ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಸದಸ್ಯರ ಅನರ್ಹತೆಗೆ ಆಗ್ರಹ: ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲು ಮನವಿ

Last Updated 28 ಡಿಸೆಂಬರ್ 2019, 22:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆಗೆ ಒಂದೆರಡು ದಿನ ಬಾಕಿ ಇರುವಂತೆಯೇ ಕಾಂಗ್ರೆಸ್‌ನಿಂದ ಆಯ್ಕೆಯಾದ 14 ಸದಸ್ಯರನ್ನು ಹಾಗೂ ಜೆಡಿಎಸ್‌ನಿಂದ ಆಯ್ಕೆಯಾದ ನಾಲ್ವರು ಸದಸ್ಯರನ್ನು ಅನರ್ಹಗೊಳಿಸುವಂತೆ ಆ ಪಕ್ಷಗಳು ಆಯುಕ್ತರಿಗೆ ಮನವಿ ಸಲ್ಲಿಸಿವೆ.

ಸದಸ್ಯರ ಅನರ್ಹತೆ ವಿಚಾರ ಅಂತಿಮಗೊಳ್ಳುವವರೆಗೆ ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಬೇಕು ಎಂದು ಎರಡೂ ಪಕ್ಷಗಳು ಒತ್ತಾಯಿಸಿವೆ.

‘ನಮ್ಮ ಪಕ್ಷದ ಚಿಹ್ನೆಯಿಂದ ಗೆದ್ದ 14 ಮಂದಿ ಪಾಲಿಕೆ ಸದಸ್ಯರು ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿ
ದ್ದಾರೆ. ವಿಧಾನಸಭಾ ಉಪಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಪಕ್ಷದ ಸಭೆಗಳಲ್ಲೂ ಭಾಗವಹಿಸದೇ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಅವರನ್ನುಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ –1987ರ ಕಲಂ 3(1) (ಬಿ) ಅಡಿಯಲ್ಲಿ ಅನರ್ಹಗೊಳಿಸಬೇಕು’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಅವರು ಬಿಬಿಎಂಪಿ ಆಯುಕ್ತರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಮೇಯರ್‌ ಮತ್ತು ಉಪಮೇಯರ್‌ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ ಹಾಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಜೆಡಿಎಸ್‌ನ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಬೇಕು. ಅನರ್ಹತೆ ವಿಚಾರ ಅಂತಿಮಗೊಳ್ಳುವವರೆಗೂ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವುದು ಬೇಡ’ ಎಂದು ಒತ್ತಾಯಿಸಿಪಾಲಿಕೆ ಆಯುಕ್ತರಿಗೆ ಜೆಡಿಎಸ್‌ನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಶನಿವಾರ ಮನವಿ ಸಲ್ಲಿಸಿದ್ದಾರೆ.

‘ಪಕ್ಷದ ವಿಪ್‌ ಉಲ್ಲಂಘಿಸಿದವರನ್ನು, ಪಕ್ಷದ ನಿರ್ದೇಶನವನ್ನು ಮೀರಿದವರನ್ನು ಅಥವಾ ಚುನಾವಣಾ ಸಭೆಗಳಿಂದ ದೂರ ಉಳಿದವರನ್ನು ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ –1987ರ ಕಲಂ–3(1) (ಬಿ) ಮತ್ತು 4 ಅಡಿಯಲ್ಲಿ ಅನರ್ಹಗೊಳಿಸಲು ಅವಕಾಶ ಇದೆ. ಆದರೆ, ಈ ಕುರಿತು ಪಾಲಿಕೆ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಈ ಕುರಿತ ಅರ್ಜಿಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾದವರು ಪ್ರಾದೇಶಿಕ ಆಯುಕ್ತರು. ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳು ಬಂದ 24 ಗಂಟೆಯೊಳಗೆ ಪಾಲಿಕೆಯು ಅದನ್ನು ಪ್ರಾದೇಶಿಕ ಆಯುಕ್ತರಿಗೆ ತಲುಪಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಾಯಿ ಸಮಿತಿ ಚುನಾವಣೆ ಇದೇ 30ರಂದು ನಡೆಯಲಿದೆ. ಅದರ ಮತದಾರರ ಪಟ್ಟಿಯನ್ನೂ ಈಗಾಗಲೇ ಅಂತಿಮಗೊಳಿಸಲಾಗಿದೆ. ಹಾಗಾಗಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಬೇಡಿಕೆಯಂತೆ ಚುನಾವಣೆ ಮುಂದೂಡುವರೇ ಎಂಬುದು ಕುತೂಹಲ ಕೆರಳಿಸಿದೆ. ಡಿ.4 ರಂದು ನಿಗದಿಯಾಗಿದ್ದ ಚುನಾವಣೆಯನ್ನು ಯಾವುದೇ ಪಾಲಿಕೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣಕ್ಕೆ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT