ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದಿಕ ಪ್ರೇರಿತ ವಚನಗಳ ಪರಿಷ್ಕರಣೆ ಅಗತ್ಯ: ಶಶಿಕಾಂತ್ ಪಟ್ಟಣ್

‘ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹೆಜ್ಜೆ ಗುರುತುಗಳು’ ಗೋಷ್ಠಿ ಯಲ್ಲಿ ಶಶಿಕಾಂತ್ ಪಟ್ಟಣ್ ಒತ್ತಾಯ
Published 25 ಫೆಬ್ರುವರಿ 2024, 15:41 IST
Last Updated 25 ಫೆಬ್ರುವರಿ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ‘ವಚನಗಳಲ್ಲಿ ನುಸುಳಿರುವ ವೈದಿಕ ಪ್ರೇರಿತ ವಿಚಾರಗಳನ್ನು ತೆಗೆಯುವುದಕ್ಕಾಗಿ ಕೆಲವು ವಚನಗಳ ಪರಿಷ್ಕರಣೆ ಅಗತ್ಯವಾಗಿದೆ’ ಎಂದು ಪ್ರವರ್ ರೂರಲ್‌ ಕಾಲೇಜ್‌ ಫಾರ್ಮಸಿಯ ಪ್ರಾಂಶುಪಾಲ ಶಶಿಕಾಂತ್ ಆರ್. ಪಟ್ಟಣ್ ಒತ್ತಾಯಿಸಿದರು.

ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ ಭಾನುವಾರ ನಡೆದ ‘ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹೆಜ್ಜೆ ಗುರುತುಗಳು’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ವಚನಗಳ ಪರಿಷ್ಕರಣೆಗೆ ಒಂದು ಆಯೋಗ ರಚಿಸಬೇಕು. ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ವಚನಗಳನ್ನು ಭಾಷಾಂತರ ಮಾಡುವುದರ ಮೂಲಕ ಬಸವಣ್ಣ ಮತ್ತು ಶರಣರ ವಿಚಾರಧಾರೆಗಳನ್ನು ಇಡೀ ವಿಶ್ವಕ್ಕೆ ಪಸರಿಸುವ ಕೆಲಸ ಮಾಡಬೇಕು’ ಎಂದರು.

‘ಲಿಂಗಾಯತ ಅಥವಾ ಬಸವಾದಿ ಪರಂಪರೆಯ ಚಳವಳಿಯು ಕೇಸರೀಕರಣವಾಗುತ್ತಿದೆ. ಬಸವೋತ್ತರ ಕಾಲದಲ್ಲಿ ಮತ್ತೆ ವೈದಿಕ ಆಚರಣೆಗಳು ಮುನ್ನೆಲೆಗೆ ಬರುತ್ತಿವೆ. ಬಸವಣ್ಣನವರು ಒಬ್ಬ ನಾಸ್ತಿಕ, ಸಮಾಜವಾದಿ ಆಗಿದ್ದರು. ಪೌರೋಹಿತ್ಯವನ್ನು ಮುಂಬಾಗಿಲಿನಿಂದ ಒದ್ದು ಓಡಿಸಿದ್ದರು. ಆದರೆ ಅದೇ ಪೌರೋಹಿತ್ಯ ಹಿಂಬಾಗಿಲಿನಿಂದ ಒಳಗೆ ಪ್ರವೇಶಿಸುತ್ತಿದೆ. ಬಸವಣ್ಣನವರು ಒಪ್ಪದ ಸಿದ್ಧಾಂತವನ್ನು ಅಪ್ಪಿಕೊಂಡು, ಅವರು ಎತ್ತಿ ಹಿಡಿದಿದ್ದ ಸಿದ್ಧಾಂತವನ್ನು ಇಂದು ಸಮಾಧಿ ಮಾಡಲಾಗುತ್ತಿದೆ’ ಎಂದು ಬೇಸರಿಸಿದರು. 

ಲೇಖಕ ಪುರುಷೋತ್ತಮ ಬಿಳಿಮಲೆ, ‘2022ರಲ್ಲಿ ಜನಗಣತಿ ಆಗಿದ್ದರೆ ರಾಜ್ಯದಲ್ಲಿರುವ 28 ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದವು. ಇಡೀ ದಕ್ಷಿಣ ಭಾರತದಲ್ಲಿ 170 ಲೋಕಸಭೆ ಕ್ಷೇತ್ರಗಳಿವೆ. ಆದರೆ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಒಟ್ಟು ಸಂಸತ್ ಕ್ಷೇತ್ರಗಳು ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆಗೆ ಸಮಾನವಾಗುತ್ತವೆ. ಆದ್ದರಿಂದ ಅಲ್ಲಿನ ಸಂಸದರಿಗೆ ಸಿಗುವ ಗೌರವ ಈ ಭಾಗದವರಿಗೂ ಸಿಗಬೇಕು. ಇದು ಒಕ್ಕೂಟ ವ್ಯವಸ್ಥೆಯ ಉದ್ದೇಶ. ಇಲ್ಲದಿದ್ದರೆ, ಪ್ರಸ್ತುತ ದೇಶದ ಈಶಾನ್ಯ ರಾಜ್ಯಗಳಲ್ಲಿ ಏನಾಗುತ್ತಿದೆಯೂ ಅದು ಮುಂದಿನ ಹತ್ತು ವರ್ಷಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲೂ  ಆಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದಲ್ಲಿರುವ 19,569 ಮಾತೃಭಾಷೆಗಳಿಗೆ ಡಾ.ಬಿ.ಆರ್. ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವೇ ವ್ಯಾಕರಣವಾಗಿದೆ. ದೇಶದಲ್ಲಿ ಒಂದು ಕಥೆ ಸೃಷ್ಟಿಯಾದರೆ ಅದು ಪ್ರಾದೇಶಿಕವಾಗಿ ಹೇಗೆ ಬೇಕೋ ಆ ರೀತಿಯಾಗಿ ಮರುಸೃಷ್ಟಿ ಆಗುತ್ತದೆ. ಇದೇ ಒಕ್ಕೂಟ ವ್ಯವಸ್ಥೆಯ ಉದ್ದೇಶ’ ಎಂದು ಹೇಳಿದರು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿ ಎಲ್.ಎನ್. ಮುಕುಂದರಾಜ್, ಪ್ರಾಧ್ಯಾಪಕ ಚಿನ್ನಸ್ವಾಮಿ ಸೊಸಲೆ ಭಾಗವಹಿಸಿದ್ದರು.

ಮಹಿಳೆಯರು ದಲಿತರು ದಮನಿ‌ತರ ಪರವಾಗಿ ಯಾರ್‍ಯಾರು ಮಾತನಾಡಿದ್ದಾರೂ ಅವರೆಲ್ಲರನ್ನು ದೇಶದಿಂದ ಓಡಿಸಲಾಗಿದೆ ಅಥವಾ ನಿರ್ನಾಮ ಮಾಡಲಾಗಿದೆ.
ಎಲ್.ಎನ್. ಮುಕುಂದರಾಜ್ ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT