ಮೊತ್ತವನ್ನು ನಗರದ ಕೆರೆ ಅಥವಾ ಜಲಕಾಯಗಳ ಅಭಿವೃದ್ದಿಗೆ, ಕೆರೆ ನಿರ್ಮಾಣಕ್ಕೆ, ಕಲ್ಯಾಣಿಗಳ ಮತ್ತು ಸಾರ್ವಜನಿಕ ಬಾವಿಗಳ ಪುನರುಜ್ಜೀವನಕ್ಕೆ ಮಾತ್ರ ಬಳಸಬೇಕು. ಈ ಮೊತ್ತವನ್ನು ಕೂಡಾ ಯೋಜನಾ ಪ್ರಾಧಿಕಾರದ ಪ್ರತ್ಯೇಕ ಖಾತೆಯಲ್ಲಿ ಠೇವಣಿ ಇಡಬೇಕು.

ಬಳಕೆಗೆ ಷರತ್ತು

ನಿಯಮ 37 ಸಿ ಪ್ರಕಾರ ವಿಧಿಸುವ ಜಮೀನಿನ ಅಥವಾ ಕಟ್ಟಡದ ಅಭಿವೃದ್ಧಿಗೆ ವಿಧಿಸುವ ಹೆಚ್ಚುವರಿ ಮೇಲ್ತೆರಿಗೆ
ಯನ್ನು ಸಂಬಂಧಪಟ್ಟ ವಿಭಾಗಕ್ಕೆ ರವಾನಿಸಬೇಕು. ಇದನ್ನು ಕ್ಷಿಪ್ರ ಸಾರಿಗೆ ವ್ಯವಸ್ಥೆ ಅಭಿವೃದ್ಧಿಗೆ, ವರ್ತುಲ ರಸ್ತೆ ನಿರ್ಮಾಣಕ್ಕೆ, ಕೊಳೆಗೇರಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿನಿಯೋಗಿಸಬಹುದು.

ಭಾರವಾಯಿತು ಹೆಚ್ಚುವರಿ ಶುಲ್ಕ

ಹೆಚ್ಚುವರಿ ತೆರಿಗೆಯನ್ನು ಮಾರುಕಟ್ಟೆ ಮೌಲ್ಯದ ಜೊತೆ ಜೋಡಿಸಲಾಗಿದೆ. ನಗರದಲ್ಲಿ ಜಮೀನಿಗೆ ಹೆಚ್ಚು ಮಾರುಕಟ್ಟೆ ಮೌಲ್ಯ ಇರುವ ಕಡೆಗಳಲ್ಲಿ ಕ‌ಟ್ಟಡ ನಿರ್ಮಿಸುವವರಿಗೆ ಮತ್ತು ಅಭಿವೃದ್ಧಿಪಡಿಸುವವರಿಗೆ ಈ ತೆರಿಗೆ ಭಾರವಾಗಿ ಪರಿಣಮಿಸಿದೆ. 20X30 ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸುವುದಕ್ಕೂ ಮೂರು ನಾಲ್ಕು ಲಕ್ಷ ರೂಪಾಯಿಗೂ ಅಧಿಕ ತೆರಿಗೆ ಪಾವತಿಸಬೇಕಾದ ಪ್ರಮೇಯ ಸೃಷ್ಟಿಯಾಗಿದೆ. ಇದು ತೀರಾ ದುಬಾರಿಯಾಯಿತು ಎಂದು ಅನೇಕರು ಬಿಬಿಎಂಪಿಗೆ ಅಳಲು ತೋಡಿಕೊಂಡಿದ್ದಾರೆ.

ಇಳಿಯಲಿದೆಯೇ ಹೆಚ್ಚುವರಿ ಶುಲ್ಕ ಹೊರೆ?

ನಗರದ ಬಿಜೆಪಿ ಶಾಸಕರ ಜೊತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ತೆರಿಗೆ ಹೆಚ್ಚಳದ ಬಗ್ಗೆಯೂ ಚರ್ಚೆ ನಡೆದಿದೆ. ಅಭಿವೃದ್ಧಿಗೆ ಮಂಜೂರಾತಿ ನೀಡುವಾಗ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾಪ ಕೈಬಿಡದಿದ್ದರೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹೊಡೆತ ಬೀಳಲಿದೆ ಎಂದೂ ಅನೇಕ ಶಾಸಕರು ಆತಂಕ ತೋಡಿಕೊಂಡಿದ್ದಾರೆ. ಹಾಗಾಗಿ ತೆರಿಗೆ ಹೊರೆ ಇಳಿಸುವ ಭರವಸೆಯನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು