ಸೋಮವಾರ, ಆಗಸ್ಟ್ 19, 2019
22 °C
₹5 ಸಾವಿರ ಕೋಟಿ ನೆರವು ನೀಡಲು ಕಾಂಗ್ರೆಸ್ ಆಗ್ರಹ

‘ಅತೃಪ್ತರಿಗೆ ವಿಶೇಷ ವಿಮಾನ: ಸಂತ್ರಸ್ತರಿಗೆ ಹೆಲಿಕಾಪ್ಟರೂ ಇಲ್ಲವೆ?’

Published:
Updated:

ಬೆಂಗಳೂರು: ರಾಜ್ಯದಲ್ಲಿ ಜನರು ಪ್ರವಾಹದಿಂದ ತತ್ತರಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

‘ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಿದವರು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್‌ ವ್ಯವಸ್ಥೆ ಕೂಡಾ ಮಾಡಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮೂಲಕ ಚಾಟಿ ಬೀಸಿದ್ದಾರೆ.

‘ಅತೃಪ್ತ ಶಾಸಕರು ಮುಂಬೈಯಲ್ಲಿ ಉಳಿಯಲು ಪಂಚತಾರಾ ಹೋಟೆಲ್‌ ವ್ಯವಸ್ಥೆ ಮಾಡಿದವರು, ಬಡಜನರಿಗೆ ಗಂಜಿ ಕೇಂದ್ರವನ್ನೂ ಸ್ಥಾಪಿಸಿಲ್ಲ’ ಎಂದು ಟೀಕಿಸಿದ್ದಾರೆ.

₹5 ಸಾವಿರ ಕೋಟಿಗೆ ಆಗ್ರಹ: ವಾರದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕೇಂದ್ರ ತಂಡ ಭೇಟಿನೀಡಿಲ್ಲ. ರಾಜ್ಯದಲ್ಲಿ ಸಚಿವರು ಇಲ್ಲದೆ ಪರಿಸ್ಥಿತಿ ನಿಭಾಯಿಸುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಷ್ಟಕರವಾಗಿದೆ. ಪ್ರಧಾನಿ ಮಧ್ಯೆ ಪ್ರವೇಶಿಸಿ ಅಗತ್ಯ ನೆರವು ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ನೆರೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ‘ರಾಷ್ಟ್ರೀಯ ವಿಪ್ಪತ್ತು’ ಎಂದು ಘೋಷಿಸಿ, ತಕ್ಷಣ ₹5 ಸಾವಿರ ಕೋಟಿ ನೆರವು ಬಿಡುಗಡೆ ಮಾಡಬೇಕು. ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿರುವುದರಿಂದ ತಕ್ಷಣವೇ ಕೇಂದ್ರ ಸರ್ಕಾರ ನೆರವಿಗೆ ನಿಲ್ಲಬೇಕು ಎಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬಿ.ಎಸ್.ಯಡಿಯೂರಪ್ಪ ಅವರು ಈವರೆಗೂ ವಿರೋಧ ಪಕ್ಷದ ನಾಯಕರಾಗಿ ಸರಿಯಾಗಿ ಕೆಲಸ ಮಾಡಿಲ್ಲ. ಸರ್ಕಾರ ಬೀಳಿಸುವಲ್ಲಿ ನಿರತರಾಗಿದ್ದರು. ಈಗ ಮುಖ್ಯಮಂತ್ರಿಯಾದ ನಂತರವೂ ಕೆಲಸ ಮಾಡುತ್ತಿಲ್ಲ. ಸಚಿವ ಸಂಪುಟವೂ ಇಲ್ಲವಾಗಿದೆ. ಈಗ ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ’ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಶಾಸಕರ ವೇತನ

ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಕಾಂಗ್ರೆಸ್ ಸಂಸದರು, ಶಾಸಕರು ತಮ್ಮ ಒಂದು ತಿಂಗಳ ವೇತನ ನೀಡಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಪ್ರಕಟಿಸಿದರು.

ಕಾಂಗ್ರೆಸ್ ಪಕ್ಷದ ವತಿಯಿಂದಲೂ ಹಣ ಸಂಗ್ರಹಿಸಿ ನೆರವು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

Post Comments (+)