ಮಂಗಳವಾರ, ಸೆಪ್ಟೆಂಬರ್ 29, 2020
21 °C

ಬೆಂಗಳೂರು ಗಲಭೆ ಪ್ರಕರಣ; ಬಿಜೆಪಿ–ಕಾಂಗ್ರೆಸ್‌ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ನಾಯಕರ ವಾಕ್ಸಮರ ತಾರಕಕ್ಕೆ ಏರಿದೆ.

‘ತಮ್ಮ ಪಕ್ಷದ ಒಬ್ಬ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದರೂ ಬೆಳಗ್ಗಿನವರೆಗೆ ಪ್ರತಿಕ್ರಿಯಿಸದೆ ಕಾಂಗ್ರೆಸ್‌ ಮೌನವಾಗಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಟ್ವೀಟ್‌ ಮಾಡಿ ಕಾಂಗ್ರೆಸ್‌ ನಾಯಕರ ಕಾಲೆಳೆದಿದ್ದಾರೆ. ‘ಅಂದರೆ ಗಲಭೆಗೆ ಸಂಪೂರ್ಣ ಬೆಂಬಲವೇ’ ಎಂದೂ ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿ, ‘ಈ ಘಟನೆಗೂ ಪಕ್ಷ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆರೋಪಿ ನವೀನ್, ಶಾಸಕರ ಸಂಬಂಧಿಯಾಗಿದ್ದರೂ ಆತ ಮೊದಲಿನಿಂದಲೂ ಬಿಜೆಪಿಯ ಕಟ್ಟಾ ಬೆಂಬಲಿಗ. ಅವನಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ' ಎಂದಿದ್ದಾರೆ.

‘ಇದು ಪೂರ್ವನಿಯೋಜಿತ ಕೃತ್ಯ. ಇದರ ಸತ್ಯಾಂಶ ಕಂಡುಕೊಳ್ಳಲು ಪಕ್ಷದಿಂದ ಸತ್ಯಶೋಧನಾ ಸಮಿತಿ ರಚಿಸಲಾಗಿದೆ’ ಎಂದಿದ್ದಾರೆ.

‘ಪ್ರಚೋದನಕಾರಿ ಹೇಳಿಕೆ ಪ್ರಕಟಿಸಿರುವ ನವೀನ್, ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ತಾನು ಬಿಜೆಪಿಗೆ ಮತ ಹಾಕಿದ್ದು, ಈ ಬಾರಿ ಬಿಜೆಪಿ ಜಯ ಗಳಿಸಿದೆ ಎಂದು ಬರೆದುಕೊಂಡಿದ್ದ. ಈತನ ಹೇಳಿಕೆ ಕುರಿತು ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದೇ ಅನಾಹುತಕ್ಕೆ ಕಾರಣ. ಶಾಸಕರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ರಕ್ಷಣೆ ನೀಡಲು ಆಗಲಿಲ್ಲ, ಪೊಲೀಸ್ ಠಾಣೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದ ಮೇಲೆ ಈ ಸರ್ಕಾರ ಏಕಿರಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಬಿಜೆಪಿಯವರು ಇದಕ್ಕೆ ರಾಜಕೀಯ ಬಣ್ಣ ಹಚ್ಚಿ ಲಾಭ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿ ಒಬ್ಬರು ಬಿಟ್ಟರೆ ಉಳಿದವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಯಾರು ಬೆಂಕಿಗೆ ತುಪ್ಪ, ಸೀಮೆಎಣ್ಣೆ, ಪೆಟ್ರೋಲ್ ಸುರಿಯುತ್ತಿದ್ದಾರೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ಇದೆಲ್ಲ ಬಿಜೆಪಿಯ ರಾಜಕೀಯ ಪಿತೂರಿ' ಎಂದೂ ಟೀಕಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘ಓಟು ಸೀಕ್ರೆಟ್‌. ನವೀನ್‌ ಕಳೆದ ಬಾರಿ ಬಿಜೆಪಿಗೆ ವೋಟು ಹಾಕಿದ್ದಾನೆ ಎಂದು ಶಿವಕುಮಾರ್‌ಗೆ ತಿಳಿದಿದ್ದು ಹೇಗೆ? ಸುಳ್ಳೇ ಇವರ ಮನೆ ದೇವರು. ಗಲಭೆ ಎಬ್ಬಿಸಿದವರು, ಬೆಂಕಿ ಹಾಕಿದವರ ಬಗ್ಗೆ ಮರುಕ. ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಬಹುದು’ ಎಂದೂ ಪ್ರಶ್ನಿಸಿದ್ದಾರೆ.

‘ಪೊಲೀಸರ ವೈಫಲ್ಯವೇ ಘಟನೆಗೆ ಕಾರಣ ಮತ್ತು ಇದಕ್ಕೆ ಪ್ರಚೋದನೆ ನೀಡಿದ ವ್ಯಕ್ತಿ ಬಿಜೆಪಿ ಬೆಂಬಲಿಗ ಎಂದು ಹೇಳಿರುವುದು ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.

‘ನೆಲದ ಕಾನೂನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳಬೇಕು. ಮುಂದೆಂದೂ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

‘ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂ ಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ, ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ’ ಎಂದಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಅಂದು ತನ್ವೀರ್‌, ಇಂದು ಅಖಂಡ ಶ್ರೀನಿವಾಸಮೂರ್ತಿ. ಕಾಂಗ್ರೆಸ್‌ ತಾನೇ ಗೊಬ್ಬರ ಹಾಕಿ ಪೋಷಿಸಿದ, ರಕ್ಷಿಸಿದ ಎಸ್‌ಡಿಪಿಐ, ಪಿಎಫ್‌ಐ ಎಂಬ ಒಂದೇ ಮುಖದ ವಿಧ್ವಂಸಕ ಸಂಘಟನೆಗಳು ಇಂದು ಕಾಂಗ್ರೆಸ್ ಶಾಸಕರನ್ನು ಬಲಿ ತೆಗೆದುಕೊಳ್ಳಬೇಕೆಂಬಷ್ಟರ ಮಟ್ಟಿಗೆ ಭಯೋತ್ಪಾದನೆ ಸೃಷ್ಟಿಸುತ್ತಿದ್ದರೂ ಕಾಂಗ್ರೆಸ್‌ ಇನ್ನೂ ಈ ಸಂಘಟನೆಗಳ ವಿರುದ್ಧ ಸೊಲ್ಲೆತ್ತಿಲ್ಲವೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಎರಡೂ ಧರ್ಮದವರು ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು’
ಘಟನೆಯನ್ನು ಕೋಮುಗಲಭೆಗೆ ಹೋಲಿಸಿ ಟ್ವೀಟ್‌ ಮಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಹಿಂದೂ– ಮುಸ್ಲಿಂ ಎರಡೂ ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕು. ಇಂತಹ ‌‌ಕೋಮು ಗಲಭೆಗಳಲ್ಲಿ ಸಾವು– ನೋವಿಗೆ ಈಡಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌– ಎಸ್‌ಡಿಪಿಐ ಜಿದ್ದಾಜಿದ್ದಿಗೆ ನಲುಗಿದ ಪುಲಿಕೇಶಿನಗರ
ಬೆಂಗಳೂರು:
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತ ಬ್ಯಾಂಕ್‌ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್‌ ಮತ್ತು ಎಸ್‌ಡಿಪಿಐ ಪಕ್ಷಗಳ ಜಿದ್ದಾಜಿದ್ದಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಸಹಿಸದ ಕಾಂಗ್ರೆಸ್‌ನೊಳಗಿನ ಕೆಲವರ ಪಿತೂರಿ ಈ ಗಲಭೆಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ.

ಮುಸ್ಲಿಂ, ಕ್ರೈಸ್ತರು ಮತ್ತು ತಮಿಳು ಭಾಷಿಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರವು ಮೀಸಲು ಕ್ಷೇತ್ರ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಆದಾಗ ಈ ವಿಧಾನಸಭಾ ಕ್ಷೇತ್ರ ಸೃಷ್ಟಿಯಾಯಿತು. 2008 ರಲ್ಲಿ ಕಾಂಗ್ರೆಸ್‌ನಿಂದ
ಬಿ. ಪ್ರಸನ್ನಕುಮಾರ್‌ ಗೆದ್ದಿದ್ದರು. ಆ ಬಳಿಕ ನಡೆದ ಎರಡೂ ಚುನಾವಣೆಗಳಲ್ಲಿ ಅಖಂಡ ಶ್ರೀನಿವಾಸಮೂರ್ತಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಅವರು, 2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಜೆಡಿಎಸ್‌ನಲ್ಲಿ ಇದ್ದಾಗ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರಲ್ಲಿ ಅಖಂಡ ಶ್ರೀನಿವಾಸಮೂರ್ತಿಯೂ ಒಬ್ಬರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆದರೆ, ಕ್ಷೇತ್ರದಲ್ಲಿ ಪಕ್ಷದ ಮೂಲ ಕಾರ್ಯಕರ್ತರು ಮತ್ತು ನಾಯಕ ರಲ್ಲಿ ಇವರ ಬಗ್ಗೆ ಅಸಮಾಧಾನವೂ ಇತ್ತು.

**
ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಶೀಘ್ರವೇ ಪೊಲೀಸರು ಎಲ್ಲ ಅಪರಾಧಿಗಳನ್ನು ಬಂಧಿಸುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

**
ಕಾಂಗ್ರೆಸ್ಸಿಗರೇ ಎಲ್ಲಿಯವರೆಗೆ ನಿಮ್ಮ ಓಲೈಕೆ. ಕಣ್ಣಿದ್ದೂ ಕುರುಡರಂತೆ ಮತಾಂಧರ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದರೆ ಕಾಂಗ್ರೆಸ್‌ ಸರ್ವನಾಶ ಖಂಡಿತ.
-ನಳೀನ್‌ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

 **
ಎಸ್‌ಡಿಪಿಐ, ಕೆಎಫ್‌ಡಿಯ 1600 ಪುಂಡರ ವಿರುದ್ಧದ 175 ಕ್ರಿಮಿನಲ್ ಪ್ರಕರಣಗಳನ್ನು 2015ರಲ್ಲಿ ವಾಪಸು ಪಡೆದುಕೊಂಡಿದ್ದು ತಪ್ಪು ಅಂತ ಈಗಲಾದರೂ ಅನಿಸುತ್ತಿದೆಯೇ ಸಿದ್ದರಾಮಯ್ಯನವರೇ?
ಪ್ರತಾಪ್‌ ಸಿಂಹ, ಸಂಸದ

 **
ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ. ಪ್ರಚೋದಿಸುವುದು ತಪ್ಪು. ಪ್ರಚೋದಿತರಾಗಿ ಗಲಾಟೆ ಮಾಡುವುದೂ ತಪ್ಪು. ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು.
-ಎಚ್.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

 **
ಎಸ್‌ಡಿಪಿಐ ಸಂಘಟನೆ ಬೆಳೆಸಿದವರು ಯಾರು, ರಕ್ಷಣೆ ಕೊಟ್ಟಿದ್ದು ಯಾವ ಪಕ್ಷ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಎಸ್‌ಡಿಪಿಐ ಸೇರಿದಂತೆ ಶಾಂತಿ ಕದಡುವ ಎಲ್ಲ ಸಂಘಟನೆಗಳನ್ನೂ ನಿಷೇಧಿಸಬೇಕು.
-ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು